ತುಮಕೂರು:
ಜಿಲ್ಲೆಯ ಗ್ರಾಮ ಲೆಕ್ಕಿಗರ 128 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ನೇಮಕಾತಿ ಸಂದರ್ಭದಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅರ್ಜಿಗಳನ್ನು ತಿರಸ್ಕರಿಸಿದ್ದಾರೆಂದು ಅಭ್ಯರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕುಷ್ಠರೋಗದಿಂದ ಗುಣಮುಖರಾದವರು, ಶ್ರವಣದೋಷವುಳ್ಳವರು, ದೈಹಿಕ ಅಂಗವಿಕಲರು, ಮಾನಸಿಕ ಅಸ್ವಸ್ಥತೆಯಿಂದ ಗುಣಮುಖರಾದವರಿಗೆ ಹುದ್ದೆಯಲ್ಲಿ ಮೀಸಲು ಕಲ್ಪಿಸಲಾಗಿತ್ತು. ಆದರೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಮೂರನೇ ವರ್ಗದಲ್ಲಿ ಬರುವ ದೈಹಿಕ ಅಂಗವಿಕಲರು ವರ್ಗದ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಿ ಅನ್ಯಾಯ ಮಾಡಲಾಗಿದೆ.
ಅರ್ಜಿ ಸಲ್ಲಿಸುವುದಕ್ಕೂ ಮುನ್ನ ದೈಹಿಕ ಅಂಗವಿಕಲರಿದ್ದರೆ ಹುದ್ದೆಗೆ ಪರಿಗಣಿಸಿಲ್ಲ. ಹಾಗಾಗಿ ಅಂತಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅರ್ಹರಲ್ಲ ಎಂದು ನೋಟೀಸ್ ನೀಡುವಾಗಲೇ ಪ್ರಕಟಣೆ ಹೊರಡಿಸಿದ್ದರೆ ನಾವುಗಳು ಅರ್ಜಿಯನ್ನೇ ಹಾಕುತ್ತಿರಲಿಲ್ಲ.
ನಮಗೂ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ನಾವುಗಳು ಅರ್ಜಿ ಸಲ್ಲಿಸಿದ್ದೆವು. ಆದರೆ ದಾಖಲಾತಿಗಳ ಪರಿಶೀಲನೆಗೂ ಅನುವು ಮಾಡಿಕೊಡದೆ ತಿರಸ್ಕತಗೊಳಿಸಿರುವುದು ಯಾವ ನ್ಯಾಯ ಎಂಬುದು ಇವರ ವಾದ.
ತಿರಸ್ಕತವಾದ ಪಟ್ಟಿಯಲ್ಲಿ ಒಂದೇ ವರ್ಗಕ್ಕೆ ಸೇರಿದ ಕಡಿಮೆ ಅಂಕಗಳಿಸಿದ ಅಭ್ಯರ್ಥಿಗಳ ಹೆಸರಿದೆ. ಆದರೆ ಹೆಚ್ಚು ಅಂಕ ಗಳಿಸಿದ ಅದೇ ವರ್ಗಕ್ಕೆ ಸೇರಿದ ಅಭ್ಯರ್ಥಿಗಳನ್ನು ಮಾತ್ರ ದೈಹಿಕ ಅಂಗವಿಕಲರೆಂದು ತಿರಸ್ಕತ ಮಾಡಲಾಗಿದೆ. ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ನಿಖರ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ ಎಂಬುದು ಅರ್ಜಿದಾರರ ಹೇಳಿಕೆಯಾಗಿದೆ.
ಆದ್ದರಿಂದ ಜಿಲ್ಲಾಧಿಕಾರಿಗಳು ಲೋಕೋ ಮೋಟಾರ್ ಡಿಸೆಬಲಿಟಿ ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಅಂಗವಿಕಲ ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.