ಗುಬ್ಬಿ ಪಟ್ಟಣ ಪಂಚಾಯಿತಿ ಚುನಾವಣೆ: ಅಂತಿಮ ಕಣದಲ್ಲಿ 68 ಅಭ್ಯರ್ಥಿಗಳು

ಗುಬ್ಬಿ

             ಪಟ್ಟಣ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 74 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದ ಗುರುವಾರ 6 ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು ಚುನಾವಣಾ ಕಣದಲ್ಲಿ 68 ಅಭ್ಯರ್ಥಿಗಳು ಅಂತಿಮವಾಗಿ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 19, ಜೆಡಿಎಸ್ ಪಕ್ಷದಿಂದ 19, ಬಿಜೆಪಿ ಪಕ್ಷದಿಂದ 16, ಪಕ್ಷೇತರರಾಗಿ 14 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ.

              ಪಟ್ಟಣ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದ್ದು ಅಭ್ಯರ್ಥಿಗಳು ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಹಗಲಿರುಳೆನ್ನದೆ ತಮ್ಮ ವಾರ್ಡ್‍ಗಳಲ್ಲಿಯೆ ಬೀಡುಬಿಟ್ಟಿದ್ದು ಮತಯಾಚನೆಯಲ್ಲಿ ತೊಡಗಿದ್ದಾರೆ. ಪಟ್ಟಣ ಪಂಚಾಯ್ತಿಯಲ್ಲಿ ಕಳೆದ ಬಾರಿ 17 ವಾರ್ಡ್‍ಗಳಿದ್ದವು. ಪ್ರಸಕ್ತ ಚುನಾವಣೆಯಲ್ಲಿ 19 ವಾರ್ಡ್‍ಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಪ್ರತಿಷ್ಠೆಯ ಕಣವಾಗುತ್ತಿದ್ದು ಕಳೆದ ಬಾರಿ ಆಯ್ಕೆಯಾಗಿದ್ದ ಬಹುತೇಕ ಸದಸ್ಯರಿಗೆ ಪ್ರಸಕ್ತ ಚುನಾವಣೆಗೆ ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯಿಂದ ಸ್ಥಳಾವಕಾಶ ಸಿಗದೆ ಬೇರೆ ಬೇರೆ ವಾರ್ಡ್‍ಗಳಿಂದ ಸ್ಪರ್ಧೆಗಿಳಿದಿದ್ದರೆ, ಇನ್ನು ಕೆಲವರು ತಮಗೆ ಬೇಕಾದವರನ್ನು ಕಣಕ್ಕಿಳಿಸಿ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

               ವಿಧಾನಸಭಾ ಚುನಾವಣೆಯ ನಂತರ ಗುಬ್ಬಿ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಪ್ರಸ್ತುತ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳು ತಮ್ಮದೆ ಆದ ವರ್ಚಸ್ಸಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಗದ್ದುಗೆ ಹಿಡಿದಿದ್ದ ಜೆಡಿಎಸ್ ಈ ಬಾರಿಯು ಅಧಿಕಾರ ಹಿಡಿಯಬೇಕು. ಹೆಚ್ಚಿನ ಸ್ಥಾನಗೆಲ್ಲಬೇಕು ಎನ್ನುವ ತಂತ್ರದ ಮೇಲೆ 19 ವಾರ್ಡ್‍ನಲ್ಲಿ ಹೆಚ್ಚು ಕೆಲಸ ಮಾಡಿ ಪ್ರಭಾವ ಹೊಂದಿರುವ ಮುಖಂಡರಿಗೆ ಟಿಕೆಟ್ ನೀಡಲಾಗಿದೆ.

              ಆದರೆ ಈ ಬಾರಿ ಜೆಡಿಎಸ್ ಪಕ್ಷದಿಂದ ಗೆದ್ದು ಕ್ಯಾಬಿನೆಟ್ ಸಚಿವರಾಗಿರುವುದರಿಂದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂಬ ನಿರೀಕ್ಷೆಯನ್ನು ಪಕ್ಷದ ಮುಖಂಡರು ಇಟ್ಟುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಸಕ್ತ ಚುನಾವಣೆಯಲ್ಲಿ ತಮ್ಮದೆ ಆದ ತಂತ್ರ-ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಮತದಾರ ಯಾರ ಕೈಹಿಡಿಯುತ್ತಾನೆ ಎಂಬುದನ್ನು ಕಾದುನೋಡಬೇಕಾಗಿದೆ.

              ಕಳೆದ ಬಾರಿ ಬಿಜೆಪಿ ಮತ್ತು ಕೆಜೆಪಿ ವಿಭಾಗವಾಗಿ ಕೂದಲೆಳೆಯ ಅಂತರದಲ್ಲಿ ಸೋತಿದ್ದ ಬಿಜೆಪಿ ಈ ಬಾರಿ ಒಗ್ಗಟಿನಿಂದ ಗೆಲುವು ಸಾಧಿಸಬೇಕು ಎಂದು ಸಿದ್ಧತೆಯಲ್ಲಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ 16 ವಾರ್ಡ್‍ಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣಾ ಸಿದ್ಧತೆ ಮಾಡಿಕೊಂಡಿದ್ದು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರ ಮನಸೆಳೆಯುವತ್ತ ಮುಂದಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಎಲ್ಲಾ 19 ವಾರ್ಡ್‍ಗಳಿಗೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ.

               ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪರಾಜಿತಗೊಂಡಿದ್ದ ಎಸ್.ಡಿ.ದಿಲೀಪ್ ಕುಮಾರ್ ಪ್ರಸಕ್ತ ಚುನಾವಣೆಯಲ್ಲಿ 9 ವಾರ್ಡ್‍ಗಳಿಗೆ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕಿಳಿಸಿದ್ದು ತಮ್ಮದೆ ಆದ ವರ್ಚಸ್ಸಿನಲ್ಲಿ ಮತದಾರರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟಾರೆ ಮೂರು ಪಕ್ಷಗಳು ತಮ್ಮದೇ ಆದ ವರ್ಚಸ್ಸಿನಲ್ಲಿ ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ ಪಟ್ಟಣವಾಸಿಗಳು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

                ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಹಗಲಿರುಳೆನ್ನದೆ ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಹಳಬರಿಗಿಂತ ಹೊಸ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣಕ್ಕಿಳಿದಿದ್ದಾರೆ. ವಿದ್ಯಾವಂತ ಯುವಕರು ಪಟ್ಟಣವನ್ನು ಅಭಿವೃದ್ಧಿಪಡಿಸಬೇಕೆಂಬ ಮಹದಾಸೆಯಿಂದ ಪ್ರಸಕ್ತ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.

                 ಆದರೆ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು ಮತದಾರ ಯಾರಿಗೆ ಮಣೆಹಾಕುತ್ತಾನೆ ಎಂಬುದನ್ನು ಕಾದುನೋಡಬೇಕಿದೆ. ಪಟ್ಟಣ ಪಂಚಾಯ್ತಿಯ 19 ವಾರ್ಡ್‍ಗಳಲ್ಲಿ ಒಟ್ಟು 15887 ಮತದಾರರಿದ್ದು 7840 ಪುರುಷರು, 8046 ಮಹಿಳೆಯರು, ಇತರೆ 1 ಮತದಾರರಿದ್ದಾರೆ. 7 ಸೂಕ್ಷ್ಮ, 2 ಅತಿ ಸೂಕ್ಷ್ಮ ಹಾಗೂ 10 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈಗಾಗಲೆ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಂಡಿರುವ ಚುನಾವಣಾಧಿಕಾರಿಗಳು ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಅಗತ್ಯವಿರುವ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಂಡಿದೆ.

Recent Articles

spot_img

Related Stories

Share via
Copy link