ಬಸ್ ಘಟಕ ನಿರ್ಮಾಣ ಮಾಡಲು ಪೂರಕ ವರದಿ ನೀಡುವ ಭರವಸೆ
ಗುಡಿಬಂಡೆ: ತಾಲೂಕಿನ ಕೊಂಡರೆಡ್ಡಿಹಳ್ಳಿ ಗ್ರಾಮದ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ನಿರ್ಮಾಣಕ್ಕಾಗಿ ೧೦ ಎಕರೆ ಜಮೀನು ನೀಡಿ ವರ್ಷಗಳು ಕಳೆದಿದೆ. ಆದರೆ ಬಸ್ ಡಿಪೋ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಗುಡಿಬಂಡೆ ಸಾರಿಗೆ ಘಟಕ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗುಡಿಬಂಡೆ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ.
ಸಾರಿಗೆ ಘಟಕ ನಿರ್ಮಾಣಕ್ಕೆ ಆಗ್ರಹಿಸಿ ಕರೆಯಲಾಗಿದ್ದ ಬಂದ್ ಗೆ ಗುಡಿಬಂಡೆಯ ವರ್ತಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿದ್ದರು. ಇನ್ನೂ ಬಂದ್ ನಿಂದಾಗಿ ಸರ್ಕಾರಿ ವಾಹನಗಳು ಹಾಗೂ ಖಾಸಗಿ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬೆಳಿಗಿನಿಂದಲೇ ಬಂದ್ ಆರಂಭವಾಗಿತ್ತು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಭಾಗಿಯಾಗಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುಡಿಬಂಡೆ ಪೊಲೀಸರು ಸೂಕ್ತ ಬಂದೋಬಸ್ತ್ ನೀಡಿದ್ದರು.
ಇನ್ನೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುಬ್ಬಾರೆಡ್ಡಿ, ಈಗಾಗಲೇ ನಾನು ವಿಧಾನಸಭೆಯಲ್ಲಿ ೧೪ ಬಾರಿ ಬಸ್ ಡಿಪೋ ನಿರ್ಮಾಣಕ್ಕೆ ೧೪ ಬಾರಿ ಪ್ರಶ್ನೆ ಕೇಳಿದ್ದೇನೆ. ಜೊತೆಗೆ ಬಾಗೇಪಲ್ಲಿಯಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಬಹಿರಂಗ ವೇದಿಕೆಯಲ್ಲೇ ಬಸ್ ಡಿಪೋ ಮಂಜೂರು ಮಾಡುವಂತೆ ಆದೇಶ ಸಹ ಮಾಡಿದ್ದರು. ಬಳಿಕ ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸಹ ಬಸ್ ಡಿಪೋ ಮಾಡುವಂತೆ ತಿಳಿಸಿದ್ದರು. ಆದರೆ ಅಧಿಕಾರಿಗಳು ನೀಡಿದ ವರದಿಯ ಮೇಲೆ ಬಸ್ ಡಿಪೋ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎನ್ನಲಾಗಿತ್ತು. ಆದರೆ ಮಿನಿ ಬಸ್ ಡಿಪೋ ಹಾಗೂ ತರಬೇತಿ ಕೇಂದ್ರ ಸ್ಥಾಪನೆ ಮಾಡುವಂತೆ ಮನವಿ ಮಾಡಲಾಗಿತ್ತು. ಅದಕ್ಕೂ ಸಹ ಸ್ಥಳೀಯ ಅಧಿಕಾರಿಗಳ ತಪ್ಪು ವರದಿಯಿಂದ ಬಸ್ ಡಿಪೋ ನಿರ್ಮಾಣಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ನಾನು ಮತ್ತೊಮ್ಮೆ ಒತ್ತಾಯ ಮಾಡುತ್ತೇನೆ. ಅಲ್ಲಿ ಮಂಜೂರಾಗದೇ ಇದ್ದರೇ ನಾನು ಸಹ ನಿಮ್ಮೊಂದಿಗೆ ಧರಣಿ ಕೂರುತ್ತೇನೆ ಎಂದರು.
ಇನ್ನೂ ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಕೆ.ಎಸ್.ಆರ್.ಟಿ.ಸಿ ಘಟಕದ ಅಧಿಕಾರಿ ಹಿಮವರ್ಧನ ನಾಯ್ಡು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಸದ್ಯ ಕೋವಿಡ್ ಸಮಯದಲ್ಲಿ ನಿಲ್ಲಿಸಲಾಗಿದ್ದು ಎಲ್ಲಾ ಮಾರ್ಗಗಳನ್ನು ಮತ್ತೆ ಪ್ರಾರಂಭಿಸಲಾಗುವುದು, ಜೊತೆಗೆ ಪ್ರತಿಭಟನಾಕಾರರು ತಿಳಿಸಿದ ಮಾರ್ಗಗಳನ್ನು ಸಹ ಆರಂಭಿಸಲು ಕ್ರಮ ವಹಿಸಲಾಗುತ್ತದೆ. ಜೊತೆಗೆ ಬಸ್ ಡಿಪೋ ನಿರ್ಮಾಣದ ಬಗ್ಗೆ ಕೇಂದ್ರ ಕಚೇರಿಯಿಂದ ತಂಡ ಬಂದು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಿದೆ. ಈ ಬಾರಿ ನಾನು ಬಸ್ ಡಿಪೋ ನಿರ್ಮಾಣಕ್ಕೆ ಪೂರಕವಾದ ವರದಿಯನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.