ಗುಬ್ಬಿ : ಸ್ಮಶಾನ ಜಾಗ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

 ಗುಬ್ಬಿ : 

??????

      ಪಟ್ಟಣದ ನಿವಾಸಿಗಳಿಗೆ ಸಾರ್ವಜನಿಕ ಸ್ಮಶಾನ ಒದಗಿಸುವಲ್ಲಿ ವಿಫಲವಾದ ಪಟ್ಟಣ ಪಂಚಾಯಿತಿ ಈಗಾಗಲೇ ಗುರುತಿಸಲಾಗಿದ್ದ ನಾಲ್ಕು ಎಕರೆ ಸ್ಮಶಾನ ಸ್ಥಳವನ್ನು ಅಚ್ಚಕಟ್ಟು ಮಾಡಲು ಸರ್ಕಾರದ ಅನುದಾನ ಬಳಸಿಕೊಳ್ಳಲು ವಿಳಂಬ ಮಾಡುತ್ತಿರುವ ಪಟ್ಟಣ ಪಂಚಾಯ್ತಿ ವಿರುದ್ದ ಪಪಂ ಕಚೇರಿ ಮುಂದೆ ಹದಿನೆಂಟು ಕೋಮಿನ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿದರು.

      ಬೆಳಿಗ್ಗೆ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿದ ಎಲ್ಲಾ ಕೋಮಿನ ಮುಖಂಡರು ಸಾರ್ವಜನಿಕ ಸ್ಮಶಾನ ಮೊದಲಿನಿಂದಲೂ ಹೇಮಾವತಿ ಕಚೇರಿ ಹಿಂಬದಿಯಲ್ಲಿನ ನಾಲ್ಕು ಎಕರೆ ಪ್ರದೇಶದಲ್ಲಿ ನಡೆಸಲಾಗಿತ್ತು. ಸುಮಾರು ಹದಿನಾಲ್ಕು ಕೋಮಿನ ಜನರಿಗೆ ಈ ಸ್ಮಶಾನ ಅನಿವಾರ್ಯವಾಗಿದೆ. ಇಲ್ಲಿ ತೀರ ಹದಗೆಟ್ಟ ಪರಿಸ್ಥಿತಿ ಎದುರಾಗಿ ಸ್ಮಶಾನ ಸ್ಥಳದಲ್ಲಿ ಕಾಡುಜಾಲಿ ಮರಗಳು ಎಲ್ಲಂದರಲ್ಲಿ ಬೆಳೆದು ಕಾಡು ನಿರ್ಮಾಣವಾಗಿದೆ. ಈ ಜಂಗಲ್ ತೆರವು ಮಾಡಿಕೊಡಲು ಮನವಿ ಮಾಡಲು ಮನವಿ ಮಾಡಿದರು. ಸರ್ಕಾರದ ಅನುದಾನದಲ್ಲಿ 11.50 ಲಕ್ಷ ರೂಗಳು ಮಂಜೂರು ಮಾಡಲಾಗಿದೆ. ಈ ಹಣ ಅನುಷ್ಠಾನಕ್ಕೆ ತರುವ ಮುನ್ನ ಜಂಗಲ್ ತೆರವಿಗೆ ಮೊದಲೇ ಮುಖ್ಯಾಧಿಕಾರಿಗಳು ತಕರಾರು ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಈ ಜತೆಗೆ ಪಪಂ ಅಧ್ಯಕ್ಷರು ನನ್ನ ಗಮನಕ್ಕೆ ಬಾರದೇ ಯಾವುದೇ ಕೆಲಸ ಮಾಡುವಂತಿಲ್ಲ ಎಂದು ಸ್ವಪ್ರತಿಷ್ಠೆ ಮರೆದಿದ್ದಾರೆ ಎಂದು ಪಪಂ ಸದಸ್ಯ ಸಿ.ಮೋಹನ್ ಕಿಡಿಕಾರಿದರು.

      ಸುಮಾರು 30 ವರ್ಷಗಳಿಗೂ ಹಿಂದೆ ಮಾರನಕಟ್ಟೆ ಪ್ರದೇಶದಲ್ಲೇ ನಾಲ್ಕು ಎಕರೆ ಪ್ರದೇಶ ಸ್ಮಶಾನಕ್ಕೆ ನೀಡಲಾಗಿದೆ. ಇಲ್ಲಿ ಸಾವಿರಾರು ಮಂದಿ ಸದ್ಗತಿ ಕಾಣಿಸಲಾಗಿದೆ. ಇದೇ ಸ್ಥಳವನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಅಚ್ಚಕಟ್ಟು ಮಾಡಿಕೊಡಲು ಮೀನಾಮೇಷ ಎಣಿಸಿದೆ. ಮಳೆ ಬಂದರೆ ಕಾಡುಜಾಲಿ ಗಿಡಗಳು ಬೆಳೆಯುತ್ತಿವೆ. ಸ್ಮಶಾನಕ್ಕೆ ಹೋಗಲು ಅಸಾಧ್ಯವಾದ ದುಸ್ಥಿತಿಯ ಫಲ ಈಚೆಗೆ ಶವಯಾತ್ರೆ ವೇಳೆ ಶವ ಸಮೇತ ಜಾರಿ ಬಿದ್ದು ಸಾರ್ವಜನಿಕರು ಗಾಯಗೊಂಡ ಘಟನೆ ನಿದರ್ಶನವಾಗಿದೆ. ಈ ಬಗ್ಗೆ ದೂರು ನೀಡಿ ಜಂಗಲ್ ತೆರವಿಗೆ ಮನವಿ ಮಾಡಲಾಗಿ 11 ಲಕ್ಷ ರೂಗಳ ಕೆಲಸ ಮಾಡುವ ವೇಳೆಗೆ ಎಂದೂ ಕಾಣದ ನಿಯಮ, ಕಾನೂನು ಹೇಳಿ ಕೆಲಸ ನಿಲ್ಲಿಸಿದ್ದಾರೆ. ಈ ಕ್ಷಣ ಯಾರಾದರೂ ಸಾವನ್ನಪ್ಪಿದರೂ ಮುಕ್ತಿ ಕಾಣಿಸಲು ಸ್ಮಶಾನವಿಲ್ಲವಾಗಿದೆ. ತಾಲ್ಲೂಕು ಕೇಂದ್ರ ಎನಿಸಿಕೊಂಡು ಪೈಲಟ್ ತಾಲ್ಲೂಕಿನಲ್ಲಿ ಈ ದುಸ್ಥಿತಿ ವಿಷಾದಕರ ಎಂದು ಸದಸ್ಯ ರೇಣುಕಾಪ್ರಸಾದ್ ಟೀಕಿಸಿದರು.

