ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಕರೆ; ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಯಬೇಕು

ಚಿತ್ರದುರ್ಗ:

   ಶಿಕ್ಷಕರು ಹಾಗೂ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮಾನವೀಯ ಮೌಲ್ಯ ಹಾಗೂ ದೇಶಭಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಕರೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ಸ್ಥಳೀಯ ಸಂಸ್ಥೆಯಿಂದ ಕೋಟೆ ಮುಂಭಾಗವಿರುವ ಮಹಾರಾಣಿ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ನೊಂದಣಿ ಮತ್ತು ನವೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

  ಚಿತ್ರದುರ್ಗ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕ/ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಾರ್ಯಾಗಾರ ಇಷ್ಟಕ್ಕೆ ಸೀಮಿತಗೊಳ್ಳಬಾರದು. ಶಿಸ್ತು, ಸಂಯಮ, ಕಾರ್ಯತತ್ಪರತೆ ಮೈಗೂಡಿಸಿಕೊಂಡು ತಾಲೂಕನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸುವಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಕೇವಲ ಶಾಲೆಗಳಲ್ಲಿ ಪಠ್ಯಗಳಿಗಷ್ಟೆ ಮೀಸಲಿರಿಸಬಾರದು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನೋಡಿಕೊಂಡು ಸತ್ಪ್ರೆಜೆಗಳಾಗುವಂತೆ ಮಾಡುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದರು.

   ಪ್ರತಿಯೊಬ್ಬರ ಜೀವನದಲ್ಲಿ ಸಿದ್ದಾಂತ, ಮೌಲ್ಯಗಳು ಅತಿ ಮುಖ್ಯವಾಗಿರಬೇಕು. ಆದ್ದರಿಂದ ಘಟಕಗಳನ್ನು ನೊಂದಣಿ ಮಾಡಿಸಿ ನವೀಕರಿಸಿಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಗುಣಗಾನ ಮಾಡಿದ ಎಸ್.ನಾಗಭೂಷಣ್ ನವೆಂಬರ್‍ನಲ್ಲಿ ಏಳು ದಿನಗಳ ಕಾಲ ನಡೆಯುವ ತರಬೇತಿಗೆ ಸಿದ್ದರಾಗಿ ಎಂದು ಶಿಕ್ಷಕ/ಶಿಕ್ಷಕಿಯರಿಗೆ ಸೂಚಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಎಂ.ರೇವಣಸಿದ್ದಪ್ಪ ಮಾತನಾಡುತ್ತ ಎಲ್ಲಾ ಶಾಲೆಗಳಲ್ಲಿ ಘಟಕಗಳು ಪ್ರಾರಂಭವಾಗಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗೆ ಸರ್ಕಾರ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನಿಗಧಿಪಡಿಸಿದೆ. ಅದು ಮಕ್ಕಳಿಗೆ ತಲುಪಬೇಕು ಎಂದು ತಿಳಿಸಿದರು.

  ಮಕ್ಕಳಿಗೆ ಪಾಠ ಮಾಡುವುದರ ನಡುವೆ ಶಿಕ್ಷಕರುಗಳಿಗೆ ಸಮಯದ ಅಭಾವವಿದೆ. ಆದಾಗ್ಯೂ ಮಕ್ಕಳಲ್ಲಿ ಅರಿವು ಮೂಡಿಸುವಲ್ಲಿ ಕಾರ್ಯಮಗ್ನರಾಗಿ. ನೀತಿ ಶಿಕ್ಷಣ ಕಣ್ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ತೊಡಗಿಸಿದರೆ ಶಿಸ್ತು, ದೇಶಭಕ್ತಿ, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿದಂತಾಗುತ್ತದೆ. ಅದಕ್ಕಾಗಿ ಶಿಕ್ಷಕರುಗಳ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಅಧ್ಯಕ್ಷ ಡಿ.ಎಲ್.ಭೀಮರೆಡ್ಡಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಪಿ.ವೈ.ದೇವರಾಜ್ ಪ್ರಸಾದ್, ಜಿಲ್ಲಾ ಸ್ಕೌಟ್ಸ್ ಆಯುಕ್ತ ಚಳ್ಳಕೆರೆ ಯರ್ರಿಸ್ವಾಮಿ, ಉಪಾಧ್ಯಕ್ಷ ಡಾ.ರಹಮತ್‍ವುಲ್ಲಾ, ದೈಹಿಕ ಶಿಕ್ಷಣಾಧಿಕಾರಿ ಶೇಖರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಈಶ್ವರಪ್ಪ ವೇದಿಕೆಯಲ್ಲಿದ್ದರು.
ಶಿಕ್ಷಕರುಗಳಾದ ರವಿ, ವಿಶ್ವನಾಥ್, ಇಂದೂದರ, ರಾಮು, ಚಮನ್‍ಬೀ, ನೂರ್‍ಫಾತಿಮ, ತಸ್ಮಿಯ, ಲತ, ನಾಗೇಶ್ ಇನ್ನು ಮುಂತಾದವರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap