ಬೆಂಗಳೂರು:
ಕೊಡಗು ಜಿಲ್ಲೆಯಲ್ಲಿ ಶಕ್ತಿ ಯೋಜನೆ (ಮಹಿಳೆಯರಿಗೆ ಉಚಿತ್ರ ಪ್ರಯಾಣದ ಯೋಜನೆ) ಯಶಸ್ವಿಯಾಗಿ ಜಾರಿಯಾಗಿದ್ದು, ಜಿಲ್ಲೆಯ ಹಲವು ಖಾಸಗಿ ಬಸ್ ಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಜಿಲ್ಲೆಯಲ್ಲಿ 91 ಬಸ್ ಗಳು ಸಂಚರಿಸುತ್ತಿದ್ದು, ಮಡಿಕೇರಿ ಡಿಪೋದಿಂದ ಆರಂಭವಾಗಿ ಜಿಲ್ಲೆಯ ಗ್ರಾಮೀಣ ಭಾಗಗಳವರೆಗೂ ಸಂಚರಿಸುತ್ತದೆ.
ಇದಷ್ಟೇ ಅಲ್ಲದೇ ಜಿಲ್ಲೆಯ ಹೊರಭಾಗದಿಂದ 500 ಬಸ್ ಗಳು ಡಿಪೋ ತಲುಪುತ್ತವೆ, ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಸಂಚರಿಸುತ್ತವೆ. ಈ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವುದರಿಂದ ಈ ಹಿಂದೆ ತುಂಬಿ ತುಳುಕುತ್ತಿದ್ದ ಖಾಸಗಿ ಬಸ್ ಗಳಲ್ಲಿ ಈಗ ಏಕಾ ಏಕಿ ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಕೆ ಕಂಡಿದೆ.
ಕೊಡಗಿನಲ್ಲಿ 72 ಸ್ಥಳೀಯ ಬಸ್ ಮಾಲಿಕರು ಒಟ್ಟು 130 ಖಾಸಗಿ ಬಸ್ ಗಳನ್ನು ಹೊಂದಿದ್ದಾರೆ. ಈ ಬಸ್ ಗಳ ದೈನಂದಿನ ಆದಾಯದ ಮೇಲೆ ಬಸ್ ಚಾಲಕ, ಕಂಡಕ್ಟರ್, ಹೆಲ್ಪರ್ ಗಳ ಜೀವನ ಅವಲಂಬಿತವಾಗಿದೆ.
ಖಾಸಗಿ ಬಸ್ ಒಂದರಲ್ಲಿ ದಿನವೊಂದಕ್ಕೆ 400-500 ಮಂದಿ ಪ್ರಯಾಣಿಸುತ್ತಾರೆ. ಈ ಪೈಕಿ ಶೇ.40 ರಷ್ಟು ಮಹಿಳೆಯರು ಇರುತ್ತಿದ್ದರು. ಕೆಎಸ್ ಆರ್ ಟಿಸಿ ಶೇ.75 ರಷ್ಟು ಪ್ರದೇಶಗಳನ್ನು ತಲುಪುವುದರಿಂದ, ಎಣಿಕೆಯಷ್ಟು ಪ್ರಯಾಣಿಕರು ಮಾತ್ರ ಈಗ ಖಾಸಗಿ ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಖಾಸಗಿ ಬಸ್ ಮಾಲಿಕರ ಒಕ್ಕೂಟದ ಅಧ್ಯಕ್ಷ ರಮೇಶ್ ಜೋಯಪ್ಪ ಹೇಳಿದ್ದಾರೆ.
ಇದಷ್ಟೇ ಅಲ್ಲದೇ, ಶೀಘ್ರವೇ ಹೊಸ ಬಸ್ ಗಳ ಮೂಲಕ ಜಿಲ್ಲೆಯ ಎಲ್ಲಾ ಭಾಗಗಳಿಗೂ ಬಸ್ ಸೌಲಭ್ಯ ದೊರೆಯುವಂತೆ ಮಾಡುತ್ತೇವೆ ಎಂದು ಹೇಳಿದ್ದು ಖಾಸಗಿ ಬಸ್ ಗಳಿಗೆ ಇದು ಮತ್ತಷ್ಟು ಹೊಡೆತ ಬೀಳಲಿದೆ. ಈ ಯೋಜನೆಯಿಂದ ನಾವು ಕೇವಲ ಮಹಿಳಾ ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿಲ್ಲ, ಒಟ್ಟಿಗೆ ಪ್ರಯಾಣಿಸುವ ದಂಪತಿಗಳು ಒಂದೇ ಬಸ್ ನಲ್ಲಿ ತೆರಳುತ್ತಾರೆ. ಮಹಿಳೆಯರಿಗೆ ಟಿಕೆಟ್ ಉಚಿತ ಇರುವ ಹಿನ್ನೆಲೆಯಲ್ಲಿ ವ್ಯಕ್ತಿ ತನ್ನ ಪತ್ನಿಯೊಂದಿಗೆ ಕೆಎಸ್ ಆರ್ ಟಿಸಿ ಬಸ್ ನಲ್ಲೇ ಪ್ರಯಾಣಿಸುತ್ತಾನೆ. ಇದರಿಂದ ಮತ್ತಷ್ಟು ಪ್ರಯಾಣಿಕರನ್ನು ಕಳೆದುಕೊಳ್ಳುತ್ತೇವೆ ಎಂದು ರಮೇಶ್ ಜೋಯಪ್ಪ ಹೇಳಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ಗಳ ಸಮಯ ಅನುಕೂಲಕರವಾಗಿಲ್ಲದೇ ಇದ್ದಾಗ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರವೇ ಜನರು ಇನ್ನು ಮುಂದೆ ಖಾಸಗಿ ಬಸ್ ಗಳಲ್ಲಿ ಸಂಚರಿಸುವ ಸನ್ನಿವೇಶ ಸೃಷ್ಟಿಯಾಗುತದೆ ಎಂದು ರಮೇಶ್ ಆಂತಕ ವ್ಯಕ್ತಪಡಿಸಿದ್ದಾರೆ.