      ಬೆರಳೆಣಿಕೆ ಜನಾಂಗಕ್ಕೆ ಸ್ಮಶಾನ ಸ್ಥಳವಿದೆ. ಮತ್ತೇ ಕೆಲವರು ತಮ್ಮ ಜಮೀನಿನಲ್ಲಿ ಶವ ಸಂಸ್ಕಾರ ಕಾರ್ಯ ಸುಸೂತ್ರವಾಗಿ ಮಾಡಿಕೊಳ್ಳುತ್ತಾರೆ. ಆದರೆ ಜಮೀನು ರಹಿತರಿಗೆ ಹಾಗೂ ಸ್ಮಶಾನವಿಲ್ಲದ ಜನಾಂಗಕ್ಕೆ ಸೂಕ್ತ ಸಾರ್ವಜನಿಕ ಸ್ಮಶಾನ ಅವಶ್ಯವಿದೆ. ಮೂಲಭೂತ ಸವಲತ್ತಿನ ಪೈಕಿ ಸ್ಮಶಾನ ಜಾಗ ನೀಡುವ ಬಗ್ಗೆ ಸರ್ಕಾರ ಗಂಭೀರ ತೀರ್ಮಾನ ಕೈಗೊಳ್ಳಬೇಕಿದೆ. ರುದ್ರಭೂಮಿ ನಿರ್ಮಾಣ ಜತೆಗೆ ಚಿತಾಗಾರ ಸ್ಥಾಪನೆಗೆ ಸರ್ಕಾರವೇ ಅನುದಾನ ನೀಡುತ್ತಿದೆ. ಆದರೆ ಸ್ಥಳೀಯ ಸಂಸ್ಥೆ ಸೂಕ್ತ ಸ್ಥಳ ನೀಡಿಲ್ಲ. ಇರುವ ಜಾಗದ ಬಗ್ಗೆ ತಾಂತ್ರಿಕ ತೊಂದರೆ ಎಂದು ಹೇಳಿ ಜಾರಿಕೆ ಉತ್ತರ ನೀಡುತ್ತಿದ್ದಾರೆ. ಪ್ರತಿಭಟನೆಗೆ ಮುನ್ನ ಮುಖ್ಯಾಧಿಕಾರಿಗಳು ನಾಪತ್ತೆಯಾಗಿರುವುದು ಬೇಸರ ತಂದಿದೆ. ಈ ಬಗ್ಗೆ ಕೂಡಲೇ ಕ್ರಮವಹಿಸಿ ಸ್ಮಶಾನಕ್ಕೆ ಇರುವ ನಾಲ್ಕು ಎಕರೆ ಪ್ರದೇಶವನ್ನೇ ಅಚ್ಚುಕಟ್ಟುಗೊಳಿಸಿ ಬಳಕೆ ಅನುವು ಮಾಡಬೇಕು ಎಂದು ಸವಿತಾ ಸಮಾಜ ಮುಖಂಡ ಪ್ರಕಾಶ್ ಆಗ್ರಹಿಸಿದರು.

     ಸ್ಥಳಕ್ಕೆ ಧಾವಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮಾರನಕಟ್ಟೆ ಪ್ರದೇಶದಲ್ಲಿ ಈ ಹಿಂದೆ ನೀಡಲಾದ ಸ್ಮಶಾನವನ್ನು ಮೂರು ತಿಂಗಳಲ್ಲಿ ವಿಶೇಷ ಅನುದಾನದಡಿ ಅಚ್ಚಕಟ್ಟು ಮಾಡಿಸಿಕೊಡಲಾಗುವುದು. ಸದ್ಯ ಜಂಗಲ್ ತೆರವು ಪಟ್ಟಣ ಪಂಚಾಯಿತಿವತಿಯಿಂದ ಮಾಡಿಸಿಕೊಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

      ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ, ಸ್ಮಶಾನ ಸ್ಥಳ ನೀಡಲು ನಮ್ಮ ಅಭ್ಯಂತರವಿಲ್ಲ ತಾಂತ್ರಿಕ ಸಮಸ್ಯೆ ಇರುವುದರಿಂದ ಮುಂಜೂರು ಮಾಡಲು ವಿಳಂಬವಾಗಿದೆ ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಸ್ಮಶಾನ ಸ್ಥಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

     ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಶೌಕತ್ ಆಲಿ, ಕುಮಾರ್, ಮಹಮದ್ ಸಾಧಿಕ್, ಶಶಿಕುಮಾರ್ ಮುಖಂಡರಾದ ಪಟೇಲ್ ಕೆಂಪೇಗೌಡ, ರಾಜಣ್ಣ, ಶಿವಪ್ಪ, ಜಿ.ಸಿ.ಲೋಕೇಶ್‍ಬಾಬು, ನಟರಾಜು, ಚಂದನ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap