ಕುಣಿಗಲ್
ಪಟ್ಟಣದ ಸರ್ವತೋಮುಖ ಬೆಳವಣಿಗೆಗೆ ಮೂಲಭೂತ ಸೌಕರ್ಯವನ್ನ ಸಮರ್ಪಕವಾಗಿ ಒದಗಿಸುವ ಮೂಲಕ ಪ್ರಾಮಾಣಿಕವಾಗಿ ಪುರಸಭೆಯಲ್ಲಿ ಜವಾಬ್ದಾರಿಯುಳ್ಳವರು ಕೆಲಸ ಮಾಡಿದರೆ ಮಾತ್ರ ನಗರದ ಬೆಳವಣಿಗೆ ಸಾಧ್ಯ. ಅದನ್ನ ಬಿಟ್ಟು ಬರೀ ಸಬೂಬು ಹೇಳುತ್ತ ಮಾತನಾಡಿದರೆ ನಾಗರೀಕರು ಮೆಚ್ಚುವುದಿಲ್ಲ. ಇನ್ನಾದರೂ ಇರುವ ಕಾಲಾವಧಿಯಲ್ಲಿ ಉತ್ತಮ ಕೆಲಸ ಮಾಡಲು ಮುಂದಾಗಿ ಎಂದು ಸಂಸದ ಡಿ.ಕೆ.ಸುರೇಶ್ ಪುರಸಭಾ ಸದಸ್ಯರಿಗೆ ಕಿವಿಮಾತು ಹೇಳಿದರು.
ಅವರು ಪುರಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರ ಮತ್ತು ಅಧಿಕಾರಿಗಳನ್ನು ಕುರಿತು ಮಾತನಾಡುತ್ತ ಪಟ್ಟಣದಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅದೇ ರೀತಿ ಕುಡಿಯುವ ನೀರು, ಮೋರಿ, ಚರಂಡಿ, ವಿದ್ಯುತ್ ಅನ್ನು ಒದಗಿಸುವುದೇ ಮುಖ್ಯ ಕೆಲಸವಾಗಿದ್ದು ಬೇರೆ ಇನ್ನೇನು ಮಾಡಲು ಸಾಧ್ಯ ಎಂದ ಅವರು, ನಿಮ್ಮ ಆದಾಯದ ಮೂಲವನ್ನು ಹೆಚ್ಚಿಸಿಕೊಂಡು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ನಾಗರಿಕರಿಗೆ ಉತ್ತಮ ಮೂಲಭೂತ ಸೌಲತ್ತುಗಳನ್ನ ನೀಡುವ ಕೆಲಸವನ್ನ ಮಾಡದೆ ಬರೀ ಅವರಿವರ ಮೇಲೆ ಚಾಡಿ ಹೇಳುವ ಮಾತುಗಳನ್ನಾಡುವುದನ್ನ ಬಿಟ್ಟು ನಾಗರೀಕರ ಸೇವೆ ಮಾಡಲು ಆಯ್ಕೆಯಾದವರು ಮೊದಲು ಆ ಕೆಲಸವನ್ನು ಮಾಡುವ ಮೂಲಕ ನಾಗರೀಕರಿಂದ ಮೆಚ್ಚಿಗೆಗಳಿಸಿ ಎಂದು ಕಿವಿಮಾತು ಹೇಳಿದರು.
ಕಳೆದ 20 ವರ್ಷಗಳಿಂದ ಪಟ್ಟಣದಲ್ಲಿ ಯಾವುದೇ ನಿವೇಶನಗಳು ಹಂಚಿಕೆಯಾಗದಿರುವ ಬಗ್ಗೆ ಪ್ರಸ್ತಾಪಿಸಿದಾಗ ಹಿಂದೆ 1156 ನಿವೇಶಗಳ ಪೈಕಿ ಅಂದಿನ ಶಾಸಕರಾದ ಮುದ್ದಹನುಮೇಗೌಡರು 450 ಜನರಿಗೆ ನಿವೇಶನಗಳ ಮಂಜೂರಾತಿ ಪತ್ರ ನೀಡಿದ್ದು ಬಿಟ್ಟರೆ ಯಾವುದೇ ಹಕ್ಕುಪತ್ರ ನೀಡದಿರುವುದು ಗೊಂದಲದಲ್ಲಿದೆ. ಇದು ಸೇರಿದಂತೆ ಮುಂದಿನ ದಿನಗಳಲ್ಲಿ ನಿರ್ಗತಿಕರು, ಬಡವರಿಂದ ಅರ್ಜಿಯನ್ನು ಪಡೆದು ಮೊದಲ ಆದ್ಯತೆಯ ಮೇರೆಗೆ ಕಡುಬಡವರಿಗೆ ನಿವೇಶನ ನೀಡುವ ಕೆಲಸವನ್ನು ಮಾಡಿ ಇದರಲ್ಲಿ ಯಾವುದೇ ರಾಜಕೀಯ, ಕಿತಾಪತಿ ಮಾಡಿಕೊಳ್ಳುವ ಕೆಲಸಕ್ಕೆ ಹೋಗಬೇಡಿ ಎಂದು ಸದಸ್ಯರಿಗೆ ಸೂಚ್ಯವಾಗಿ ನುಡಿದರು.
ಕಳೆದ 9 ವರ್ಷದಿಂದ ಪುರಸಭೆಗೆ ಬಂದಿರುವ ಎಸ್‍ಎಸ್‍ಎಫ್‍ಸಿ ಅನುದಾನದ ಹಣವನ್ನು ಖರ್ಚು ಮಾಡದೆ ಏಕೆ ಉಳಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದ ಅವರು, ನೀವು ಕೇವಲ ನಿಮಗೆ ಬರುವ ಗ್ಯಾಂಟ್ ಎಷ್ಟು ? ಹೇಗೆ ಹಂಚಿಕೊಳ್ಳುವುದು ಎಂಬ ವಿಚಾರವಾಗಿಯೇ ಚಿಂತಿಸುತ್ತೀರ ಅದನ್ನು ಬಿಟ್ಟು ಅಭಿವೃದ್ಧಿಗೆ ಆದ್ಯತೆ ಕೊಟ್ಟರೆ ನಾಗರೀಕರಿಂದ ಪ್ರಶಂಸೆಗೆ ಪಾತ್ರರಾಗುತ್ತಿದ್ದೀರಿ ಎಂದು ಕುಟುಕಿದರು.
ಸಮರ್ಪಕವಾಗಿ ಸ್ವಚ್ಛತೆ ಆಗದಿರುವ ಬಗ್ಗೆ ರಾಮು, ಸತೀಶ ಪ್ರಸ್ತಾಪಿಸಿದಾಗ ಸಂಸದರು ಸ್ವಚ್ಛತೆ ಮಾಡಲು ಎಷ್ಟು ಮಂದಿ ಇದ್ದಾರೆ ಎಂದು ಪ್ರಶ್ನಿಸಿದಾಗ 43 ಜನ ಇದ್ದಾರೆ ಎಂಬ ಮಾಹಿತಿ ಪಡೆದು ವಾರ್ಡ್‍ಗಳಿಗೆ ಒಬ್ಬರಂತೆ ನೇಮಿಸಿ ಕ್ಲೀನಿಂಗ್ ಮಾಡಲು ಒತ್ತುಕೊಡಿ ಎಂದು ಸಲಹೆ ನೀಡಿದರು.
ಸದಸ್ಯ ರಂಗಸ್ವಾಮಿ ಪುರಸಭೆಗೆ ಆದಾಯದ ಮೂಲ ಇಲ್ಲ. ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಕಳೆದ 15 ವರ್ಷದಿಂದ ನೆನಗುದಿಗೆ ಬಿದ್ದಿದೆ. ಇಲ್ಲಿ ಬಸ್ ನಿಲ್ದಾಣ ಹಾಗೂ ಅಂಗಡಿ ಮಳಿಗೆಗಳನ್ನ ನಿರ್ಮಿಸಿ ಬಾಡಿಗೆಗೆ ನೀಡಿದರೆ ಸಾಕಷ್ಟು ಆದಾಯ ಲಭಿಸುತ್ತದೆ ಎಂದಾಗ ಏತಕ್ಕಾಗಿ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಮುಖ್ಯಾಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಹರೀಶ್ ಉತ್ತರ ನೀಡಿದರು. ನಂತರ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಮುಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳೋಣ ಎಂದರು.
ಸದಸ್ಯ ಚಂದ್ರಶೇಖರ್, ರಂಗಸ್ವಾಮಿ ಸಾರ್ವಜನಿಕ ವಿದ್ಯುತ್ ಚಿತಾಗರ ನಿರ್ಮಿಸುವ ಬಗ್ಗೆ ಹಾಗೂ ಸಾರ್ವಜನಿಕ ಮಸಣಕ್ಕೆ ಭೂಮಿ ನೀಡುವಂತೆ ಮನವಿ ಮಾಡಿದಾಗ ಆ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸದಸ್ಯ ಮಂಜು ಮಾತನಾಡಿ ಕೋಟಿಗಟ್ಟಲೆ ಖರ್ಚು ಮಾಡಿ ಪುರಸಭಾ ಅಂಗಡಿ ಮಳಿಗೆಗಳನ್ನ ನಿರ್ಮಿಸಿದ್ದು ಬಹಿರಂಗವಾಗಿ ಹರಾಜು ಮಾಡಿ ನಂತರ ಮನಸೋ ಇಚ್ಛೆ ಬಾಡಿಗೆ ನೀಡಿರುವ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದು ಈ ಬಗ್ಗೆ ಇನ್ನೂ ಸರಿಯಾದ ಕ್ರಮ ವಹಿಸದ ಕಾರಣ ಬಾಡಿಗೆ ಹಣ ಪುರಸಭೆಗೆ ಸೇರದೆ ಇರುವುದು ಅನುಮಾನ ಮೂಡಿಸಿದೆ ಎಂದು ದೂರಿದಾಗ ಆ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ಸಂಸದರು ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ನಳಿನಾಬೈರಪ್ಪ, ಉಪಾಧ್ಯಕ್ಷ ಅರುಣ್‍ಕುಮಾರ್, ಮಂಜುಳಾ, ಜಯಲಕ್ಷ್ಮಿ, ವಿಜಯಲಕ್ಷ್ಮಿ, ಜಗದೀಶ್, ಶಂಕರ್, ಮುಖ್ಯಾಧಿಕಾರಿ ಪಂಕಜರೆಡ್ಡಿ, ಆರೋಗ್ಯಾಧಿಕಾರಿ ವೆಂಕಟರಾಮಯ್ಯ, ಇಂಜಿನಿಯರ್ ಸುಮಾ, ನರಸೇಗೌಡ ಸೇರಿದಂತೆ ಹಲವರು ಸಭೆಯಲ್ಲಿದ್ದರು.