ಬಿಜೆಪಿಯಲ್ಲಿ ಬಗೆಹರಿಯದ ಅಭ್ಯರ್ಥಿ ಗೊಂದಲ

ಚಿಕ್ಕನಾಯಕನಹಳ್ಳಿ

     ವಿಧಾನ ಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ರಾಷ್ಟ್ರಿಯ ಪಕ್ಷಗಳಲ್ಲಿ ಅಭ್ಯರ್ಥಿಗಳ ತಿಕ್ಕಾಟ ಜೋರಾಗಿದೆ. ಪ್ರದೇಶಿಕ ಪಕ್ಷ ಜೆಡಿಎಸ್‌ನಲ್ಲಿ ಅಭ್ಯರ್ಥಿ ಯಾರೆಂಬುದು ಖಚಿತವಾಗಿದೆ.

     ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ಈ ಬಾರಿ ವಿಶೇಷ ರೀತಿಯಲ್ಲಿ ಮಹತ್ವ ಪಡೆಯುತ್ತಿದೆ. ಇಲ್ಲಿ ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಎಸ್. ಪ್ರಮುಖ ರಾಜಕೀಯ ಪಕ್ಷಗಳಿದ್ದರೂ, ಕಳೆದ ನಲವತ್ತು ವರ್ಷಗಳ ರಾಜಕೀಯ ಇತಿಹಾಸವನ್ನು ನೋಡಿದಾಗ, ಪಕ್ಷಕ್ಕಿಂತ ವ್ಯಕ್ತಿಗತವಾಗಿ ಚುನಾವಣೆ ನಡೆದಿರುವುದು ವಿಶೇಷ.

    ಎರಡು ಕುಟುಂಬಗಳಿಗೆ ಈ ಕ್ಷೇತ್ರ ಸೀಮಿತವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು, ಮಾಜಿ ಸಚಿವ ಎನ್, ಬಸವಯ್ಯ ಕುಟುಂಬ ಹಾಗೂ ಜೆ.ಸಿ.ಮಾಧುಸ್ವಾಮಿ ಇಬ್ಬರ ನಡುವೆಯೇ ಅಧಿಕಾರ ಗದ್ದುಗೆ ಗಿರಿಕಿ ಹೊಡೆದಿರುವುದರಿಂದ ಇಲ್ಲಿನ ಮತದಾರರು ಪಕ್ಷ ಮುಂದಿಟ್ಟುಕೊಳ್ಳುವುದಕ್ಕಿಂತ, ವ್ಯಕ್ತಿ ಮುಂದಿಟ್ಟು ಕೊಂಡೇ ಪ್ರತಿ ಬಾರಿಯ ಚುನಾವಣೆಯ ಚರ್ಚೆ ಶುರು ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಒಂದಂತೂ ಸತ್ಯ, ಇಬ್ಬರಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬ ಸೂಚನೆ ಸಿಗುವುದು ಕಣದಲ್ಲಿ ಉಳಿಯುವ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯನ್ನು ಆಧರಿಸಿಯೇ.

    ಬಿ.ಜೆ.ಪಿ.ಯಲ್ಲಿ ಕಣಕ್ಕಿಳಿಯಲು ಇಬ್ಬರು ಅಭ್ಯರ್ಥಿಗಳು ಪ್ರಬಲವಾಗಿ ಪೈಪೋಟಿಗಿಳಿದಿದ್ದಾರೆ. ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಜೈವಿಕ ಇಂಧನ ನಿಗಮದ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಇವರು ಬಿ.ಫಾರಂ ತರಲು ಪಕ್ಷದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇಬ್ಬರು ಸ್ಪರ್ಧೆಯಲ್ಲಿರುವುದು ಸದ್ಯದ ಮಟ್ಟಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

    ಒಂದು ಹಂತದಲ್ಲಿ ಹಾಲಿ ಸಚಿವರೇ ಬಿ.ಜೆ.ಪಿ.ಅಭ್ಯರ್ಥಿ ಎನ್ನುವುದು ಮೇಲ್ನೋಟಕ್ಕೆ ಕಂಡರೂ, ಅಷ್ಟು ಸುಲಭವಾಗಿ ಇವರಿಗೆ ಬಿ.ಜೆ.ಪಿ.ಯಿಂದ ಟಿಕೆಟ್ ಸಿಗುತ್ತದೆ ಎನ್ನಲು ಕಷ್ಟಸಾಧ್ಯ ಎಂಬುದಾಗಿ ಕಿರಣ್ ಅಭಿಮಾನಿಗಳು ಹಾಗೂ ಮೂಲ ಬಿ.ಜೆ.ಪಿ.ಗರು ಹೇಳುತ್ತಿದ್ದಾರೆ. ಬಿ.ಜೆ.ಪಿ.ಯಲ್ಲಿ ಟಿಕೆಟ್ ಸಿಗದಿದ್ದವರು, ನೇರ ಕಾಂಗ್ರೆಸ್ ಬಾಗಿಲು ತಟ್ಟುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಇದಕ್ಕಾಗಿ ತಯಾರಿಗಳು ನಡೆದಿವೆ.

    ಈ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಕುತೂಹಲ ಕ್ಷೇತ್ರಾದ್ಯಂತ ಹರಡಿದೆ.
ಕಾಂಗ್ರೆಸ್‌ನಲ್ಲಿ ಈಗಂತೂ ಹೊರಗಿನವರ ಹಾವಳಿ ಹೆಚ್ಚುತ್ತಿದೆ. ಸ್ಥಳೀಯ ಕಾಂಗ್ರೆಸ್‌ನವರು ಇಲ್ಲಿಯವರಿಗೂ ಟಿಕೆಟ್ ಕೊಡಿ ಎಂದು ಕೂಗೆಬ್ಬಿಸುತ್ತಿದ್ದಾರೆ, ಬಿ.ಲಕ್ಕಪ್ಪ, ವೈ.ಸಿ.ಸಿದ್ದರಾಮಯ್ಯ, ನಮಗೆ ಟಿಕೆಟ್ ಕೊಡಿ ಎಂದು ಬೊಬ್ಬೆಯಿಡುತ್ತಿದ್ದಾರೆ.

    ಇವರೇ ಈ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸುವಂತೆ ಅವಲತ್ತುಕೊಂಡಿದ್ದರು. ಸಿದ್ದರಾಮಯ್ಯನವರು ಯಾವಾಗ ಸ್ಥಳೀಯ ಕಾಂಗ್ರೆಸ್‌ನವರೇ ಬಂದು ಈ ರೀತಿ ಹೇಳುತ್ತಿರುವುದನ್ನು ನೋಡಿ ಹಾಗೂ ಈ ಭಾಗದಲ್ಲಿ ಕಾಂಗ್ರೆಸ್‌ನಲ್ಲಿ ಸ್ಥಳೀಯವಾಗಿ ಬಿಗಿಯಾದ ನಾಯಕರು ಇಲ್ಲವೆಂಬುದು ಗೋಚರವಾಯಿತು.

    ಅದಕ್ಕೆ ಪುಷ್ಠಿ ನೀಡುವಂತೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಇಲ್ಲಾದ ಗೊಂದಲಗಳನ್ನು ಕಣ್ಣಾರೆ ಕಂಡರೋ, ಅಂದೇ ರಾಜ್ಯ ಕಾಂಗ್ರೆಸ್‌ನ ಕಾನೂನು ವಿಭಾಗದ ಅಧ್ಯಕ್ಷ ಧನಂಜಯ ಅವರಿಗೆ ಈ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ಮುಂದೆ ಅನುಕೂಲವಾಗಬಹುದು ಎಂಬ ಸೂಚನೆ ನೀಡಿದ್ದರು ಅನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲೂ ಹರಿದಾಡಲು ಶುರುವಾಯಿತು.

   ಜೋಡೊ ಯಾತ್ರೆ ಮುಕ್ತಾಯವಾಗುವ ವೇಳೆಗಾಗಲೇ ಧನಂಜಯ ಅವರು ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಜಾಂಢಾ ಹಿಡಿದು ಓಡಾಡಲಿಕ್ಕೆ ಪ್ರಾರಂಭಿಸಿದರು. ಕೆಲ ದಿನಗಳ ನಂತರ ನಗರದ ಹೊರವಲಯದಲ್ಲಿನ ಜಿ.ಎಂ.ಆರ್. ಕಲ್ಯಾಣ ಮಂಟಪವನ್ನು ತಿಂಗಳ ಲೆಕ್ಕಕ್ಕೆ ಬಾಡಿಗೆ ಪಡೆದು, ಹಿಡಿದಿದ್ದ ಕಾಂಗ್ರೆಸ್ ಜಾಂಢಾವನ್ನು ಕಲ್ಯಾಣ ಮಂಟಪದ ಮುಂದೆಲ್ಲಾ ನೆಟ್ಟೇಬಿಟ್ಟರು. ಈ ಬೆಳವಣಿಗೆ ಸ್ಥಳೀಯ ಕಾಂಗ್ರೆಸ್‌ನ ಕೆಲವರಿಗೆ ಒಳಗೊಳಗೆ ಖುಷಿ ತಂದರೆ, ಇನ್ನೂ ಹಲವರಿಗೆ ಹೊಟ್ಟೆಯಲ್ಲಿ ಖಾರ ಕಡಿದಂತಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap