ಕ್ಷೇತ್ರದ ಮತಗಟ್ಟೆ ಕೇಂದ್ರಗಳ ಸೌಲಭ್ಯಗಳ ಬಗ್ಗೆ ಗಮನಹರಿಸಲು ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ.

ಚಳ್ಳಕೆರೆ

         ಲೋಕಸಭಾ ಚುನಾವಣೆಗೆ ಮತದಾನ ನಡೆಯಲು ಇನ್ನೂ ಕೇವಲ 23 ದಿನಗಳು ಮಾತ್ರ ಬಾಕಿ ಇದ್ದು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಗಮನಹರಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಎಸ್.ರಾಜಶೇಖರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

         ಅವರು, ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಕ್ಷೇತ್ರದ 259 ಮತಗಟ್ಟೆ ಕೇಂದ್ರಗಳನ್ನು ವಿಂಗಡಿಸಿದ್ದು, ಒಟ್ಟು 24 ಸೆಕ್ಟರ್ ಅಧಿಕಾರಿಗಳಿಗೆ ಮತಗಟ್ಟೆ ಕೇಂದ್ರಗಳನ್ನು ನಿಗದಿ ಪಡಿಸಿ ಅವುಗಳ ವಾಸ್ತವ ಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಇನ್ನೂ ಕೆಲವು ಅಧಿಕಾರಿಗಳು ಈ ಬಗ್ಗೆ ಸೂಕ್ತ ವರದಿ ನೀಡಿಲ್ಲ. ಅದ್ದರಿಂದ ಈ ಕೂಡಲೇ ನಿಮಗೆ ನಿಗದಿ ಪಡಿಸಿದ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಗಮನಿಸಬೇಕು. ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ಮತಗಟ್ಟೆ ಕೇಂದ್ರಗಳ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.

         ಮತಗಟ್ಟೆ ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಕಿಟಕಿ ಮತ್ತು ಬಾಗಿಲುಗಳ ದುರಸ್ಥಿ, ಮತಗಟ್ಟೆ ಕೇಂದ್ರಗಳ ಮೇಲ್ಭಾಗದ ಕಟ್ಟಡದ ದುರಸ್ಥಿ, ಫ್ಯಾನ್ ವ್ಯವಸ್ಥೆ, ಮತದಾರರಿಗೆ ನೆರಳಿನ ವ್ಯವಸ್ಥೆ, ಅಂಗವಿಕಲ ಮತದಾರರಿಗೆ ವೀಲ್ಹ್ ಚೇರ್‍ಗಳ ವ್ಯವಸ್ಥೆ, ಕೇಂದ್ರಗಳ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕು. ಯಾವುದಾದರೂ ವ್ಯವಸ್ಥೆಯಲ್ಲಿ ಲೋಪಕಂಡುಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

         ಕ್ಷೇತ್ರದ ಮತಗಟ್ಟೆ ಕೇಂದ್ರಗಳ ನೈಜ್ಯ ಸ್ಥಿತಿಯನ್ನು ಪರಿಶೀಲಿಸಲು ಅಧಿಕಾರಿಗಳ ತಂಡ ಶೀಘ್ರದಲ್ಲೇ ಭೇಟಿ ನೀಡಿ, ಮತಗಟ್ಟೆ ಕೇಂದ್ರಗಳ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಯಾವುದಾದರೂ ಲೋಪ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಸಂಬಂಧಪಟ್ಟ ಅಧಿಕಾರಿಗಳು ಮತಗಟ್ಟೆ ಕೇಂದ್ರಗಳ ನ್ಯೂನತೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ ಚುನಾವಣಾ ಶಾಖೆಗೆ ವರದಿ ನೀಡುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕೆಲಸಗಳು ಬಾಕಿ ಇದ್ದಲ್ಲಿ ಅವುಗಳನ್ನು ಸಂಬಂಧಪಟ್ಟ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತುರ್ತು ಗಮನಹರಿಸಿ ಸಮಸ್ಯೆಯನ್ನು ನಿವಾರಿಸುವಂತೆ ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap