ಚಿತ್ರದುರ್ಗ:
ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವ ಕೋಮುವಾದಿ ಬಿಜೆಪಿ.ಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ರವೀಂದ್ರ ದಳವಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಸೂಚಿಸಿದರು.
ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ವಿಭಾಗದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ಅನೇಕ ಹುಸಿ ಭರವಸೆಗಳನ್ನು ನೀಡಿ ಪ್ರಧಾನಿಯಾದ ನರೇಂದ್ರಮೋದಿ ಇದುವರೆವಿಗೂ ಯಾವ ಭರವಸೆಯನ್ನು ಈಡೇರಿಸಿಲ್ಲ. ಮಹಿಳೆಯರ ಮೇಲೆ ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಕಾಂಗ್ರೆಸ್‍ನಿಂದ ಮಾತ್ರ ಸಂವಿಧಾನ ರಕ್ಷಿಸಲು ಸಾಧ್ಯ.
ವಿದೇಶಗಳಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಹೇಳಿ ನಂಬಿಸಿರುವ ಮೋದಿಯಿಂದ ದೇಶಕ್ಕೆ ಯಾವ ಕೊಡುಗೆಯೂ ಇಲ್ಲ ಎನ್ನುವುದನ್ನು ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್.ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿ ಎಂದು ಮನವಿ ಮಾಡಿದರು.
ಆರ್.ಎಸ್.ಎಸ್.ನವರು ಜಂತರ್‍ಮಂತರ್‍ನಲ್ಲಿ ಸಂವಿಧಾನ ಸುಟ್ಟು ಅಂಬೇಡ್ಕರ್ ಆಶಯಗಳನ್ನು ಮಣ್ಣುಪಾಲು ಮಾಡಿದ್ದಾರೆ. ಜಾತೀಯತೆ ನಿರ್ಮೂಲನೆಗೊಳಿಸಿ ಎಲ್ಲರಿಗೂ ಸಮಾನತೆ ನೀಡಬೇಕೆನ್ನುವುದು ಅಂಬೇಡ್ಕರ್ ಕನಸಾಗಿತ್ತು. ರಫೇಲ್ ಹಗರಣದಲ್ಲಿ ಭಾಗಿಯಾಗಿರುವ ಮೋದಿ ಅನಿಲ್‍ಅಂಬಾನಿ, ನೀರವ್‍ಮೋದಿ, ಮಲ್ಯ ಇವರುಗಳ ರಕ್ಷಣೆಗೆ ನಿಂತಿದ್ದಾರೆ. ಇಂತಹ ದೇಶದ್ರೋಹದ ಬಿಜೆಪಿ.ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಎಫ್.ಹಚ್.ಜಕ್ಕಪ್ಪ ಮಾತನಾಡಿ ಐದು ವರ್ಷ ಸಮಾಜ ಕಲ್ಯಾಣ ಸಚಿವರಾಗಿ ಎಸ್.ಸಿ./ಎಸ್.ಟಿ.ಗಳ ಅಭಿವೃದ್ದಿಗೆ ಯಾವುದೇ ಜನಪರ ಯೋಜನೆಗಳನ್ನು ನೀಡದ ಅನೇಕಲ್ ನಾರಾಯಣಸ್ವಾಮಿಯನ್ನು ಬಿಜೆಪಿ.ಯವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಐತಿಹಾಸಿಕ ಚಿತ್ರದುರ್ಗದ ಏಳುಸುತ್ತಿನ ಭದ್ರವಾದ ಕೋಟೆಯ ನಡುವೆ ಇರುವ ಮತದಾರರನ್ನು ಖರೀಧಿ ಮಾಡಲು ಆಗವುದಿಲ್ಲ. ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಒನಕೆ ಓಬವ್ವನಂತ ಗಟ್ಟಿಗಿತ್ತಿ ಮಹಿಳೆಯರು ಇಲ್ಲಿದ್ದಾರೆ ಎನ್ನುವುದನ್ನು ಮೊದಲು ಬಿಜೆಪಿ. ತಿಳಿದುಕೊಳ್ಳಲಿ ಎಂದರು.
ಬಿಜೆಪಿ.ಯವರು ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವುದರಿಂದ ಈ ಚುನಾವಣೆ ಒಂದು ರೀತಿಯ ಸಮರವಾಗಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ.ಗೆದ್ದರೆ ಬೇರೆ ಸಂವಿಧಾನ ರಚಿಸಲು ಡ್ರಾಫ್ಟ್ ಸಿದ್ದಪಡಿಸಿಟ್ಟುಕೊಂಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಗೆಲ್ಲಲು ಅವಕಾಶ ಕೊಡಬೇಡಿ. ಸಂಸದ ಬಿ.ಎನ್.ಚಂದ್ರಪ್ಪ ಹಾಗೂ ಹೆಚ್.ಆಂಜನೇಯ ಜೋಡಿಯಾಗಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನವರಿಗೆ ಮತ ಕೊಡಿ ಬೇಜವಾಬ್ದಾರಿ ಮಾಡಿದರೆ ಕೋಮುವಾದಿಗಳಿಗೆ ಅನುಕೂಲವಾಗುತ್ತದೆ ಎಂದು ಕಾರ್ಯಕರ್ತರನ್ನು ಜಾಗೃತಿಗೊಳಿಸಿದರು.
ಕೆ.ಪಿ.ಸಿ.ಸಿ.ಕಾರ್ಯದರ್ಶಿ ಎಂ.ಜಯಣ್ಣ ಮಾತನಾಡುತ್ತ ಅಂಬೇಡ್ಕರ್ ಸಂವಿಧಾನದ ಆಶಯದ ಮೇಲೆ ದೇಶ ನಿಂತಿರುವುದು ಕೋಮುವಾದಿ ಬಿಜೆಪಿ.ಯವರಿಗೆ ಇಷ್ಟವಿಲ್ಲ. ದೇಶದಲ್ಲಿ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ದೊಡ್ಡ ಹೋರಾಟ ನಡೆದಿದೆ. ಧರ್ಮ, ಜಾತಿಗಳ ನಡುವೆ ಗಲಭೆ ಉಂಟು ಮಾಡಿ ದೇಶದಲ್ಲಿ ಅಶಾಂತಿಯುಂಟು ಮಾಡುವುದೇ ಬಿಜೆಪಿ.ಕೆಲಸ. ಮನುವಾದದ ಸಂವಿಧಾನ ದೇಶದಲ್ಲಿ ತರಲು ಹೊರಟಿರುವ ಬಿಜೆಪಿ. ಅಧಿಕಾರಕ್ಕೆ ಬರಲು ಬಿಡಬೇಡಿ. ಈ ಚುನಾವಣೆಯನ್ನು ದೊಡ್ಡ ಆಂದೋಲನದ ರೀತಿಯಲ್ಲಿ ಎದುರಿಸಿ ಕಾಂಗ್ರೆಸ್‍ನ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಎಸ್.ಸಿ.ವಿಭಾಗದ ರಾಜ್ಯ ಸಂಚಾಲಕರು ಹಾಗೂ ಜಿಲ್ಲಾ ಉಸ್ತುವಾರಿಗಳಾದ ಸಿ.ಶಿವಕುಮಾರ್, ಸಿ.ವಿ.ಶ್ರೀಧರ್, ಆಡಳಿತ ಮತ್ತು ಉಸ್ತುವಾರಿ ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಡಿ.ರಾಜಪ್ಪ, ಕೆ.ಪಿ.ಸಿ.ಸಿ. ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲೇಶ್‍ಹಿರೇಹಳ್ಳಿ, ರವಿಕುಮಾರ್, ಮಲ್ಲೇಶಪ್ಪ, ನಾಗರಾಜ್‍ಕಟ್ಟೆ, ನಾಗರಾಜ್‍ನಾಯ್ಕ, ತಿಮ್ಮಯ್ಯ, ಚಿದಾನಂದಮೂರ್ತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಸೇರಿದಂತೆ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.