ಕ್ರೀಡೆಗಳೂ ಸಹ ಉತ್ತಮ ಆರೋಗ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ : ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ

ಚಳ್ಳಕೆರೆ

             ಕಳೆದ ಹಲವಾರು ವರ್ಷಗಳಿಂದ ಶಿಕ್ಷಣ ಇಲಾಖೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದಲ್ಲದೆ, ವಿವಿಧ ರೀತಿಯ ಶ್ರೇಷ್ಠ ಮಟ್ಟದ ಕ್ರೀಡೆಗಳ ಬಗ್ಗೆಯೂ ಸಹ ಮಾಹಿತಿ ನೀಡಿ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿವಹಿಸುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದೆ. ಕ್ರೀಡೆಯೂ ಸಹ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸುತ್ತವೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
            ಅವರು, ಶುಕ್ರವಾರ ಇಲ್ಲಿನ ವಾಸವಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಎರಡು ದಿನಗಳ ಕ್ರೀಡಾಕೂಟವನ್ನು ಶಾಸಕ ಟಿ.ರಘುಮೂರ್ತಿಯವರ ಅನುಪಸ್ಥಿತಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಇಂದು ರಾಷ್ಟ್ರವೇ ಹೆಮ್ಮೆ ಪಡುವಂತಹ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ. ವಿಶ್ವಮಟ್ಟದಲ್ಲಿ ರಾಷ್ಟ್ರದ ಕ್ರೀಡಾಪಟುಗಳು ಖ್ಯಾತಿ ಗಳಿಸಿದ್ಧಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಕ್ರೀಡಾಕೂಟಗಳು ಕ್ರೀಡಾಪಟುಗಳ ಶಕ್ತಿ ಸಾಮಥ್ರ್ಯವನ್ನು ಪರಿಗಣಿಸಿ ಕಾಲೇಜು ಮಟ್ಟದಲ್ಲೂ ಸಹ ಇಂತಹ ಕ್ರೀಡೆಗಳಿಗೆ ಅವಕಾಶ ನೀಡಿ ಇಲ್ಲೂ ಸಹ ಉತ್ತಮ ಆಟ ಪ್ರದರ್ಶಿಸಿದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಕ್ರೀಡಾಪಟುಗಳು ಪಾದರ್ಪಣೆ ಮಾಡಬಹುದಾಗಿದೆ. ಯಾರೂ ಸಹ ಯಾವ ಸಂದರ್ಭದಲ್ಲೂ ಯಾವುದೇ ಕ್ರೀಡೆಯನ್ನು ನಿರ್ಲಕ್ಷಿಸಬಾರದು. ಕ್ರೀಡೆಗಳು ಸಹ ನಮ್ಮ ಶಿಕ್ಷಣದ ಭಾಗವೆಂದು ಎಲ್ಲರೂ ಪರಿಗಣಿಸಬೇಕು ಎಂದರು.
             ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಬಾಲರೆಡ್ಡಿ ಮಾತನಾಡಿ, ಇಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿರುವ ಎಲ್ಲಾ ಕ್ರೀಡಾಪಟುಗಳು ಗ್ರಾಮೀಣ ಭಾಗದ ಕೊಡುಗೆಗಳಾಗಿವೆ. ಇಂದಿಗೂ ಸಹ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ಪೋಷಕರು ಹಾಗೂ ಶಿಕ್ಷಕರು ಪ್ರತಿಯೊಬ್ಬ ಕ್ರೀಡಾಪಟುವನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಅವನಿಗೆ ಎಲ್ಲಾ ರೀತಿಯ ಉತ್ತೇಜನವನ್ನು ನೀಡಬೇಕು. ಯಾವುದೇ ಹಂತದಲ್ಲೂ ಕ್ರೀಡೆಗಳನ್ನು ಕಡೆಗಣಿಸಬಾರದು. ಕ್ರೀಡೆಯಿಂದ ಆರೋಗ್ಯದ ಜೊತೆಗೆ ದೈಹಿಕವಾಗಿಯೂ ಸಹ ಸಬಲರಾಗುತ್ತೇವೆ ಹಾಗೂ ಆರ್ಥಿಕವಾಗಿಯೂ ಸಹ ಮುನ್ನಡೆ ಸಾಧಿಸಬಹುದಾಗಿದೆ.
             ಇದೇ ಸಂದರ್ಭದಲ್ಲಿ ವಿವಿಧ ಆಟಗಳಿಗೆ ವಾಸವಿ ಕಾಲೇಜು ಪ್ರಾಂಶುಪಾಲ ಜೆ.ಶ್ರೀರಾಮುಲು, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಸಂಘಸ ಅಧ್ಯಕ್ಷ ಎಸ್.ಲಕ್ಷ್ಮಣ್ ಚಾಲನೆ ನೀಡಿದರು. ತಾಲ್ಲೂಕು ಮಟ್ಟದ ಈ ಕ್ರೀಡಾಕೂಟ ಎರಡು ದಿನಗಳ ಕಾಲ ನಗರದ ಸುಧಾಕರ ಕ್ರೀಡಾಂಗಣ, ಶರಣ ಹರಳಯ್ಯ ಶಿಕ್ಷಣ ತರಬೇತಿ ಕಾಲೇಜು ಕ್ರೀಡಾಂಗಣ, ಬಿಎಂಎಚ್‍ಎಸ್ ಹೈಸ್ಕೂಲ್ ಮೈದಾನ ಮುಂತಾದ ಕಡೆಗಳಲ್ಲಿ ನಡೆಯುವುದು.

Recent Articles

spot_img

Related Stories

Share via
Copy link