ಕ್ರೀಡೆಯಲ್ಲಿ ತೀರ್ಪುಗಾರರು ನೀಡುವ ತೀರ್ಮಾನವೇ ಅಂತಿಮ:ಶಾಸಕ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ :

                       ಕ್ರೀಡೆಯಲ್ಲಿ ತೀರ್ಪುಗಾರರು ನೀಡುವ ತೀರ್ಮಾನವೇ ಅಂತಿಮ, ಅದು ನ್ಯಾಯಾಲಯದ ಆದೇಶವಿದ್ದಂತೆ ತೀರ್ಪನ್ನೇ ಪ್ರಶ್ನಿಸಲು ಶಿಕ್ಷಕರೆ ಜಗಳವಾಡುವುದು ಕಂಡು ಬಂದರೆ ಮುಂದೆ ಆ ಶಾಲೆಗಳನ್ನು ಕ್ರೀಡಾಕೂಟದಿಂದಲೇ ದೂರವಿಡಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದರು.
                      ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಳೆದ ಬಾರಿಯ ಕ್ರೀಡಾಕೂಟದಲ್ಲಿ ತೀರ್ಪುಗಾರರು ನೀಡಿದ ತೀರ್ಪನ್ನೇ ಪ್ರಶ್ನಿಸಿದ ಸಂದರ್ಭದಲ್ಲಿ ಶಿಕ್ಷಕರೇ ಜಗಳವಾಡಿಕೊಂಡಿದ್ದು ನನ್ನ ಗಮನಕ್ಕೆ ಬಂದಿತು, ಶಿಕ್ಷಕರೇ ಸಣ್ಣ ಪುಟ್ಟ ವಿಷಯಗಳಿಗೆ ಜಗಳವಾಡಿದರೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದ ಅವರು, ಶಿಕ್ಷಕರು ಮಕ್ಕಳಿಗೆ ಯಾವುದೇ ರೀತಿಯ ಗೊಂದಲ ಆಗದಂತೆ ನೋಡಿಕೊಳ್ಳಿ, ಗೊಂದಲ ಉಂಟಾದಾಗ ದೊಡ್ಡದು ಮಾಡಿ ಶಿಕ್ಷಕರೇ ಜಗಳವಾಡುವುದು ಒಳ್ಳೆಯದಲ್ಲ ಇದರಿಂದ ಇಡೀ ತಾಲ್ಲೂಕನ್ನೇ ದೂಷಿಸುವಂತಾಗುತ್ತದೆ ಎಂದರು.
                 ಕ್ರೀಡೆ ಒಂದು ದಿನ ಅಭ್ಯಾಸ ಮಾಡಿ ಪ್ರದರ್ಶನ ಮಾಡುವ ಕಲೆಯಲ್ಲ, ನಿರಂತರವಾಗಿ ಅಭ್ಯಾಸ ಮಾಡಿದಾಗಲೇ ಗೆಲುವು ಸಾಧ್ಯ, ಶಿಸ್ತು, ಸಹನಾ ಶಕ್ತಿಯು ಕ್ರೀಡೆಗಳ ಮೂಲಕ ದೊರಕುತ್ತದೆ, ಮನುಷ್ಯನ ಸವಾಂಗೀಣ ಅಭಿವೃದ್ದಿಯಲ್ಲಿ ದೈಹಿಕ ಶಿಸ್ತು ಕೂಡ ಬಹಳ ಮುಖ್ಯ, ಕ್ರೀಡೆಗಳು ಬದುಕಿನ ಒಂದು ಅಂಗವಾಗಿರಬೇಕು, ಕ್ರೀಡೆಯಿಂದ ಮನಸ್ಸು ಉತ್ತಮವಾಗಿರುತ್ತದೆ, ಒಳ್ಳೆಯ ಆಲೋಚನೆಗಳು, ಗ್ರಹಿಸುವ ಶಕ್ತಿ, ಜೊತೆಗೆ ರೋಗರುಜುನಗಳಿಂದ ಹೊರಗಿರಬಹುದು ಎಂದ ಅವರು, ತೀರ್ಪು ನೀಡುವಾಗ ಒಬ್ಬೊಬ್ಬರ ದೃಷ್ಠಿಯಲ್ಲಿ ಒಂದು ರೀತಿ ಕಾಣುತ್ತದೆ, ಒಬ್ಬರಿಗೆ ಒಳ್ಳೆಯದಾಗಿ ಕಂಡರೆ ಮತ್ತೊಬ್ಬರಿಗೆ ಅದು ಕೆಟ್ಟದಾಗಿ ಕಾಣುತ್ತದೆ ಹಾಗಾಗಿ ತೀರ್ಪುಗಾರರ ತೀರ್ಮಾನ ಅಂತಿಮವಾಗಿರಬೇಕು ಎಂದರು.
                 ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಇಂದಿನ ಸ್ಮರ್ದಾತ್ಮಕ ಯುಗದಲ್ಲಿ ಜ್ಞಾನಾರ್ಜನೆ ಒಂದೇ ಇರಬಾರದು ಕ್ರೀಡೆ ಕೂಡ ಒಂದು ಭಾಗವಾಗಿರಬೇಕು ಇದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದ ಅವರು, ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಯಾವುದೇ ರೀತಿಯ ಗೊಂದಲವಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಮಹದೇವಮ್ಮ ಮಾತನಾಡಿ, ಕ್ರೀಡೆಯು ಮನುಷ್ಯನ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಹಾಗಾಗಿ ಪಾಠದ ಜೊತೆಗೆ ಕ್ರೀಡಾ ಚಟುವಟಿಕೆ ಅಗತ್ಯ ಎಂದು ಹೇಳಿದರು.
            ಕಾರ್ಯಕ್ರಮದಲ್ಲಿ ಬಿಇಓ ಕಾತ್ಯಾಯಿನಿ ಸ್ವಾಗತ ಕಾರ್ಯಕ್ರಮ ನಡೆಸಿಕೊಟ್ಟರು. ತಾಲ್ಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಸಿ.ಎನ್.ಜಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link