ದಾವಣಗೆರೆ:
ಒಂದೆಡೆ ಇಡೀ ಜಗತ್ತು ಜ.30ರಂದು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ 71ನೇ ಪುಣ್ಯತಿಥಿಯನ್ನು ಹುತಾತ್ಮರ ದಿನವನ್ನಾಗಿ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದರೆ, ಮತ್ತೊಂದೆಡೆ ಗೂಡ್ಸೆ ಸಂತತಿಯ ಅಖಿಲ ಭಾರತ ಹಿಂದೂ ಮಹಾಸಭಾ ನಾಯಕರು ಗಾಂಧಿ ಪ್ರತಿಕೃತಿಗೆ ಗುಂಡು ಹೊಡೆಯುವ ಮೂಲಕ ವಿಕೃತಿ ಮೆರೆದಿರುವುದರಿಂದ ಇಡೀ ನಾಡೇ ತಲೆ ತಗ್ಗಿಸುವಂತಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಕೋಮುವಾದಿಗಳ ನಡೆಯನ್ನು ಖಂಡಿಸಿದ್ದಾರೆ.
ಉತ್ತರ ಪ್ರದೇಶದ ಅಲಿಗಾಡ್‍ನಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಮತ್ತವರ ಗಾಂಪರ ಗುಂಪು ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಪ್ರತಿಕೃತಿಗೆ ನಕಲಿ ಪಿಸ್ತೂಲ್‍ನಿಂದ ಗುಂಡು ಹೊಡೆದು ದೇಹದಿಂದ ರಕ್ತ ಸೋರುವಂತೆ ಸೃಷ್ಟಿಸಿ, ಪ್ರತಿಕೃತಿ ದಹನ ಮಾಡುವ ಮೂಲಕ ಗಾಂಧಿ ಮರಣ ಹೊಂದಿ 71 ವರ್ಷ ಕಳೆದರೂ ಅವರ ಮೇಲಿನ ಕೋಪ ಅಡಗಿಲ್ಲ ಎಂಬುದನ್ನು ಮತ್ತೆ ಜಗತ್ತಿಗೆ ತೋರಿಸಿದ್ದಾರೆ ಎಂದಿರುವ ಡಿ. ಬಸವರಾಜ್ ಅವರು, ಇಷ್ಟೇ ಅಲ್ಲದೆ, ‘ಮಹಾತ್ಮ ನಾಥೂರಾಮ್ ಗೂಡ್ಸೆ ಅಮರ್ ರಹೇ’ ಎಂಬ ಘೋಷಣೆ ಕೂಗುವ ಮೂಲಕ ರಾಷ್ಟ್ರದ್ರೋಹದ ಕಾರ್ಯ ಮಾಡಿರುವುದು ಸರಿಯಲ್ಲ ಎಂದು ಅವರು ದೂರಿದ್ದಾರೆ.
ಗಾಂಧಿ ಪ್ರತಿಕೃತಿಗೆ ಗುಂಡಿಕ್ಕಿದ್ದಲ್ಲದೇ, ದಸರಾದಲ್ಲಿ ರಾವಣನ ಪ್ರತಿಕೃತಿಗೆ ಬೆಂಕಿ ಇಡುವಂತೆ ಗಾಂಧಿ ಪ್ರತಿಕೃತಿಗೆ ಗುಂಡಿಕ್ಕಿ ನಾಥೂರಾಮ್ ಗೂಡ್ಸೆ ಗೌರವಾರ್ಥ “ಶೌರ್ಯ ದಿವಸ” ವೆಂದು ಆಚರಿಸುವ ಹೊಸ ಸಂಪ್ರದಾಯ ಹುಟ್ಟುಹಾಕಿರುವುದಾಗಿ ಮಹಾಸಭಾದ ನಾಯಕಿ ಪೂಜಾ ಹೇಳಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಆದಿತ್ಯಯೋಗಿ ಸರ್ಕಾರವಿರುವುದೇ ಇವರ ಈ ವಿಕೃತಿಗೆ ಬೆಂಬಲ ದೊರೆತಂತಾಗಿದೆ. ಪ್ರಧಾನಿ ಮೋದಿ ಅವರು ಕೇವಲ ತೋರಿಕೆಗಷ್ಟೇ ಗಾಂಧಿಗೆ ನಮಿಸುತ್ತಾರೆ. ಆದರೆ, ಮತ್ತೊಂದೆಡೆ ಅವರ ಅನುಯಾಯಿಗಳು ಯಾವುದೇ ಭಯವಿಲ್ಲದೇ ಇಂಥ ದುಷ್ಕøತ್ಯವೆಸಗಿದರೂ ಕಂಡೂ ಕಾಣದಂತೆ ಸುಮ್ಮನಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಿಎಂ ಆದಿತ್ಯಯೋಗಿ ಅವರಿಗೆ ಕಿಂಚಿತ್ತಾದರೂ ಗಾಂಧಿಜೀಯ ಬಗ್ಗೆ ಗೌರವವಿದ್ದರೆ ಈ ಕೂಡಲೇ ವಿಕೃತಿ ಮೆರೆದಿರುವ ದೇಶದ್ರೋಹಿಗಳನ್ನು ಬಂಧಿಸಿ, ದೇಶದ್ರೋಹ ಮೊಕದ್ದಮೆ ಹೂಡಿ ಗಡಿಪಾರು ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