ತುಮಕೂರು:
ಸರ್ಕಾರದ ಜೊತೆಗೆ ಸಂಘಸAಸ್ಥೆಗಳು, ಶಕ್ತಿ ಇರುವವರು ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಬೇಕಾದ ಮೂಲಭೂತ ಸೌಕರ್ಯ ಒದಗಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದರೆ ಆ ಮಕ್ಕಳು ಸಮಾಜದ ಆಸ್ತಿಯಾಗುತ್ತಾರೆ, ವಿದ್ಯೆ ವಂಚಿತ ಮಕ್ಕಳು ಸಮಾಜಕ್ಕೆ ಹೊರೆಯಾಗುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸೋಮವಾರ ನಡೆದ ಸಮಾರಂಭದಲ್ಲಿ ನಗರದ ಬಡ್ಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ ಸಂಸ್ಥೆಯವರು ನಿರ್ಮಿಸಿಕೊಟ್ಟಿರುವ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ, ಮಕ್ಕಳ ಬದುಕು ರೂಪಿಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಗೆ ಆಸ್ತಿಯನ್ನು ಸೃಷ್ಟಿಮಾಡಲಾಗುವುದಿಲ್ಲ, ಶಿಕ್ಷಣವನ್ನು ಆಸ್ತಿ ರೂಪದಲ್ಲಿ ನೀಡಬೇಕು ಎಂದರು.
ಹಳ್ಳಿಯಾಗಲಿ, ನಗರವಾಗಲಿ, ಬಡವರಾಗಲಿ, ಸಿರಿವಂತರಾಗಲಿ ಎಲ್ಲಾ ಮಕ್ಕಳಿಗೂ ದೇವರು ಸಮಾನ ಬುದ್ಧಿಶಕ್ತಿ ಕೊಟ್ಟಿರುತ್ತಾನೆ. ಆ ಮಕ್ಕಳಲ್ಲರುವ ಬುದ್ಧಿಶಕ್ತಿ, ಪ್ರತಿಭೆಯನ್ನು ಅರಳಿಸಲು ಶಿಕ್ಷಕರು, ಪೋಷಕರು ಆದ್ಯತೆ ನೀಡಬೇಕು. ಮಕ್ಕಳು ಶಿಸ್ತು, ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಯಶಸ್ಸು ಗಳಿಸಿ ಉನ್ನತ ಸ್ಥಾನಮಾನ ಪಡೆಯಬಹುದು.
ಈಗ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸೌಕರ್ಯಗಳಿವೆ. ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡುವಷ್ಟೇ ಮುಖ್ಯವಾಗಿ ಅವರು ಶಾಲೆಗೆ ಗೈರುಹಾಜರಾಗದಂತೆ ನೋಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಪಡೆಯುವ ಅಂಕಗಳಷ್ಟೇ ಶಾಲೆಯ ಹಾಜರಾತಿಯೂ ಮುಖ್ಯವಾಗುತ್ತದೆ. ಮಕ್ಕಳು ಶಾಲೆಗೆ ಗೈರುಹಾಜರಾಗದಂತೆ ಶಿಕ್ಷಕರು, ಇಲಾಖೆ ಅಧಿಕಾರಿಗಳು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವ ಕೆ.ಎನ್.ರಾಜಣ್ಣ ಸಲಹೆ ಮಾಡಿದರು.
ಬಡ್ಡಿಹಳ್ಳಿ ಸರ್ಕಾರಿ ಶಾಲೆಯ ಈ ಮೊದಲಿದ್ದ ಕಟ್ಟಡ ಮಳೆಗಾಲದಲ್ಲಿ ಜಲಾವೃತವಾಗಿ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ಇಲ್ಲಿನ ಹಲವರು ಪ್ರಯತ್ನ ಮಾಡಿ ಹೊಸ ಜಾಗದಲ್ಲಿ ಶಾಲೆ ಸ್ಥಾಪನೆಯಾಗಲು ಸಹಕರಿಸಿದರು. ಮಳೆಗಾಲದಲ್ಲಿ ನೀರು ಸಂಗ್ರಹವಾಗುವ ಜಾಗಗಳನ್ನು ರಕ್ಷಣೆ ಮಾಡಬೇಕು.
ನಗರ ಪ್ರದೇಶಗಳಲ್ಲಿ ಕೆರೆಕಟ್ಟೆಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ. ಕಟ್ಟೆಗಳಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲಮಟ್ಟ ಸುಧಾರಿಸುತ್ತದೆ ಎಂದು ಹೇಳಿದ ಸಚಿವರು, ಬಡ್ಡಿಹಳ್ಳಿ ಶಾಲೆಗೆ ಕೊಠಡಿಗಳನ್ನು ನಿರ್ಮಿಸಿಕೊಟ್ಟ ಜಿಂದಾಲ್ ಸಂಸ್ಥೆಯ ಅಧ್ಯಕ್ಷ ಪ್ರಗುಣ್ ಜಿಂದಾಲ್ ಅವರ ಸೇವೆ ಶ್ಲಾಘಿಸಿದರು.
ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಕೆ.ಆರ್.ರಘುನಾಥ್ ಮಾತನಾಡಿ, ಸಂಸ್ಥೆಯಿಂದ ಸುಮಾರು 161 ಶಾಲೆಗಳಿಗೆ ಕಟ್ಟಡ, ಇತರೆ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಶಿಕ್ಷಣದ ಮಹತ್ವದ ಹಿನ್ನೆಲೆಯಲ್ಲಿ ಸಂಸ್ಥೆ ಇಂತಹ ಕಾರ್ಯಗಳಿಗೆ ಆದ್ಯತೆ ನೀಡುತ್ತಿದೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಜಿಂದಾಲ್ ಸಂಸ್ಥೆ ಕೊಡುಗೆ ಸ್ಮರಿಸಿ, ಬಡ್ಡಿಹಳ್ಳಿ ಭಾಗದ ಅಭಿವೃದ್ಧಿಗೆ ಕೆ.ಎನ್.ರಾಜಣ್ಣನವರು ಕೊಡುಗೆ ಅಪಾರ. 70ರ ದಶಕದಲ್ಲಿ ಇವರು ಕ್ಯಾತ್ಸಂದ್ರ ಪಂಚಾಯ್ತಿ ಅಧ್ಯಕ್ಷರಾಗಿದ್ದಾಗ ಇಲ್ಲಿನ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಿದ್ದರು ಎಂದು ಸ್ಮರಿಸಿದರು.
ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ನಗರದ ಮಕ್ಕಳಿಗಿಂಥಾ ಹೆಚ್ಚು ಸಾಧನೆ ಮಾಡುತ್ತಾರೆ ಎಂಬ ಮಾತಿದೆ. ನಗರದ ಮಕ್ಕಳಿಗೆ ಆಕರ್ಷಣೆಗಳು ಜಾಸ್ತಿ ಅವರು ಅದಕ್ಕೆ ಒಳಗಾಗಿ ಸಾಧನೆ ನಿರ್ಲಕ್ಷ ಮಾಡಬಹುದು, ಆಕರ್ಷಣೆಗಳಿಲ್ಲದ ಹಳ್ಳಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಬಲ್ಲರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಚಾರ್ಯ ಮರಿಬಸಪ್ಪ ಮಾತನಾಡಿ, ಬಡ್ಡಿಹಳ್ಳಿ ಶಾಲೆಗೆ ಕಟ್ಟಡದ ಅವಶ್ಯಕತೆ ಬಗ್ಗೆ ಜಿಂದಾಲ್ ಸಂಸ್ಥೆಗೆ ಕೋರಿಕೊಂಡಾಗ ಕೇವಲ 95 ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟರು ಎಂದು ಸಂಸ್ಥೆಗೆ ಅಭಿನಂದನೆ ಸಲ್ಲಿಸಿ, ಬಡವರೇ ಹೆಚ್ಚಾಗಿರುವ ಈ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಲ್ಲೊಂದು ಉನ್ನತೀಕರಿಸಿದ ಪ್ರೌಢಶಾಲೆ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳುವಂತೆ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನವಿ ಮಾಡಿದರು.
20-30 ಸಾವಿರ ಜನಸಂಖ್ಯೆ ಇರುವ ಈ ಭಾಗದ ಜನರ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಇನ್ನಿತರ ಕಂದಾಯ ಸೇವೆಗಳಿಗಾಗಿ ದೂರದ ಊರ್ಡಿಗೆರೆ ನಾಡಕಚೇರಿಗೆ ಹೋಗಬೇಕು. ಈ ಭಾಗದಲ್ಲಿ ನಾಡಕಚೇರಿ ತೆರೆಯುವಂತೆ ಕೋರಿದರು.
ಯುವ ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೇಮಠ್, ನಗರಪಾಲಿಕೆ ಸದಸ್ಯ ಬಿ.ಜಿ.ಕೃಷ್ಣಪ್ಪ, ಡಿಡಿಪಿಐ ಸಿ.ರಂಗಧಾಮಯ್ಯ, ಬಿಇಓ ಡಾ.ಸೂರ್ಯಕಲಾ, ಡಿಜಿ ಕಚೇರಿಯ ಸರ್ಕಲ್ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್‌ಕುಮಾರ್, ನಗರಪಾಲಿಕೆ ನಾಮಿನಿ ಸದಸ್ಯ ಕೆ.ಎಸ್.ಮಹೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಹನುಮಂತರಾಯಪ್ಪ, ಶಾಲೆ ಮುಖ್ಯಶಿಕ್ಷಕಿ ಬಿ.ದಾಕ್ಷಾಯಣಮ್ಮ, ಮುಖಂಡರಾದ ಮುನಿಬಸವರಾಜು, ಸಿದ್ಧಲಿಂಗಯ್ಯ, ಮೂರ್ತಿ, ಗಿರಿಜಮ್ಮ, ರವೀಶ್, ವೆಂಕಟೇಶ್,ಶಿವಕುಮಾರ್, ರವೀಶ್, ಸೂರಾಚಾರ್ ಇತರರು ಭಾಗವಹಿಸಿದ್ದರು.