ಗ್ಯಾರೆಂಟಿ ಜಾರಿ : ಜೂ.1ರಂದು ಅಧಿಸೂಚನೆ ಸಾಧ್ಯತೆ

ಬೆಂಗಳೂರು: 

      ಮುಖ್ಯಮಂತ್ರಿ ಸಿದ್ದರಾಮಯ್ಯ   ಗ್ಯಾರಂಟಿ ಅನುಷ್ಠಾನ ಸಂಬಂಧ ಹಣಕಾಸು ಮತ್ತಿತರ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ ಎರಡು ದಿನಗಳಲ್ಲಿ ಮಾರ್ಗಸೂಚಿ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ.

     ಐದು ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಸಂಪನ್ಮೂಲ ಕ್ರೋಡೀಕರಣದ ಜತೆಗೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ.ಇಲಾಖಾವಾರು ಅನುದಾನದಲ್ಲಿ ಹೆಚ್ಚು ಕಡಿತ ಮಾಡಿದರೆ ಸಚಿವರಿಂದ ವಿರೋಧ ವ್ಯಕ್ತವಾಗಬಹುದು. ಎಷ್ಟೇ ಕಡಿತ ಮಾಡಿದರೂ ಸುಮಾರು 15 ಸಾವಿರ ಕೋಟಿ ರೂ. ಮಾತ್ರ ಲಭ್ಯವಾಗಬಹುದು. ಉಳಿದಂತೆ 35 ಸಾವಿರ ಕೋಟಿ ರೂ. ಹೊಂದಿಸಲೇಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಬುಧವಾರ ಮತ್ತೆ ಸಭೆ

    ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಬುಧವಾರ ಸಿಎಂ ಸಿದ್ದರಾಮಯ್ಯ ಮತ್ತೂಮ್ಮೆ ಸಚಿವರ ಜತೆ ಸಮಾಲೋಚನೆ ನಡೆಸಲಿದ್ದು, ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು.

    ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕಂದಾಯ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಆಹಾರ ಮತ್ತು ನಾಗರಿಕ ಪೂರೈಕೆ, ಯುವಜನ ಸೇವೆ ಇಲಾಖೆಗಳ ನೆರವು ಪಡೆಯಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ನಡೆದ ಚರ್ಚೆಯೇನು?

    ರಾಜ್ಯದಲ್ಲಿ 2.14 ಕೋಟಿ ಕುಟುಂಬಗಳಿದ್ದು, ಆ ಪೈಕಿ ಸುಮಾರು 1.70 ಕೋಟಿ ಕುಟುಂಬಗಳು ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ಹೊಂದಿವೆ. ಯಾರು ಫ‌ಲಾನುಭವಿಗಳಾಗಲು ಅರ್ಹರು ಎಂಬ ಮಾನದಂಡ ನಿಗದಿ ಮಾಡಿದರೆ ಸ್ಪಷ್ಟತೆ ಸಿಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟರು ಎನ್ನಲಾಗಿದೆ.

   200 ಯೂನಿಟ್‌ ಒಳಗೆ ಬಳಕೆ ಮಾಡುವವರಿಗೆ ಉಚಿತ ವಿದ್ಯುತ್‌ ಯೋಜನೆ ಜಾರಿ ಮಾಡಬೇಕೇ ಅಥವಾ 200 ಯೂನಿಟ್‌ವರೆಗೆ ಉಚಿತ ನೀಡಿ ಅನಂತರ ಬಳಸುವ ವಿದ್ಯುತ್‌ಗೆ ಶುಲ್ಕ ವಿಧಿಸಬೇಕೇ ಎಂಬ ಬಗ್ಗೆ ಚರ್ಚೆಯಾಗಿದೆ.

   ಬಡ ಹಾಗೂ ಮಧ್ಯಮ ವರ್ಗಕ್ಕೆ ಉಚಿತ ವಿದ್ಯುತ್‌ ಕೊಡಬೇಕಾಗುತ್ತದೆ. ಇತರ ಕುಟುಂಬ ಗಳಿಗೆ ಮಾನದಂಡ ನಿಗದಿ ಸೂಕ್ತ. ಅದೇ ರೀತಿ ಮಹಿಳೆಯರಿಗೆ ಉಚಿತ ಬಸ್‌ ಸಂಚಾರ ವಿಚಾರದಲ್ಲೂ ಮಾನದಂಡ ನಿಗದಿ ಮಾಡ ಬೇಕು. ಶೇ. 45ರಷ್ಟು ಮಹಿಳೆಯರು ಪ್ರಯಾಣ ಮಾಡುತ್ತಿದ್ದು, ಪ್ರತ್ಯೇಕ ಬಸ್‌ ಪಾಸ್‌ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು ಎನ್ನಲಾಗಿದೆ.

ಉಚಿತ ಸಂಚಾರ: ಇಂದು ಸಭೆ

   ಮಹಿಳೆಯರಿಗೆ ಉಚಿತ ಬಸ್‌ ಸಂಚಾರ ಯೋಜನೆ ಜಾರಿ ಸಂಬಂಧ ಮಂಗಳವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

    ಇದೇ ರೀತಿ ಆಯಾ ಇಲಾಖೆಗಳ ಸಚಿವರು ಸಭೆ ನಡೆಸಿ ಮಾಹಿತಿ ಸಂಗ್ರಹಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ಕೊಟ್ಟೇ ಕೊಡುತ್ತೇವೆ. ನಾವು ಭರವಸೆ ನೀಡಿದ್ದೇವೆ, ಈಡೇರಿಸುತ್ತೇವೆ. ವಿಪಕ್ಷಗಳು ತಾಳ್ಮೆಯಿಂದ ಇರಬೇಕು ಎಂದು ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ರಾಮ ಲಿಂಗಾರೆಡ್ಡಿ ಹೇಳಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap