ಬಳ್ಳಾರಿ:
ಗ್ರಾಮಾಂತರ ಪ್ರದೇಶದಲ್ಲಿನ ಜನರು ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ದೃಷ್ಟಿಯಿಂದ ಗ್ರಾಮೀಣ ಕೈಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಹಳ್ಳಿಗಳಲ್ಲೇ ದೊರೆಯುವ ಉತ್ಪನ್ನಗಳನ್ನು ಬಳಸಿಕೊಂಡು ಗುಡಿ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶವನ್ನು ಒದಗಿಸಲು ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಸಣ್ಣ ಕೈಗಾರಿಕೆಗಳ ಸಚಿವ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ಅವರು ಇಂದು ಅರಸಿಕೆರೆ ತಾಲ್ಲೂಕಿನ ಯಾದಾಪುರದಲ್ಲಿ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿಯ ವತಿಯಿಂದ ನಿರ್ಮಿಸಲಾದ ಕಾಯರ್ ಭೂವಸ್ತ್ರ ತಯಾರಿಕಾ ಘಟಕ ಮತ್ತು ಬಣ್ಣದ ಮನೆಯ ಉದ್ಗಾಟನೆಯನ್ನು ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದಲ್ಲಿ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒಲವು ತೋರುತ್ತಿದೆ.
ಗ್ರಾಮೀಣ ಪ್ರದೇಶದ ಮಹಿಳೆಯರು ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರು ಆರ್ಥಿಕವಾಗಿ ಮೇಲೆ ಬರಲು ಹೊಸ ಹೊಸ ಕಸುಬುಗಳನ್ನು ಉತ್ತೇಜಿಸಿ, ಹೊಸ ಕನಸುಗಳನ್ನು ಬಿತ್ತಿ ಬೆಳೆಸುವುದು ಸರ್ಕಾರದ ಆಶಯ. ಮಹಿಳೆಯರಲ್ಲಿ ಚೈತನ್ಯ ತುಂಬಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸುವಂತೆ ಮಾಡುವ ಜತೆಗೆ ಮಹಿಳೆಯರ ಬದುಕಿನಲ್ಲಿ ನೆಮ್ಮದಿ ಮೂಡಿಸುವಂತೆ ಮಾಡುವ ಸಂಕಲ್ಪವನ್ನು ಸರ್ಕಾರ ಮಾಡಿದೆ ಎಂದ ಸಚಿವರು ಗ್ರಾಮೀಣ ಗುಡಿ ಕೈಗಾರಿಕೆಗಳು ಗ್ರಾಮೀಣ ಜನತೆಯ ದಕ್ಷತೆ, ಕ್ಷಮತೆ ಮತ್ತು ನೈಪುಣ್ಯತೆಯನ್ನು ಹೆಚ್ಚಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲು ನೆರವಾಗುತ್ತದೆ. ಆ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಿದಂತಾಗುತ್ತದೆ. ಅಲ್ಲದೇ ಗ್ರಾಮೀಣ ಉದ್ಯೋಗಗಳು ಜನರ ಆದಾಯವನ್ನು ಹೆಚ್ಚಿಸಿ ಬಡತನದಿಂದ ಮುಕ್ತರಾಗಲು ಸಹಕಾರಿಯಾಗಬಲ್ಲದು ಎಂದರು.
ರಾಜ್ಯದಲ್ಲಿ ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆಗೆ ವಿಪುಲವಾದ ಅವಕಾಶವಿದೆ. ಕನಿಷ್ಟ ವಿದ್ಯಾರ್ಹತೆಯನ್ನು ಹೊಂದಿದ ಯುವಕ/ಯುವತಿಯರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸಿಗುವಂತಹ ಕೈಗಾರಿಕೆಗಳನ್ನು ಉತ್ತೇಜಿಸಿ ಪ್ರೋತ್ಸಾಯಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ. ಮಹಿಳೆಯರಿಗೆ ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸಿ, ಕೌಶಲ್ಯ ತರಬೇತಿ ನೀಡಿ ಗುಣಮಟ್ಟದ ತೆಂಗಿನ ನಾರಿನ ಉತ್ಪನ್ನಗಳಾದ ತೆಂಗಿನ ನಾರು, ಹುರಿ, ಮ್ಯಾಟ್ ಮ್ಯಾಟಿಂಗ್, ರಬ್ಬರೈಸಡ್ ಕಾಯರ್ ಹಾಸಿಗೆ, ದಿಂಬು, ಕಾಯರ್ ಕಾಂಪೋಸಿಟ್ ಬೋರ್ಡ್‍ಗಳಿಂದ ಶಾಲೆ ಬೆಂಚು, ಟೇಬಲ್ ಉತ್ಪಾದಿಸಲು ಸಾಧ್ಯವಿದೆ. ಅಲ್ಲದೇ ಕಚ್ಚಾ ಸಾಮಗ್ರಿಯಾಗಿರುವ ತೆಂಗಿನ ಸಿಪ್ಪೆಯನ್ನು ಕಾಂಪೋಸ್ಟ್ ಉತ್ಪಾದನೆಗೆ ಉಪಯೋಗಿಸಿಕೊಳ್ಳಲು ಅವಕಾಶವಿದೆ.
