ಚಳ್ಳಕೆರೆ
ರಾಷ್ಟ್ರದ ಇತಿಹಾಸದ ಅನೇಕ ಘಟನೆಗಳನ್ನು ಮೆಲಕು ಹಾಕಲು ಕೇವಲ ಚರಿತ್ರೆಯನ್ನು ಓದುವ ಜೊತೆಗೆ ಅಂದಿನ ಘಟನಾವಳಿಗಳ ಚಿತ್ರಗಳನ್ನು ನೋಡಿದರೆ ಮಾತ್ರ ಸಂಪೂರ್ಣ ಮಾಹಿತಿ ತಿಳಿಯುವುದು. ಕಳೆದ ನೂರಾರು ವರ್ಷಗಳಿಂದ ದೇಶದ ಎಲ್ಲಾ ಘಟನೆಗಳಿಗೆ ಮತ್ತು ಪರಿಪೂರ್ಣ ಬೆಳವಣಿಗೆಗೆ ಉತ್ತಮ ಸಹಕಾರ ನೀಡಿರುವುದೇ ಛಾಯಾಗ್ರಹಣ. ಇಂದು ಛಾಯಾಗ್ರಹಣ ಎಲ್ಲರ ಮನೆ ಮತ್ತು ಮನಸ್ಸಿನಲ್ಲಿ ಆಳಾಗಿ ಬೇರೂರಿದೆ ಎಂದು ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ರಾಜ್ಯ ಕಾರ್ಯದರ್ಶಿ ಪರಮೇಶ್ ತಿಳಿಸಿದರು.
ಅವರು, ಬುಧವಾರ ಇಲ್ಲಿನ ರೋಟರಿ ಬಾಲಭವನದಲ್ಲಿ ಚಿತ್ರದುರ್ಗ ಜಿಲ್ಲಾ ಛಾಯಾಗ್ರಾಹಕರ ಸಂಘ, ಚಳ್ಳಕೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 179ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 1854ರಲ್ಲಿ ರಾಷ್ಟ್ರದಲ್ಲಿ ಛಾಯಾಗ್ರಹಣದ ಯುಗ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಪಿನ್‍ಹೋಲ್ ಮೂಲಕ ಬೆಳಕನ್ನು ಹರಿಸಿ ಕೇಂದ್ರಿಕೃತ ಬೆಳಕಿನ ಗ್ರಾಫ್‍ನ್ನು ಚಿತ್ರದ ಮೂಲಕ ಬಿಡಿಸುವ ಕಲೆಯೇ ಚಿತ್ರಕಲೆಯಾಗಿ ನಂತರ ಛಾಯಾಗ್ರಹಣವಾಯಿತು.
ಛಾಯಾಗ್ರಹಣಕ್ಕೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಮನ್ನಣೆ ಇದ್ದು ಈ ಮನ್ನಣೆಯನ್ನು ಉಳಿಸಿ ಬೆಳೆಸುವತ್ತ ಎಲ್ಲಾ ಛಾಯಾಗ್ರಹಕರು ಕಾರ್ಯನಿರ್ವಹಿಸಬೇಕು. ಛಾಯಾಗ್ರಾಹಕರ ಮೇಲೆ ಸಮಾಜ ಮತ್ತು ಸಾರ್ವಜನಿಕರು ಇಟ್ಟಿರುವ ಅಪಾರವಾದ ವಿಶ್ವಾಸ ಹಾಗೂ ಗೌರವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು. ಛಾಯಾಗ್ರಹಣ ರಾಷ್ಟ್ರ ಮಟ್ಟದಲ್ಲಿ ಬೃಹತ್ ಉದ್ಯಮವಾಗಿ ಬೆಳವಣಿಗೆಯಾಗುತ್ತಿದ್ದು, ಛಾಯಾಗ್ರಾಹಕರೂ ಸಹ ಚಾಣಾಕ್ಷ ತನದಿಂದ ಕಾರ್ಯನಿರ್ವಹಿಸಬೇಕು. ನೂತನ ಎಲ್ಲಾ ವಿಧದ ತಾಂತ್ರಿಕತೆಯನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಪನ್ಯಾಸ ನೀಡಿದ ಉಪಾಧ್ಯಕ್ಷ ಕೆ.ನಾಗೇಶ್, ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದಂದು ಛಾಯಾಗ್ರಾಹಕರ 179ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆಯಾಗುತ್ತಿರುವುದು ಸಂತಸ ತಂದಿದೆ. ಕಳೆದ ನೂರಾರು ವರ್ಷಗಳಿಂದ ಛಾಯಾಗ್ರಹಣ
ದೇಶದ ಜನರ ಬದುಕಿಗೆ ತನ್ನದೇಯಾದ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ಏನೇ ಆಧುನಿಕತೆ ಬರಲಿ ಆದರೆ ಛಾಯಾಗ್ರಹಣ ತನ್ನ ಅಂತಸ್ತನ್ನು ಕಳೆದುಕೊಂಡಿಲ್ಲ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಹಂತದಲ್ಲೂ ಛಾಯಾಗ್ರಹಣದ ಅವಶ್ಯಕತೆ ಹೆಚ್ಚಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಎಲ್ಲಾ ಛಾಯಾಗ್ರಹಕರಿಗೆ ಸರ್ಕಾರದ ಮಟ್ಟದಲ್ಲಿ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ರಾಜ್ಯ ವ್ಯಾಪಿ ಪ್ರವಾಸ ಕೈಗೊಂಡು ಸಂಘಟನೆಯಲ್ಲಿ ತೊಡಗಲಾಗಿದೆ. ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಮ್ಮ ಸಂಘ ಅಸ್ಥಿತ್ವದಲ್ಲಿದ್ದು, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.
ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚು ಛಾಯಾಗ್ರಹಕರು ಈ ಉದ್ಯೋಗದಲ್ಲಿ ತೊಡಗಿದ್ದಾರೆ. 10ಕ್ಕೂ ಹೆಚ್ಚು ವಿಶ್ವಮಟ್ಟದ ಛಾಯಾಚಿತ್ರಗಳಿಗೆ ಬಹುಮಾನ ಲಭಿಸಿದೆ. ಈ ಕಲೆಯನ್ನು ಎಲ್ಲರೂ ಗೌರವದಿಂದ ಕಾಣಬೇಕು. ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ರಾಜ್ಯ ಸಂಘ ನಿರಂತರ ಹೋರಾಟ ನಡೆಸಿದೆ. ಛಾಯಾಗ್ರಹಣ ಅಕಾಡೆಮೆ ಸ್ಥಾಪನೆ ಮತ್ತು ಕಲ್ಯಾಣ ನಿಧಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಪಡಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ನಿರ್ದೇಶಕ ಉಮಾಶಂಕರ್, ಕೆ.ರಾಮಣ್ಣ, ಶಿಕಾರಿ ಶಂಬು, ರಾಘವೇಂದ್ರ, ದಿನೇಶ್, ಮಂಜುನಾಯ್ಕ, ಸಂಪತ್‍ಕುಮಾರ್, ರವಿಕುಮಾರ್ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಛಾಯಾಗ್ರಾಹಕರ ಅಧ್ಯಕ್ಷ ಟಿ.ರವೀಂದ್ರನಾಥ ಮಾತನಾಡಿ, ತಾಲ್ಲೂಕಿನಲ್ಲಿ ಛಾಯಾಗ್ರಹಣ ಸಂಘಕ್ಕೆ 22ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ನೇಮಿಸಿ ಉತ್ತಮ ಸಂಘಟನೆಯನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ಸಂಘಟನೆಗೆ ಇನ್ನೂ ಹೆಚ್ಚು ಆದ್ಯತೆ ನೀಡಲಾಗುವುದು. ಛಾಯಾಗ್ರಹಣ ಛಾಯಾಗ್ರಹಕರ ಬದುಕಿನ ಉಸಿರಾಗಿದ್ದು, ವೃತ್ತಿನಿರತ ಈ ಕಾರ್ಯವನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವಂತೆ ಮನವಿ ಮಾಡಿದರು. ಪ್ರಾರಂಭದಲ್ಲಿ ಸಂಘದ ಖಜಾಂಚಿ ನಿಸರ್ಗಗೋವಿಂದರಾಜು ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ನೇತಾಜಿ ಪ್ರಸನ್ನ ನಿರೂಪಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








