ಗೌಡರಿಗೆ ರಾಜ್ಯದ ಅಭಿವೃದ್ದಿಗಿಂತ ಕುಟುಂಬ ಮುಖ್ಯ:ಯಡಿಯೂರಪ್ಪ

ಚಿತ್ರದುರ್ಗ

        ಜೆಡಿಎಸ್.ನ ಅಪ್ಪ ಮಕ್ಕಳು, ಮೊಮ್ಮಕ್ಕಳಿಗೆ ರಾಜ್ಯದ ಅಭಿವೃದ್ದಿ ಬೇಕಿಲ್ಲ. ಚುನಾವಣಗೆ ನಿಲ್ಲುವುದೇ ಅವರ ಸಾಧನೆ ಎಂದು ಬಿಜೆಪಿ.ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೆಡಿಎಸ್.ವರಿಷ್ಟ ಹೆಚ್.ಡಿ.ದೇವೆಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್, ಪ್ರಜ್ವಲ್ ಇವರುಗಳ ವಿರುದ್ದ ಕಿಡಿಕಾರಿದರು.

         ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನೇಕಲ್ ನಾರಾಯಣಸ್ವಾಮಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ.ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

          ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಚಿತ್ರದುರ್ಗ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆಗೆ ಜಾರಿಗೊಳಿಸಿ ಹಣ ಮಂಜೂರು ಮಾಡಿದೆ. ಆದರೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಅನುಷ್ಠಾನಗೊಳಿಸುವುದಿರಲಿ ಇನ್ನು ಭೂಮಿಯನ್ನೇ ಸ್ವಾಧೀನ ಪಡಿಸಿಕೊಂಡಿಲ್ಲ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ರೈತರು ಕಂಗಾಲಾಗಿದ್ದರೆ ಇದ್ಯಾವುದನ್ನು ಲೆಕ್ಕಿಸದೆ ಅಪ್ಪ ಮಕ್ಕಳು ಮೋಜಿನಲ್ಲಿ ತೊಡಗಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಾದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ 22 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಇದಕ್ಕೆ ಮತದಾರರ ಆಶೀರ್ವಾದ ಬೇಕು ಎಂದು ಕೋರಿದರು.

          ಜಾನುವಾರುಗಳಿಗೆ ಮೇವು ನೀರಿಲ್ಲ. ರೈತರು ಕೆಲಸ ಹುಡುಕಿಕೊಂಡು ಗುಳೆ ಹೋಗುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ರಾಜ್ಯ ಸಮ್ಮಿಶ್ರ ಸರ್ಕಾರ ಪಥನವಾಗಲಿದೆ. ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡುವುದರಲ್ಲಿ ಅಪ್ಪ-ಮಕ್ಕಳು ನಿಸ್ಸೀಮರು. ಮೈಮರೆತು ಕುಳಿತುಕೊಳ್ಳಬೇಡಿ. ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಿರುವುದರಿಂದ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾಗಿರುವುದರಿಂದ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಬಿಜೆಪಿ.ಸಾಧನೆ ಹಾಗೂ ಕಾಂಗ್ರೆಸ್-ಜೆಡಿಎಸ್.ವೈಫಲ್ಯಗಳನ್ನು ತಿಳಿಸಿ. ಕೇಂದ್ರದಲ್ಲಿ ಬಿಜೆಪಿ.ಯನ್ನು ಅಧಿಕಾರಕ್ಕೆ ತನ್ನಿ ಎಂದು ವಿನಂತಿಸಿದರು.

         ಕೂಲಿ ಕಾರ್ಮಿಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮೋದಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 44 ಲಕ್ಷ ರೂ.ಗಳವರೆಗೆ ಯಾವುದೇ ವಹಿವಾಟು ನಡೆಸಿದರೆ ತೆರಿಗೆ ಕಟ್ಟುವಂತಿಲ್ಲ. ಇಂತಹ ಪ್ರಧಾನಿ ದೇಶಕ್ಕೆ ಯಾರು ಸಿಗುವುದಿಲ್ಲ ಎನ್ನುವುದನ್ನು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಮನದಲ್ಲಿಟ್ಟುಕೊಂಡು ಮತಚಲಾಯಿಸಿ ಎಂದು ಮನವಿ ಮಾಡಿದರು.

         ಶಾಸಕರುಗಳಾದ ಬಿ.ಶ್ರೀರಾಮುಲು, ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್, ಪೂರ್ಣಿಮ ಶ್ರೀನಿವಾಸ್, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಜಿ.ಎಂ.ಸುರೇಸ್, ಟಿ.ಜಿ.ನರೇಂದ್ರನಾಥ್, ಲಿಂಗಮೂರ್ತಿ, ಮಾಜಿ ಶಾಸಕ ರಮೇಶ್, ಜಿ.ಪಂ.ಸದಸ್ಯ ಅಜ್ಜಪ್ಪ, ಮಾಜಿ ಸದಸ್ಯ ನಾಗಿರೆಡ್ಡಿ, ಎಸ್.ಆರ್.ಗೌಡ, ಮಂಜಣ್ಣ ಸೇರಿದಂತೆ ಬಿಜೆಪಿ.ಯ ಮುಖಂಡರು ಹಾಗೂ ಸಹಸ್ರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap