ಕ್ಲೈಮ್ಯಾಕ್ಸ್ ಹಂತ ತಲುಪಿದ ಸಿಎಂ ಹುದ್ದೆ ಕದನ

ಬೆಂಗಳೂರು

     ಮುಖ್ಯಮಂತ್ರಿ ಹುದ್ದೆಗಾಗಿ ನಡೆದಿರುವ ಕದನ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು,ಈ ಮಧ್ಯೆಯೇ ಸಿದ್ಧರಾಮಯ್ಯ ಇಲ್ಲವೇ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇ 18 ರ ಗುರುವಾರ ಅಸ್ತಿತ್ವಕ್ಕೆ ಬರಲಿದೆ. ವಿಧಾನಸೌಧದ ಮುಂಭಾಗದಲ್ಲಿ ಮೇ 18 ರ ಗುರುವಾರ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು,ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

     ಮೇ ಹದಿನೇಳರ ಬುಧವಾರ ಸರ್ಕಾರ ರಚನೆ ಮಾಡುವ ಹಕ್ಕನ್ನು ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಮಂಡಿಸಲಿರುವ ಕಾಂಗ್ರೆಸ್ ನಿಯೋಗ ನೂತನ ಮುಖ್ಯಮಂತ್ರಿಗಳ ಪ್ರತಿಜ್ಞಾ ವಿಧಿ ಸಮಾರಂಭ ನಡೆಸಲು ಪತ್ರ ನೀಡಲಿದೆ.

       ಈ ಮಧ್ಯೆ ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ತೀವ್ರ ಪೈಪೋಟಿ ನಡೆಸಿದ್ದು,ಉಭಯ ನಾಯಕರ ಮಧ್ಯೆ ಹೈಕಮಾಂಡ್ ರಾಜಿ ಸೂತ್ರ ಮಂಡಿಸಿದ್ದರೂ ಇದುವರೆಗೆ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಬದಲಿಗೆ ಮುಖ್ಯಮಂತ್ರಿಯಾಗಲು ಡಿಕೆಶಿ ತಮ್ಮ ಪಟ್ಟು ಮುಂದುವರಿಸಿದ್ದು,ಸಿದ್ಧರಾಮಯ್ಯ ಕೂಡಾ ಪ್ರತಿಪಟ್ಟು ಹಾಕಿ ಇಡೀ ಆಟ ದೇಶದ ಗಮನ ಸೆಳೆಯುವಂತೆ ಮಾಡಿದ್ದಾರೆ.

     ಮುಖ್ಯಮಂತ್ರಿ ಹುದ್ದೆಯ ವಿವಾದಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಅಂಗಳಕ್ಕೆ ಚೆಂಡು ತಲುಪಿದ ಮೂರನೇ ದಿನವೂ ಅದು ತಲುಪಬೇಕಾದ ಜಾಗ ಯಾವುದು ಎಂಬುದನ್ನು ನಿರ್ಧರಿಸಲು ಕಾಂಗ್ರೆಸ್ ಹೈಕಮಾಂಡ್ ಹರಸಾಹಸ ನಡೆಸುತ್ತಿದೆ.

     ಮೇ 13 ರ ರಾತ್ರಿ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಸಭೆ ಗುಪ್ತ ಮತದಾನದ ಮೂಲಕ ಶಾಸಕಾಂಗ ನಾಯಕ ಯಾರಾಗಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರಾದರೂ,ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ನೀಡಿ ಒಂದು ಸಾಲಿನ ನಿರ್ಣಯ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಸೋಮವಾರ ಉತ್ತರ ಕಂಡುಹಿಡಿಯಲು ಮುಂದಾದ ಕಾಂಗ್ರೆಸ್ ನಾಯಕರು,ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಂದ ತೀವ್ರ ಬಗೆಯ ಒತ್ತಡಕ್ಕೆ ಸಿಲುಕಬೇಕಾಯಿತು.

       ಈ ಪೈಕಿ ಸಿದ್ಧರಾಮಯ್ಯ ಸೋಮವಾರ ಮಧ್ಯಾಹ್ನ ದೆಹಲಿಗೆ ತಲುಪಿ ಆಪ್ತ ಶಾಸಕರ ಜತೆ ಸಭೆ ಡನೆಸಿದ್ದಲ್ಲದೆ,ಶಾಸಕಾಂಗ ಪಕ್ಷದಲ್ಲಿ ತಮ್ಮ ಬಲ ಹೆಚ್ಚಿದ್ದು ಈ ಹಿನ್ನೆಲೆಯಲ್ಲಿ ತಮಗೇ ಸಿಎಂ ಪಟ್ಟ ಸಿಗಬೇಕು ಎಂದು ಸಿಗ್ನಲ್ ರವಾನಿಸಿದರು. ಈ ಹಂತದಲ್ಲಿ ಹೈಕಮಾಂಡ್ ವರಿಷ್ಟರ ಒಲವು ಸಿದ್ಧರಾಮಯ್ಯಕಡೆ ತಿರುಗುತ್ತಿರುವ ಸುಳಿವು ಪಡೆದ ಡಿಕೆಶಿ ಇದ್ದಕ್ಕಿದ್ದಂತೆ ತಮ್ಮ ದೆಹಲಿ ಪ್ರವಾಸವನ್ನು ಕೈ ಬಿಟ್ಟು ಬೆಂಗಳೂರಿನಲ್ಲೇ ಉಳಿದುಕೊಂಡರು. ಆದರೆ ಮಂಗಳವಾರ ಬೆಳಿಗ್ಗೆ ದೆಹಲಿ ತಲುಪಿದ ಡಿ.ಕೆ.ಶಿವಕುಮಾರ್ ಅವರು,ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೈಕಮಾಂಡ್ ನ ಹಲವು ನಾಯಕರನ್ನು ಭೇಟಿ ಮಾಡಿದರು.

ಮೂಲ ಕಾಂಗ್ರೆಸ್ ಗೆ ನ್ಯಾಯ ಕೊಡಿ

     ಉನ್ನತ ಮೂಲಗಳ ಪ್ರಕಾರ,ಮುಖ್ಯಮಂತ್ರಿ ಹುದ್ದೆಗೆ ತಮ್ಮನ್ನು ಯಾಕೆ ಆಯ್ಕೆ ಮಾಡಬೇಕು ಎಂಬ ಸಂಬಂಧ ಡಿಕೆಶಿ ಪಕ್ಷದ ವರಿಷ್ಟರ ಮುಂದೆ ವಾದ ಮಂಡಿಸಿದ್ದು,ಎಲ್ಲಕ್ಕಿಂತ ಮುಖ್ಯವಾಗಿ ಈ ಹುದ್ದೆ ವಲಸಿಗೆ ಕಾಂಗ್ರೆಸ್ಸಿಗರಿಗೆ ಬೇಡ,ಮೂಲ ಕಾಂಗ್ರೆಸ್ಸಿಗರಿಗೆ ದಕ್ಕಬೇಕು ಎಂದಿದ್ದಾರೆ. ನಾನು ಮೂಲ ಕಾಂಗ್ರೆಸ್ಸಿಗ ,ಸಿದ್ದರಾಮಯ್ಯ ವಲಸಿಗ ಕಾಂಗ್ರೆಸ್ಸಿಗರು.ಹೀಗಾಗಿ ಸಿದ್ಧರಾಮಯ್ಯ ಅವರನ್ನು ಸಿಎಂ ಮಾಡಿದರೆ ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯವಾಗುತ್ತದೆ ಎಂಬುದು ಡಿಕೆಶಿ ವಾದ.

     ಇದೇ ರೀತಿ ನಾನು ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ.ಅಧಿಕಾರ ಹೀನ ಸ್ಥಿತಿಯಲ್ಲಿದ್ದ ಪಕ್ಷವನ್ನು ಸಂಘಟಿಸಿ ರಾಜ್ಯದಲ್ಲಿ ಅದು ಬಹುಮತ ಪಡೆದು ಅಧಿಕಾರಕ್ಕೆ ಬರುವಂತೆ ಮಾಡಿದ್ದೇನೆ.ಪಕ್ಷದ ನಾಯಕತ್ವ ನನ್ನ ಕೈಲಿರುವಾಗ ಕಾಂಗ್ರೆಸ್ ಪಕ್ಷಕ್ಕೆ ಜನ 135 ಸ್ಥಾನಗಳನ್ನು ಕೊಟ್ಟಿದ್ದಾರೆ.

     ಪಕ್ಷ ಸಂಕಷ್ಟದಲ್ಲಿದ್ದಾಗ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ನಡೆಸಿದ ಭಾರತ್ ಜೋಡೋ ಯಾತ್ರೆಗಾಗಿ ಶ್ರಮಿಸಿದವನು ನಾನು.ಪಕ್ಷ ಸಂಘಟನೆಗಾಗಿ ಅಪಾರ ಪ್ರಮಾಣದ ಬಂಡವಾಳ ಹೂಡಿದವನು ನಾನು.ಆತ್ಮವಿಶ್ವಾಸ ಕಳೆದುಕೊಂಡಿದ್ದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಿದವನು ನಾನು. ಹೀಗಾಗಿ ಸಹಜವಾಗಿಯೇ ಮುಖ್ಯಮಂತ್ರಿ ಹುದ್ದೆಗೆ ನನ್ನನ್ನು ಆಯ್ಕೆ ಮಾಡಬೇಕು.ಇವತ್ತು ಪಕ್ಷಕ್ಕೆ ಯಾರ ಕೈಲಿ ಶಕ್ತಿ ಇರುತ್ತದೆ ಎಂಬುದನ್ನು ಗಮನಿಸಬೇಕು.ಒಂದು ವೇಳೆ ನಾನು ಸಹಜ ಆಯ್ಕೆಯಾಗದೆ ಇದ್ದರೆ ನನಗೆ ಯಾವ ಸ್ಥಾನವೂ ಬೇಡ.ನಾನು ಸಾಮಾನ್ಯ ಕಾರ್ಯಕರ್ತನಾಗಿ ನನ್ನ ಉದ್ಯೋಗ ನೋಡಿಕೊಂಡಿರುತ್ತೇನೆ ಎಂಬುದು ಡಿಕೆಶಿ ಮಾತು

     ಈ ಮಧ್ಯೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ತಮ್ಮ ವಾದ ಮುಂದಿಟ್ಟಿದ್ದು,ಶಾಸಕಾAಗ ಪಕ್ಷದಲ್ಲಿ ನನಗೆ ಹೆಚ್ಚಿನ ಬಲ ಇರುವುದರಿಂದ ಮುಖ್ಯಮಂತ್ರಿ ಹುದ್ದೆಗೆ ನಾನೇ ಸಹಜ ಆಯ್ಕೆ ಎಂದು ವಾದ ಮಂಡನೆ ಮಾಡಿದ್ದಾರೆ.

    ಶಾಸಕಾಂಗ ಪಕ್ಷದ ನಾಯಕನಾಗಲು ಶಾಸಕಾಂಗ ಪಕ್ಷದಲ್ಲಿ ಹೆಚ್ಚಿನ ಶಾಸಕರ ಬೆಂಬಲ ಪಡೆಯುವುದೊಂದೇ ಏಕೈಕ ಅರ್ಹತೆ.ಪಕ್ಷದ ಅಧ್ಯಕ್ಷ ಎಂಬ ಕಾರಣಕ್ಕಾಗಿ ಯಾರನ್ನೂ ಶಾಸಕಾಂಗ ನಾಯಕ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ.

    ಎಲ್ಲಕ್ಕಿಂತ ಮುಖ್ಯವಾಗಿ ಡಿಕೆಶಿ ಅವರ ವಿರುದ್ಧ ಐಟಿ,ಇಡಿ,ಸಿಬಿಐ ಸೇರಿದಂತೆ ಹಲವು ತನಿಖಾ ಸಂಸ್ಥೆಗಳಲ್ಲಿ ಪ್ರಕರಣಗಳು ಬಾಕಿ ಇವೆ.ನಾಳೆ ಅವರು ಮುಖ್ಯಮಂತ್ರಿಯಾಗಿ ಕೆಲವೇ ದಿನಗಳಲ್ಲಿ ತನಿಖಾ ಸಂಸ್ಥೆಗಳು ಅವರ ವಿರುದ್ಧ ಮುಗಿಬಿದ್ದರೆ ರಾಷ್ಟçಮಟ್ಟದಲ್ಲಿ ಕಾಂಗ್ರೆಸ್ ವರ್ಚಸ್ಸಿಗೆ ಹೊಡೆತ ಬೀಳಲಿದೆ.

     ನಲವತ್ತು ಪರ್ಸೆಂಟ್ ಕಮೀಷನ್ನಿನ ಸರ್ಕಾರ ಎಂದು ಬಿಜೆಪಿಯವರ ವಿರುದ್ಧ ಆರೋಪ ಹೊರಿಸಿದ ನಮ್ಮ ಪಕ್ಷದ ಮುಖ್ಯಮಂತ್ರಿಯೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ವಿಚಾರಣೆಗೆ ಗುರಿಯಾದರೆ ಅದು ಲೋಕಸಭೆ ಚುನಾವಣೆಯಲ್ಲಿ ನಮಗೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.

      ಇವತ್ತು ಎಲ್ಲಕ್ಕಿಂತ ಮುಖ್ಯವಾಗಿ ಜನಪರ ಸರ್ಕಾರ ನೀಡುವುದು ನಮ್ಮ ಮುಂದಿರುವ ಗುರುತರ ಸವಾಲು.ಈ ಕೆಲಸವನ್ನು ಆರೋಪಗಳ ಸುಳಿಗೆ ಸಿಲುಕಿರುವವರು ನೀಡಲು ಸಾಧ್ಯವಿಲ್ಲ.ಹೀಗಾಗಿ ಶಾಸಕಾಂಗದಲ್ಲಿ ಯಾರಿಗೆ ಬಲವಿದೆಯೋ?ಅವರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸುವುದು ಸಹಜ ನ್ಯಾಯ ಎಂದು ಸಿದ್ಧರಾಮಯ್ಯ ವಾದ ಮಂಡಿಸಿದ್ದಾರೆ.

     ಹೀಗೆ ಉಭಯ ನಾಯಕರು ತಮ್ಮ ತಮ್ಮ ವಾದಕ್ಕೆ ಕಟ್ಟು ಬಿದ್ದಿದ್ದು ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಪ್ರವಾಸದಲ್ಲಿದ್ದ ಶ್ರೀಮತಿ ಸೋನಿಯಾಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷರಾದ ಎಂ.ಮಲ್ಲಿಕಾರ್ಜುನ ಖರ್ಗೆ ವಿವರ ನೀಡಿದರು.

      ಮುಖ್ಯಮಂತ್ರಿ ಹುದ್ದೆಗಾಗಿ ನಡೆದಿರುವ ಈ ಕದನವನ್ನು ಬುಧವಾರ ಮಧ್ಯಾಹ್ನದೊಳಗಾಗಿ ಪರಿಹರಿಸುವಂತೆ ಸೋನಿಯಾಗಾಂಧಿ ಅವರು ಸೂಚನೆ ನೀಡಿದ್ದು,ಅವರ ಸೂಚನೆಯನ್ವಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ವರಿಷ್ಟರು ಸತತ ಕಸರತ್ತು ನಡೆಸುತ್ತಿದ್ದಾರೆ.

    ಈ ಕಸರತ್ತು ಅಂತಿಮಗೊAಡ ತಕ್ಷಣ ಕರ್ನಾಟಕದ ರಾಜ್ಯಪಾಲರಿಗೆ ಸರ್ಕಾರ ಮಂಡಿಸುವ ತನ್ನ ಹಕ್ಕನ್ನು ಮಂಡಿಸುವ ಪತ್ರ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ವಿವರಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap