ಶಿರಾ
ಸತತ 15 ದಿನಕ್ಕೂ ಹೆಚ್ಚು ಕಾಲ ಕೆಮ್ಮು ಮತ್ತು ಜ್ವರ ಇದ್ದರೆ ತಕ್ಷಣ ಸರ್ಕಾರಿ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಕ್ಷಯ ರೋಗದಂತಹ ಕಾಯಿಲೆಗಳು ತಮ್ಮ ದೇಹವನ್ನು ಆವರಿಸಿ ಕೊಳ್ಳಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದ್ವಾರನಕುಂಟೆ ಲಕ್ಷ್ಮಣ್ ಹೇಳಿದರು.
ಅವರು ಶಿರಾ ತಾಲ್ಲೂಕಿನ ದ್ವಾರನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಆಯೋಜಿಸಿದ್ದ ವಿಶ್ವಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಫ ಪರೀಕ್ಷೆ ನಂತರ ಕ್ಷಯ ರೋಗ ಎಂದು ದೃಢಪಟ್ಟರೇ, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಕ್ಷಯ ರೋಗ ಎಂಬ ಭಯ ಬೇಡ, ಅಗತ್ಯ ಚಿಕಿತ್ಸೆ ಪಡೆದರೆ ರೋಗ ಗುಣಮುಖವಾಗಲಿದೆ ಎಂದರು.ವೈದ್ಯಾಧಿಕಾರಿ ಡಾ.ಕೆ.ಜೆ.ತಿಮ್ಮರಾಜು ಮಾತನಾಡಿ, ಮನುಷ್ಯನ ದಿನನಿತ್ಯದ ಆಹಾರ ಬಳಕೆ ಸ್ಥಿರವಾಗಿರುವಂತೆ ನೋಡಿಕೊಂಡು, ಗ್ರಾಮ ಹಾಗೂ ಮನೆಯಲ್ಲಿ ಸ್ವಚ್ಚತೆ ಇದ್ದರೆ ಯಾವುದೇ ರೋಗ ನಿಮ್ಮ ಹತ್ತಿರ ಸುಳಿಯುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮ ಮತ್ತು ಸೀನು ಬಂದರೆ ಶುದ್ದವಾದ ಬಟ್ಟೆಯ ತಡೆಯಿಂದ ಸೀನಬೇಕು. ಯಾವುದೇ ತಡೆಯಿಲ್ಲದೆ ಕೆಮ್ಮಿದರೆ ರೋಗಾಣುಗಳು ಇತರರಿಗೆ ರೋಗ ಹರಡಲು ಕಾರಣವಾಗುತ್ತವೆ. ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಕಾಳಜಿ ಅತಿಮುಖ್ಯ ಎಂದರು.
ಮಾಜಿ ಯೋಧ ಸಣ್ಣರಂಗಯ್ಯ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸೌಮ್ಯ, ಆರೋಗ್ಯ ಇಲಾಖೆಯ ಮಂಜುನಾಥ ಸ್ವಾಮಿ, ತಿಮ್ಮರಾಜು, ಕಿಶೋರ್ ಅಹಮದ್, ನರಸಿಂಹಮೂರ್ತಿ ಸೇರಿದಂತೆ ಹಲವರು ಆಶಾ ಕಾರ್ಯಕರ್ತೆಯರು ಹಾಜರಿದ್ದರು.