ಗುಬ್ಬಿ
ಪಟ್ಟಣ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಪರ್ಧಾಕಾಂಕ್ಷಿಗಳು ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ನಾಮಪತ್ರ ಸಲ್ಲಿಸಲು ಆ.18 ಅಂತಿಮ ದಿನವಾಗಿದ್ದರಿಂದ ಬಹುತೇಕ ಅಭ್ಯರ್ಥಿಗಳು ಬೆಳಗ್ಗೆಯಿಂದಲೂ ಅಗತ್ಯವಾದ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಬಿರುಸಿನಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 78 ನಾಮಪತ್ರಗಳು ಸಲ್ಲಿಕೆಯಾಗಿದ್ದು ನಾಮಪತ್ರ ಪರಿಶೀಲನೆ ಮತ್ತು ಉಮೇದುವಾರಿಕೆ ಹಿಂಪಡೆದ ನಂತರ ಚುನಾವಣಾ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಉಳಿಯುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.
ಪುರಸಭೆಯಾಗಿ ಪ್ರಾರಂಭಗೊಂಡು ಮಧ್ಯಂತರ ಮಂಡಲ ಪಂಚಾಯ್ತಿಯಾಗಿ ಇದೀಗ ಪಟ್ಟಣ ಪಂಚಾಯ್ತಿಯಾಗಿರುವ ಗುಬ್ಬಿ ಪಟ್ಟಣ ಪಂಚಾಯ್ತಿಯಲ್ಲಿ ಕಳೆದ ಭಾರಿ 17 ವಾರ್ಡ್‍ಗಳಿದ್ದವು. ಪ್ರಸಕ್ತ ಚುನಾವಣೆಯಲ್ಲಿ 19 ವಾರ್ಡ್‍ಗಳಾಗಿವೆ. ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರಗಳನ್ನು ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಪ್ರತಿಷ್ಠೆಯ ಕಣವಾಗುತ್ತಿದ್ದು ಕಳೆದ ಬಾರಿ ಆಯ್ಕೆಯಾಗಿದ್ದ ಬಹುತೇಕ ಸದಸ್ಯರಿಗೆ ಪ್ರಸಕ್ತ ಚುನಾವಣೆಗೆ ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯಿಂದ ಸ್ಥಳಾವಕಾಶ ಸಿಗದೆ ಬೇರೆ ಬೇರೆ ವಾರ್ಡ್‍ಗಳಿಂದ ಸ್ಪರ್ಧೆಗಿಳಿದಿದ್ದರೆ ಇನ್ನು ಕೆಲವರು ತಮ್ಮ ಪತ್ನಿಯವರನ್ನು ಚುನಾವಣಾ ಕಣಕ್ಕಿಳಿಸಿ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ ಇನ್ನೂ ಕೆಲವರು ತಮ್ಮ ಅಭಿಮಾನಿಗಳನ್ನು ಕಣಕ್ಕಿಳಿಸುವ ಮೂಲಕ ತಾವೇ ಅಭ್ಯರ್ಥಿ ಎಂದು ಭಾವಿಸಿ ಮತ ನೀಡುವಂತೆ ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ವಿಧಾನಸಭಾ ಚುನಾವಣೆಯ ನಂತರ ಗುಬ್ಬಿ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು ಪ್ರಸ್ತುತ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮದೆ ಆದ ವರ್ಚಸ್ಸಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಗದ್ದುಗೆ ಹಿಡಿದಿದ್ದ ಜೆಡಿಎಸ್ ಈ ಬಾರಿಯು ಅಧಿಕಾರ ಹಿಡಿಯಬೇಕು, ಹೆಚ್ಚಿನ ಸ್ಥಾನಗೆಲ್ಲಬೇಕು ಎನ್ನುವ ತಂತ್ರದ ಮೇಲೆ ಆ ವಾರ್ಡ್‍ನಲ್ಲಿ ಹೆಚ್ಚು ಕೆಲಸ ಮಾಡಿ ಪ್ರಭಾವ ಹೊಂದಿರುವ ಮುಖಂಡರಿಗೆ ಟಿಕೆಟ್ ನೀಡುವ ಲೆಕ್ಕಚಾರದಲ್ಲಿದೆ. ಆದರೆ ಈ ಬಾರಿ ಜೆಡಿಎಸ್ ಪಕ್ಷದಿಂದ ಗೆದ್ದು ಕ್ಯಾಬಿನೆಟ್ ಸಚಿವರಾಗಿರುವುದರಿಂದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂಬ ನಿರೀಕ್ಷೆಯನ್ನು ಪಕ್ಷದ ಮುಖಂಡರು ಇಟ್ಟುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಸಕ್ತ ಚುನಾವಣೆಯಲ್ಲಿ ತಂತ್ರ ಪ್ರತಿ-ತಂತ್ರಗಳನ್ನು ರೂಪಿಸುತ್ತಿವೆ. ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಮತದಾರ ಯಾರ ಕೈಹಿಡಿಯುತ್ತಾನೆ ಎಂಬುದನ್ನು ಕಾದುನೋಡಬೇಕಾಗಿದೆ.
ಕಳೆದ ಬಾರಿ ಬಿಜೆಪಿ ಮತ್ತು ಕೆಜೆಪಿ ವಿಭಾಗವಾಗಿ ಕೂದಲೆಳೆಯ ಅಂತರದಲ್ಲಿ ಸೋತಿದ್ದ ಬಿಜೆಪಿ ಈ ಬಾರಿ ಒಗ್ಗಟ್ಟಿನಿಂದ ಗೆಲುವು ಸಾಧಿಸಬೇಕು ಎಂದು ಸಿದ್ಧತೆಯಲ್ಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪರಾಜಿತಗೊಂಡಿದ್ದ ಎಸ್.ಡಿ.ದಿಲೀಪ್‍ಕುಮಾರ್ ನನ್ನ ಬೆಂಬಲಿತ ಅಭ್ಯರ್ಥಿಗಳು 19 ವಾರ್ಡ್‍ಗಲ್ಲಿ ಕಣಕಿಳಿಯಲಿದ್ದಾರೆ ಎಂದಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಆದ ನಿಟ್ಟಿನಲ್ಲಿ 19 ವಾರ್ಡ್‍ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಸಿದ್ದತೆಯಲ್ಲಿದೆ.
ಇತ್ತೀಚೆಗೆ ಉಪಮುಖ್ಯಂತ್ರಿಗಳು ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವಂತೆ ಹುರಿದುಂಬಿಸಿದ್ದಾರೆ. ಒಟ್ಟಾರೆ ಮೂರು ಪಕ್ಷಗಳು ತಮ್ಮದೆ ಆದ ವರ್ಚಸ್ಸಿನಲ್ಲಿ ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ ಪಟ್ಟಣವಾಸಿಗಳು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ ಹಳಬರಿಗಿಂತ ಹೊಸ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣಕ್ಕಿಳಿದಿದ್ದಾರೆ. ವಿದ್ಯಾವಂತ ಯುವಕರು ಪಟ್ಟಣವನ್ನು ಅಭಿವೃದ್ಧಿಪಡಿಸಬೇಕೆಂಬ ಮಹದಾಸೆಯಿಂದ ಪ್ರಸಕ್ತ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ವಾರ್ಡ್‍ವಾರು ಮೀಸಲಾತಿ ನಿಗದಿಯಾಗಿದ್ದು ವಾರ್ಡ್ 1 ಹಿಂದುಳಿದ ವರ್ಗ (ಅ)ಮಹಿಳೆ, ವಾರ್ಡ್ 2 ಸಾಮಾನ್ಯ ಮಹಿಳೆ, ವಾರ್ಡ್ 3 ಸಾಮಾನ್ಯ, ವಾರ್ಡ್ 4 ಹಿಂದುಳಿದ ವರ್ಗ (ಎ), ವಾರ್ಡ್ 5 ಸಾಮಾನ್ಯ, ವಾರ್ಡ್ 6 ಸಾಮಾನ್ಯ, ವಾರ್ಡ್ 7 ಹಿಂದುಳಿದ ವರ್ಗ (ಅ) ಮಹಿಳೆ, ವಾರ್ಡ್ 8 ಹಿಂದುಳಿದ ವರ್ಗ(ಅ), ವಾರ್ಡ್ 9ಪರಿಶಿಷ್ಟ ಜಾತಿ, ವಾರ್ಡ್ 10 ಪರಿಶಿಷ್ಟ ಜಾತಿ, ವಾರ್ಡ್ 11 ಸಾಮಾನ್ಯ, ವಾರ್ಡ್ 12 ಹಿಂದುಳಿದ ವರ್ಗ (ಅ), ವಾರ್ಡ್ 13 ಸಾಮಾನ್ಯ ಮಹಿಳೆ, ವಾರ್ಡ್ 14 ಸಾಮಾನ್ಯ, ವಾರ್ಡ್ 15 ಸಾಮಾನ್ಯ ಮಹಿಳೆ, ವಾರ್ಡ್ 16 ಸಾಮಾನ್ಯ ಮಹಿಳೆ, ವಾರ್ಡ್ 17 ಸಾಮಾನ್ಯ ಮಹಿಳೆ, ವಾರ್ಡ್ 18 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 19 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಪಟ್ಟಣ ಪಂಚಾಯ್ತಿಯ 19 ವಾರ್ಡ್‍ಗಳಲ್ಲಿ ಒಟ್ಟು 15887 ಮತದಾರರಿದ್ದು 7840 ಪುರುಷರು, 8046 ಮಹಿಳೆಯರು, ಇತರೆ 1 ಮತದಾರರಿದ್ದಾರೆ. 7 ಸೂಕ್ಷ್ಮ, 2 ಅತಿ ಸೂಕ್ಷ್ಮ ಹಾಗೂ 10 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
