ಗ್ಯಾರೆಂಟಿ ಮರೆತರೆ ಪೋಸ್ಟರ್‌ ಬಿಡುಗಡೆ : ರವಿಕುಮಾರ್

ಬೆಂಗಳೂರು: 

     ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ವಿಚಾರದಲ್ಲಿ ನುಡಿದಂತೆ ನಡೆಯದೆ ಇದ್ದರೆ ವಚನ ಭ್ರಷ್ಟ ಪಟ್ಟ ಕಟ್ಟುತ್ತೇವೆ. ವಚನಭ್ರಷ್ಟ ಪೋಸ್ಟರ್ ರಿಲೀಸ್ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಎಚ್ಚರಿಸಿದ್ದಾರೆ.

     ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಸರಕಾರದ ಕ್ಯಾಬಿನೆಟ್ ನಾಳೆ ನಡೆಯಲಿದೆ. ಈಗಾಗಲೇ ಸರಕಾರ ರಚನೆ ಆಗುವ ಮೊದಲು, ಅಧಿಕಾರಕ್ಕೆ ಬರುವ ಮೊದಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಕರ್ನಾಟಕದ ಜನತೆಗೆ ಏನು ಮಾತು ಕೊಟ್ಟಿದ್ದಾರೋ, ವಚನ ನೀಡಿದ್ದಾರೋ ಆ ಪ್ರಕಾರ ನಡೆಯಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದರು.

 

    ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದಿದ್ದರು. ಈಗ ಏನೇನೋ ಕಂಡಿಷನ್ ಹಾಕುತ್ತಿದ್ದಾರೆ. ಅಂದರೆ ಅದು ವಚನಭ್ರಷ್ಟತೆ. ಎಲ್ಲ ನಿರುದ್ಯೋಗಿ ಪದವೀಧರರಿಗೆ 3 ಸಾವಿರ, ಎಲ್ಲ ನಿರುದ್ಯೋಗಿ ಡಿಪ್ಲೊಮ ಪಡೆದವರಿಗೆ 1,500 ರೂಪಾಯಿ ಕೊಡುವುದಾಗಿ ತಿಳಿಸಿದ್ದರು. ಈಗ ಕಂಡಿಷನ್ ಹಾಕುತ್ತಿದ್ದು, ವಚನಭ್ರಷ್ಟತೆ ಕಾಣುತ್ತಿದೆ. 200 ಯೂನಿಟ್ ಕರೆಂಟ್ ಫ್ರೀ. ಮಹದೇವಪ್ಪ ನಿನ್ಗೂ ಫ್ರೀ. ನನಗೂ ಫ್ರೀ ಎಂದಿದ್ದರು. ಅದರಂತೆ ನಡೆಯದಿದ್ದರೆ ವಚನ ಭ್ರಷ್ಟತೆ ಎಂದು ಆರೋಪಿಸಿದರು.

    ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 85 ಸಾವಿರ ಕೋಟಿ ರೂಪಾಯಿ ವೆಚ್ಚ ಆಗಲಿದೆ. ಇದನ್ನು ಎಲ್ಲಿಂದ ತರುತ್ತೀರಾ? ಈ ಹಣ ಹೇಗೆ ಹೊಂದಿಸುತ್ತೀರಾ? ಕೆಎಸ್‍ಆರ್‍ಟಿಸಿ ಈಗಾಗಲೇ ನಷ್ಟದಲ್ಲಿದೆ. ವೇತನ, ಡೀಸೆಲ್, ಬಸ್ ಪಂಕ್ಚರ್‍ಗೂ ದುಡ್ಡಿಲ್ಲದ ಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ಉಚಿತ ಬಸ್ ಪ್ರಯಾಣ ಎಂದಿದ್ದೀರಿ ಎಂದು ಪ್ರಶ್ನೆ ಮುಂದಿಟ್ಟರು.

   ಅಧಿಕಾರಕ್ಕೆ ಬಂದ 24 ಗಂಟೆ ಎಂದು ಹೇಳಿದ್ದೀರಿ. ಈಗೇನಾಗಿದೆ? 24 ಗಂಟೆ ಅಲ್ಲ. 14 ದಿನಗಳೇ ಕಳೆದಿವೆ. ಹಾಗಾಗಿ ಬಿಜೆಪಿ ನಾಳೆ ಕ್ಯಾಬಿನೆಟ್ ನಿರ್ಧಾರವನ್ನು ಕಾಯಲಿದೆ. ನೀವು ನುಡಿದಂತೆ ನಡೆಯದೆ ಇದ್ದರೆ ನಾವು ನಿಮಗೆ ವಚನಭ್ರಷ್ಟ ಪಟ್ಟ ಕಟ್ಟುತ್ತೇವೆ. ವಚನಭ್ರಷ್ಟ ಪೋಸ್ಟರ್ ರಿಲೀಸ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap