ಶ್ರೀನಗರ:
ಭಾರತ ಮತ್ತು ಚೀನಾ ಸೇನೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್ಎಸಿ)ಯ ಬಳಿ ಪರಸ್ಪರ ಶಾಂತಿ ಕಾಪಾಡಿಕೊಳ್ಳುವ ಆಶಯ ವ್ಯಕ್ತಪಡಿಸಿವೆ ಎಂದು ರಕ್ಷಣಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಉಭಯ ದೇಶಗಳ ಗಡಿ ಭದ್ರತಾ ಸಿಬ್ಬಂದಿ ಸಭೆ(ಬಿಪಿಎಂ)ಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಅವರು ಹೇಳಿದ್ದಾರೆ.
ಸಭೆಯಲ್ಲಿ ಬ್ರಿಗೇಡಿಯರ್ ವಿಕೆ ಪುರೋಹಿತ್ ಮತ್ತು ಕರ್ನಲ್ ಅನಿಲ್ ಕುಮಾರ್ ನೇತೃತ್ವದಲ್ಲಿ ಭಾರತೀಯ ಸಿಬ್ಬಂದಿ ಹಾಗೂ ಹಿರಿಯ ಕರ್ನಲ್ ವಾಂಗ್ ಜುನ್ ಕ್ಷಿ ಮತ್ತು ಲೆಫ್ಟಿನೆಂಟ್ ಕರ್ನಲ್ ಲಿ ಮಿಂಗ್ ಜು ಅವರ ನೇತೃತ್ವದಲ್ಲಿ ಚೀನಾ ಸಿಬ್ಬಂದಿ ಭಾಗವಹಿಸಿದ್ದರು ಎಂದು ಕಲಿಯಾ ತಿಳಿಸಿದ್ದಾರೆ.
ಉಭಯ ದೇಶಗಳ ಭದ್ರತಾ ಸಿಬ್ಬಂದಿ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ ನಂತರ ಬಿಪಿಎಂ ಸಭೆ ಆರಂಭಿಸಲಾಯಿತು. ಸಭೆಯಲ್ಲಿ ಶಾಂತಿ ಕಾಪಾಡಿಕೊಳ್ಳುವ ಆಶಯ, ಪರಸ್ಪರ ಶುಭಾಶಯ ವಿನಿಮಯ ಹಾಗೂ ಧನ್ವವಾದಗಳನ್ನು ತಿಳಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.