ಸ್ಥಳೀಯವಾಗಿ ಉತ್ಪಾದಿಸುವ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯ ಜತೆಗೆ ರಾಜ್ಯದ ತೆಂಗಿನ ಅಭಿವೃದ್ಧಿ ನಿಗಮವೇ ಖರೀದಿಸುವ ಮೂಲಕ ಮಾರುಕಟ್ಟೆಯ ವ್ಯವಸ್ಥೆಯನ್ನು ಒದಗಿಸಲಿದೆ ಎಂದ ಅವರು ತೆಂಗಿನ ನಾರಿನ ಉದ್ಯಮವನ್ನು ಸ್ಥಳೀಯ ಜನರಿಗೆ ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಉದ್ಯೋಗಾವಕಾಶ ಅಭಿವೃದ್ಧಿ ಪಡಿಸಲು ಸರ್ಕಾರ ಬದ್ದವಾಗಿದೆ. ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆಗಾಗಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಉತ್ಪಾದನಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸುವುದು ಸುಲಭದ ಕೆಲಸವಲ್ಲ ಕಚ್ಚಾ ವಸ್ತು, ಮಾರುಕಟ್ಟೆ, ದರ ಪಟ್ಟಿ ಪೈಪೋಟಿಯಂತಹ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ.
ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ ಎಂದ ಅವರು ಗ್ರಾಮೀಣ ಭಾಗದ ಜನರಲ್ಲಿ ಸ್ವಾವಲಂಬನೆಯ ಪರಿಕಲ್ಪನೆಯನ್ನು ಮೂಡಿಸುವುದರೊಂದಿಗೆ ಗ್ರಾಮೀಣ ಕಸುಬುದಾರರ ಜೀವನಾಧಾರ ಕಲ್ಪಿಸಿ, ಅವರ ಜೀವನ ಮಟ್ಟವನ್ನು ಸುಧಾರಿಸುವ ದಿಕ್ಕಿನಲ್ಲಿ ಸಣ್ಣ ಕೈಗಾರಿಕೆಗಳನ್ನು ಬೆಳಸಿದಾಗ ಗ್ರಾಮಿಣ ಜನರ ಜೀವನ ಮಟ್ಟ ಸುಧಾರಣೆ ಸಾಧ್ಯ ಎಂದರು.
ಅರಸಿಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶಿವಲಿಂಗೇಗೌಡರವರು ಸಭೆಯ ಅಧ್ಯಕ್ಷತೆ ವಹಿಸಿ ತೆಂಗಿನ ನಾರಿನ ಉದ್ಯಮವನ್ನು ಅಭಿವೃದ್ಧಿಪಡಿಸುವುದರಿಂದ ಗ್ರಾಮಿಣ ಮಹಿಳೆಯರಿಗೆ ನಿರಂತರ ಉದ್ಯೋಗಾವಕಾಶವನ್ನು ಒದಗಿಸಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ನಿಗ ವಹಿಸುವ ಅಗತ್ಯವಿದೆ ಎಂದರು.
ರಾಜ್ಯ ತೆಂಗಿನ ನಾರಿನ ಮಹಾಮಂಡಳಿಯ ಅಧ್ಯಕ್ಷರಾದ ಪುಟ್ಟರಾಜು, ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಆರ್. ಅರುಣ್‍ಕುಮಾರ್. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