ದಾವಣಗೆರೆ :
ಇತ್ತೀಚೆಗೆ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ, ಬೆಂಗಳೂರು ಹಾಗೂ ನವಗ್ರಹ ಕ್ರೀಡಾ ಸಂಸ್ಥೆ ಬಿದರಿ, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇಲ್ಲಿ ನಡೆದ ಆಹ್ವಾನಿತ ರಾಜ್ಯ ಮಟ್ಟದ ಪುರುಷರ ಹೊನಲು-ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ವಲಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ಖೋ-ಖೋ ತಂಡ ದ್ವಿತೀಯ ಸ್ಥಾನ ಪಡೆದಿದೆ.
ದಾವಣಗೆರೆ ಜಿಲ್ಲೆಯ ಖೋ-ಖೋ ತಂಡವು ಹಿರಿಯರ ವಿಭಾಗದಲ್ಲಿ ರಾಜ್ಯಮಟ್ಟದ ಆಹ್ವಾನಿತ ಪಂದ್ಯಾವಳಿಯಲ್ಲಿ ತುಂಬಾ ವರ್ಷಗಳ ನಂತರ ಫೈನಲ್ ಪ್ರವೇಶ ಮಾಡಿ, ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ. 18 ವರ್ಷ ಒಳಗಿನ ವಿಭಾಗದಲ್ಲಿ ಹಲವಾರು ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಷ್ಟ್ರಮಟ್ಟದಲ್ಲಿ ಪದಕ ಪಡೆದಿರುತ್ತಾರೆ.
ಈ ಪಂದ್ಯಾವಳಿಯಲ್ಲಿ ಕ್ರೀಡಾ ವಸತಿ ನಿಲಯದ ತಂಡ ಲೀಗ್‍ನಲ್ಲಿ ಬೆಂಗಳೂರಿನ ಭಜರಂಗಬಲಿ ಕ್ರೀಡಾ ಸಂಸ್ಥೆ ಹಾಗೂ ಬಿದರಿ ನವಗ್ರಹ ಕ್ರೀಡಾ ಸಂಸ್ಥೆ ತಂಡಗಳ ವಿರುದ್ಧ, ಕ್ವಾಟರ್ ಫೈನಲ್‍ನಲ್ಲಿ ಮೈಸೂರಿನ ನ್ಯಾಷನಲ್ಸ್ ಕ್ರೀಡಾ ಸಂಸ್ಥೆ ವಿರುದ್ಧ, ಸೆಮಿ ಫೈನಲ್ಸ್‍ನಲ್ಲಿ ಬೆಂಗಳೂರಿನ ಪೈಯೋನಿಯರ್ಸ್ ವಿರುದ್ಧ ವಿಜೇತರಾಗಿ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆಯಿತು.
ಅಂತಿಮ ರೋಚಕ ಪಂದ್ಯದಲ್ಲಿ ಬೆಂಗಳೂರಿನ ಯಂಗ್ ಪೈಯೋನಿಯರ್ಸ್ ತಂಡದ ವಿರುದ್ಧ ಮೊದಲಾರ್ಧದಲ್ಲಿ 7-7 ಸಮನಾಗಿ, ಅಂತಿಮವಾಗಿ 2 ನಿಮಿಷ ಇರುವಾಗ ಸೋಲನ್ನು ಅನುಭವಿಸಿ, ದ್ವಿತೀಯ ಸ್ಥಾನ ಪಡೆದಿದೆ.
ದಾವಣಗೆರೆ ತಂಡದ ಪರ ನಾಯಕ ಬಾಷಿತ್ ಆಲಿ, ಅರುಣ್ ಜಿ.ಬಿ. ಭರತ್‍ಕುಮಾರ್, ಕಿರಣ್ ಗಾಳಿ, ಅರ್ಜುನ್, ಬಾಹುಬಲಿ, ತಾಸೀನ್, ರಂಗಸ್ವಾಮಿ, ಪುನೀತ್‍ಕುಮಾರ್ ಹಾಗೂ ದಾದಾಪೀರ್ ಇವರುಗಳು ಉತ್ತಮ ಪ್ರದರ್ಶನ ನೀಡಿದರು. ತಂಡದ ತರಬೇತುದಾರರಾಗಿ ಜೆ.ರಾಮಲಿಂಗಪ್ಪ ಹಾಗೂ ವ್ಯವಸ್ಥಾಪಕರಾಗಿ ಸಿ. ಚಂದ್ರಶೇಖರ್ ಇವರು ಭಾಗವಹಿಸಿದ್ದರು.
ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದÀ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ಎಲ್ಲಾ ಕ್ರೀಡಾಪಟುಗಳನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್, ಅಶ್ವತಿ, ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಜಿ. ಷಡಕ್ಷರಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್ ಹಾಗೂ ಇಲಾಖೆಯ ಎಲ್ಲಾ ತರಬೇತುದಾರರು ಮತ್ತು ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
