ಗಂಡನ ಅನೈತಿಕ ಸಂಬಂಧ, ವರದಕ್ಷಿಣಿ ಕಿರುಕುಳದಿಂದ ನೊಂದು ಪತ್ನಿ ನೇಣಿಗೆ

ಬೆಂಗಳೂರು:

    ಗಂಡನ ಅನೈತಿಕ ಸಂಬಂಧ  ಹಾಗೂ ನಿರಂತರ ಕಿರುಕುಳದಿಂದ  ಬೇಸತ್ತ ಗೃಹಿಣಿಯೊಬ್ಬರು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಬೆಂಗಳೂರಿನ  ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಘಟನೆ ನಡೆದಿದ್ದು, ಗಂಡನ ಕಿರುಕುಳಕ್ಕೆ ಬೇಸತ್ತು 28 ವರ್ಷದ ಪತ್ನಿ ಪೂಜಾಶ್ರೀ ನೇಣಿಗೆ ಶರಣಾಗಿದ್ದಾಳೆ. ಇದರಿಂದ ಪುಟ್ಟ ಹೆಣ್ಣು ಮಗು ಅನಾಥವಾಗಿದೆ.

   ಪೂಜಾಶ್ರೀ, ಮೂರು ವರ್ಷದ ಹಿಂದೆ ಪೋಷಕರು ನಿಶ್ಚಯಿಸಿದ್ದ ನಂದೀಶ್ ಜೊತೆ ವಿವಾಹವಾಗಿದ್ದರು. ಪೂಜಾಶ್ರೀ- ನಂದೀಶ್ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಕೂಡ ಇದೆ. ಪತಿ ನಂದೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪೂಜಾಶ್ರೀ ಕೂಡ ಖಾಸಗಿ ಬ್ಯಾಂಕ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಪತಿ ನಂದೀಶ್‌ಗೆ ಅನೈತಿಕ ಸಂಬಂಧ ಇರುವುದು ಪೂಜಾಶ್ರೀಗೆ ಗೊತ್ತಾಗಿದೆ. ಈ ಬಗ್ಗೆ ಪೂಜಾ ಗಂಡನನ್ನು ಪ್ರಶ್ನಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ನಂದೀಶ್, ಪೂಜಾಳಿಗೆ ಕಿರುಕುಳ ಕೊಡಲಾರಂಭಿಸಿದ್ದಾನೆ.

   ಈ ವೇಳೆ ನಂದೀಶ್ ತಾಯಿ, ನಿಮ್ಮ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೂಜಾಶ್ರೀಗೆ ಒತ್ತಾಯಿಸಿದ್ದಾರೆ. ಬಳಿಕ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಬಳಿಕ ಪೂಜಾಶ್ರೀ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಹೋಗಿದ್ದರು. ಈ ಬಗ್ಗೆ ಮನೆಯಲ್ಲಿ ಎರಡು ಮೂರು ಬಾರಿ ರಾಜೀ ಪಂಚಾಯಿತಿ ನಡೆದಿದ್ದು, ಮತ್ತೆ ವರದಕ್ಷಿಣೆ ಕಿರುಕುಳ ನೀಡಲ್ಲ. ಅನೈತಿಕ ಸಂಬಂಧ ಬೆಳೆಸಲ್ಲ ಎಂದು ಭರವಸೆ ನೀಡಿ ಪತ್ನಿ ಪೂಜಾಶ್ರೀಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ.

   ಮೂರು ದಿನಗಳ ಹಿಂದೆ ನಂದೀಶ್ ಮತ್ತೆ ಜಗಳ ತೆಗೆದು ಪತ್ನಿ ಪೂಜಾಶ್ರೀ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಪೂಜಾಶ್ರೀ ಮತ್ತೆ ತಾಯಿ ಮನೆಗೆ ಹೋಗಿದ್ದಳು. ಮರು ದಿನ ಬೆಳಿಗ್ಗೆ ಪೂಜಾಶ್ರೀ ತವರು ಮನೆಗೆ ಹೋದ ನಂದೀಶ್ ಹೊಸ ಕಥೆ ಕಟ್ಟಿ ಕರೆದುಕೊಂಡು ಹೋಗಿದ್ದ. ಆದರೆ, ನಿನ್ನೆ ಬೆಳಿಗ್ಗೆ ಪೂಜಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

    ಮೃತ ಪೂಜಾಶ್ರೀ ಪೋಷಕರ ದೂರಿನ ಆಧಾರದ ಮೇಲೆ ಈ ಘಟನೆ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿದ್ದು, ಪತಿ ನಂದೀಶ್‌ನನ್ನು ಬಂಧಿಸಲಾಗಿದೆ. ತಾಯಿ ಸಾವಿಗೀಡಾಗಿ ತಂದೆ ಜೈಲು ಪಾಲಾಗಿದ್ದು, ಮಗು ಅನಾಥವಾಗಿದೆ.

Recent Articles

spot_img

Related Stories

Share via
Copy link