ಕ್ರಾಂತಿ ಆರಂಭ :
1930ರ ದಶಕದ ಪ್ರಾರಂಭಿಕ ಕಾಲ. ಖ್ಯಾತ ರಾಜಕಾರಣಿಗಳಾದ ಸರ್ ಮಿರ್ಜಾರವರು ಲಂಡನ್ನಿನ 2ನೇ ದುಂಡು ಮೇಜಿನ ಪರಿಷತ್‍ಗೆ ಮೈಸೂರು ಸಂಸ್ಥಾನದ ಪರವಾಗಿ ಹೋಗಿ ಬಂದ ಮೇಲೆ ನಿರಂಕುಶ ಪ್ರಭುತ್ವ ಸ್ಥಾಪಿಸುವ ಅವರ ರಾಜಕೀಯ ಕುತಂತ್ರವನ್ನು ಪ್ರಜಾಪ್ರತಿನಿಧಿಗಳು ಮನಗಂಡರು. ಆಗ ಜಗದ್ವಿಖ್ಯಾತ ಮೈಸೂರು ದಸರಾ ಸಮಯದಲ್ಲೇ ಇಲ್ಲಿ ಸ್ಥಳೀಯ ಸಂಸ್ಥೆಗಳ ಸಮ್ಮೇಳನ ಏರ್ಪಟ್ಟಿತ್ತು. ಈ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಕೆ.ಎಫ್.ನಾರಿಮನ್ನರು ಬಂದಿದ್ದರು. ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ್ದ ಅವರನ್ನು ಅಪಮಾನಗೊಳಿಸಿದ್ದು ಸಾಲದೆ, ಅವರ ಭಾಷಣಕ್ಕೂ ಸರ್ಕಾರ ಅಡ್ಡಿ ಪಡಿಸಿತು. ಶ್ರೀಯುತರನ್ನು ಗಡಿಪಾರು ಮಾಡಿ ಗಡಿದಾಟಿಸಲು ಸರ್ವ ಪ್ರಯತ್ನ ಮಾಡಿತು.
ನಾರಿಮನ್ನರನ್ನು ಬೆಂಬಲಿಸಿ ಸಿಂಹಗರ್ಜನೆ ಮಾಡಿದ ಮೈಸೂರು ಮುಖಂಡರಾದ ಸರ್ವಶ್ರೀ ಟಿ. ಸಿದ್ದಲಿಂಗಯ್ಯ, ವೀರಕೇಸರಿ ಸೀತಾರಾಮ ಶಾಸ್ತ್ರಿ, ತಗಡೂರು ರಾಮಚಂದ್ರರಾವ್ ಮುಂತಾದವರ ಕೈಗೆ ಬೇಡಿ ಬಿದ್ದವು. ರಾಜಮಾರ್ಗದಲ್ಲಿ ಬೇಡಿ ಸಹಿತ ಅವರ ಮೆರವಣಿಗೆ. ಈ ಕ್ರಮ ಅಸಾಧುವೆಂದು ವಿದ್ಯಾರ್ಥಿಗಳು ಉದ್ರಿಕ್ತರಾದರು. ಪ್ರತಿಭಟಿಸಲು ಸಿಡಿದೆದ್ದರು. ಪೋಲಿಸರು ಕಾಲೇಜುಗಳಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸಿದರು. ಗೋಲಿಬಾರ್ ಕೂಡ ಜರುಗಿತು. ಮುಖ್ಯ ಪೊಲೀಸ್ ಅಧಿಕಾರಿಗಳಾಗಿದ್ದ ಹ್ಯಾಮಿಲ್ಟನ್ ಈ ವಿಕೋಪಕ್ಕೆ ಕಾರಣೀಭೂತರಾದರು.
ವಿಧುರಾಶ್ವತ್ತದಲ್ಲೂ ಘೋರ ಹತ್ಯಾಕಾಂಡ. ಪ್ರತಿಬಂಧಕ ಆಜ್ಞೆ ಜರುಗಿದವು. ‘ವಿಶ್ವ ಕರ್ನಾಟಕ’ ‘ತಾಯಿನಾಡು’ ‘ಜನವಾಣಿ’ ಪತ್ರಿಕೆಗಳ ಮೇಲೂ ನಿರ್ಬಂಧ. ಇದೇ ಕಾಲಕ್ಕೆ ಪತ್ರಕರ್ತ ಹೆಚ್.ಎಸ್.ದೊರೆಸ್ವಾಮಿ, ಪಿ.ಶೇಷಪ್ಪ, ಚಿಂತಾಮಣಿ, ಆರ್. ಎಸ್. ನಾರಾಯಣರಾವ್ ರಾಜ್ಯದ ಹೊರಗಿದ್ದು. ‘ಪೌರವಾಣಿ’, ‘ಕೇಸರಿ’ ‘ಧಿಕ್ಕಾರ’ ‘ವಾಹಿನಿ’ ಪತ್ರಿಕೆಗಳನ್ನು ಪ್ರಕಟಿಸಿ ರಾಜ್ಯದೊಳಗೆ ಪ್ರವೇಶ ಮಾಡುವಂತೆ ಮಾಡಿದ್ದರು. ಸರ್ಕಾರದ ನಿರಂಕುಶ ದಬ್ಬಾಳಿಕೆಯಲ್ಲಿ ಹತ್ಯೆಗಳು ಸಂಭವಿಸಿದ್ದು ಒಂದಾ ಎರಡಾ ಐವತ್ತಕ್ಕೂ ಹೆಚ್ಚು, ಗಾಯಗೊಂಡವರೂ ನೂರಾರು ಜನ. ಈ ವಾರ್ತೆ ವಾರ್ಧಾ ಆಶ್ರಮ ತಲುಪಿತು ಮಹಾತ್ಮರು ಇದನ್ನು ತಿಳಿದು ಕನ್ನಡಿಗರ ಬೆಂಗಾವಲಿಗೆ ನಿಂತರು. ಕನ್ನಡಿಗರಲ್ಲೂ ದಿನೇ ದಿನೇ ಸ್ವಾತಂತ್ರ್ಯ ದಾಹ ಹೆಚ್ಚುತ್ತಾ ಬಂತು. ಇದಕ್ಕೆ ವರ್ಷ ವರ್ಷಗಳೇ ಸರಿದವು. ಸ್ವಾತಂತ್ರ್ಯ ಪ್ರೇಮ ಎಲ್ಲರಲ್ಲೂ ಇತ್ತು, ನಿಜ. ಆದರೆ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಹೋರಾಡಲಿಲ್ಲ. ನೂರಾರು ವರ್ಷಗಳ ದಾಸ್ಯ ಮತ್ತು ಗುಲಾಮಗಿರಿಯಲ್ಲಿದ್ದ ಎಲ್ಲ ಜನತೆಗೂ ಸ್ವಾತಂತ್ರ್ಯ ಪ್ರಜ್ಞೆ ಮೂಡಲಿಕ್ಕೆ ಸಾಧ್ಯವಿಲ್ಲ. ಈ ಸ್ವಾತಂತ್ರ್ಯ ದಾಹವು ಮೊದಮೊದಲು ಅಂಕುರವಾದ್ದು ಕವಿ ರವೀಂದ್ರ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧೀಜಿ ಮುಂತಾದವರಿಗೆ. ಇವರ ಆತ್ಮಾವಲಂಬಿ ಆಚರಣೆಗಳು ಇದೇ ನೆಲದ ಇತರರಿಗೂ ಲೇಪವಾಯಿತು. ಶತೃಗಳನ್ನೂ ಪ್ರೀತಿಸುವ, ದ್ವೇಷಿಸಿದವರನ್ನೂ ಸತ್ಕರಿಸುವ, ಶಪಿಸಿದವರನ್ನೂ ಹರಸುವ, ದೊಡ್ಡ ಗುಣವಂತರೇ ಮಹಾತ್ಮರು! ಕನ್ನಡನಾಡು ಬಸವನ ನಾಡು, ಚಿನ್ನದನಾಡು, ಮೈಸೂರು ರಾಮರಾಜ್ಯ. ಆದ್ದರಿಂದಲೇ ಗಾಂಧೀಜಿ ಕನ್ನಡಿಗರನ್ನು ಮೆಚ್ಚಿದ್ದರು. ಪೋತ್ಸಾಹಿಸುತ್ತಿದ್ದರು,. ಮೈಸೂರು ಕಾಂಗ್ರೆಸ್ ಖ್ಯಾತರೆನಿಸಿದ್ದ ಹೆಚ್. ಸಿ. ದಾಸಪ್ಪನವರ ವಕೀಲ ವೃತ್ತಿ ಸನದನ್ನು ಅಪಹರಿಸಿದಾಗ, ಇವರು ಹೋಗಿ ಸ್ವತಃ ಗಾಂಧೀಜಿ ಆಶ್ರಮ ಸೇರಿದ್ದರು. ತಿಲಕ್ ಸಂಘ, ತಿಲಕ್ ತರಣ ಸಂಘದ ರಾಷ್ಟ್ರೀಯ ಚಟುವಟಿಕೆಗಳು 1920ರಿಂದಲೇ ಸಾಗಿದ್ದವು. ಪರದೇಶಿ ವಸ್ತ್ರ ಬಹಿಷ್ಕಾರ, ಖಾದಿ ಪ್ರಚಾರ, ಬರು ಬರುತ್ತ ಖಾದಿ ಕೇಂದ್ರ ಸ್ಥಾಪನೆ, ನಾಡಿನಾದ್ಯಂತ ಡಾ.ಹರ್ಡೀಕರ್ ಅವರ ಪ್ರಚಾರ, 1930ರಲ್ಲಿ ನಡೆದ ಅಂಕೋಲಾ ಕಾರವಾರ ಚಳವಳಿಗಳ ನಂತರವೇ. ನೇರ ಕ್ರಮ ಹಿಡಿದು ಮೈಸೂರು ಸಂಸ್ಥಾನದಲ್ಲಿ ಚಳುವಳಿಗಳು ಆರಂಭವಾದವು. 1936ರವರೆಗೂ ಮೈಸೂರು ಜವಾಬ್ದಾರಿ ಸರ್ಕಾರದ ಹೋರಾಟಕ್ಕೆ ಗಾಂಧೀಜಿ ಅನುಮತಿಕೊಟ್ಟಿರಲಿಲ್ಲ. 1937ರಿಂದ ಶಿವಪುರ ಧ್ವಜ ಸತ್ಯಾಗ್ರಹದಿಂದಲೇ ಸಂಸ್ಥಾನದ ಚಳುವಳಿ ಪ್ರಾರಂಭ.
ಅರಣ್ಯ ಸತ್ಯಾಗ್ರಹ
ಶಿವಪುರದ ಧ್ವಜ ಸತ್ಯಾಗ್ರಹ, ಮೈಸೂರಿನಲ್ಲಿಯ ಹ್ಯಾಮಿಲ್ಟನ್ ಭವನದ ಸತ್ಯಾಗ್ರಹ, ಚಿನ್ನದ ಗಣಿಯ ಸುತ್ತ 25 ಗ್ರಾಮಗಳಿಗೆ ಕಾಲಿಡದ ಪ್ರತಿಬಂಧಕಾಜ್ಞೆ – ಇವುಗಳಲ್ಲಿಯ ಉಗ್ರಕ್ರಮಗಳ ಪ್ರಚೋದನೆಯಿಂದ 1939ರಲ್ಲಿ ಅರಣ್ಯ ಸತ್ಯಾಗ್ರಹ ಏರ್ಪಟ್ಟಿತು. ಈ ಸತ್ಯಾಗ್ರಹವು ಕಟ್ಟುನಿಟ್ಟಾಗಿ ದೇಶದಾದ್ಯಂತ ಜರುಗಿತು. ಚಿತ್ರದುರ್ಗ ಜಿಲ್ಲೆಯಲ್ಲಿ ಸತ್ಯಾಗ್ರಹ ಶಿಬಿರಗಳು ಸ್ಥಾಪಿಸಲ್ಟಟ್ಟವು. ಸತ್ಯಾಗ್ರಹಿಗಳಿಗೆ ಶಾಂತಿ, ಶಿಸ್ತು, ಸಂಯಮ ತರಬೇತುಗೊಳಿಸಲಾಯ್ತು. ಹೊಸದುರ್ಗ, ಬಾಗೂರು, ಕೊಳಹಾಳು, ಮಾಯಕೊಂಡ, ಕಸ್ತೂರಿ ರಂಗಪ್ಪನಹಳ್ಳಿ, ಮರಡೀಹಳ್ಳಿ, ಚಳ್ಳಕೆರೆ, ಗೊರ್ಲಡಕ ಇವುಗಳೇ ಸತ್ಯಾಗ್ರಹ ಕೇಂದ್ರಗಳು. ವಿಶೇಷವೆಂದರೆ ನೇಗಿಲಯೋಗಿ ಶ್ರೀ ಕೊಟ್ರಿನಂಜಪ್ಪನವರ ನೇತೃತ್ವದಲ್ಲಿ ಹೊಳಲ್ಕೆರೆ ತಾಲ್ಲೂಕು ರಂಗಾಪುರದಲ್ಲಿ ಸ್ಥಾಪಿಸಲ್ಪಟ್ಟ ಸತ್ಯಾಗ್ರಹ ಶಿಬಿರಕ್ಕೆ ‘ಶಿವಾನಂದಾಶ್ರಮ’ವೆಂದು ಹೆಸರಿಸಲಾಗಿತ್ತು. ಈ ಶಿಬಿರದಿಂದ ತಂಡಗಳು ಒಂದೊಂದಾಗಿ ಕೊಟ್ರಿಬಸಪ್ಪ, ಕೊಟಿಗಿ ಸಿದ್ಧಲಿಂಗಪ್ಪ, ರಾಮಗಿರಿ ತಿಮ್ಮಪ್ಪಯ್ಯ, ಜಾಜೂರು ಸಿದ್ಧಪ್ಪ, ಗೌಡ್ರ ಈಶ್ವರಪ್ಪ ಸತ್ಯಾಗ್ರಹಕ್ಕೆ ಸಿದ್ಧರಾಗಿ ಹೊರಟಿದ್ದ ಪ್ರಮುಖರು.
ತುರುವನೂರು ಕೇಂದ್ರದಲ್ಲಿ ಎಸ್.ನಿಜಲಿಂಗಪ್ಪ, ಬಳ್ಳಾರಿ ಸಿದ್ಧಮ್ಮ, ಎಸ್. ವಾಸುದೇವರಾವ್, ಕೃಷ್ಣಾರೆಡ್ಡಿ, ರಾಜಶೇಖರಯ್ಯ, ನಾಗರತ್ನಮ್ಮ ಹಿರೇಮಠ ಇವರ ಬಂಧನವಾಗುತ್ತಿದ್ದಂತೆ, ಜಿಲ್ಲೆಯ ಎಲ್ಲ ಕಡೆಗೂ ಸತ್ಯಾಗ್ರಹ ಬಿರುಸಾಗಿ ಸಾಗಿತು. ರಂಗಾಪುರ ಕೇಂದ್ರದ ಸತ್ಯಾಗ್ರಹಗಳ ಸ್ವರೂಪ ಗಾಂಧೀಜಿಯವರ ದಂಡಿಯಾತ್ರೆಯಂತಾಗಿತ್ತು. ಶ್ರೀಕೊಟ್ರೆ ಮನೆತನ ಆಗ ತೆತ್ತ ಬೆಲೆ, ಅನುಭವಿಸಿದ ಹಿಂಸೆ ವರ್ಣಾತೀತ ಗಂಡು, ಹೆಣ್ಣು ಎನ್ನದೆ ವಿದ್ಯಾರ್ಥಿಗಳು, ರೈತರು ಅಸಂಖ್ಯೆಯಲ್ಲಿ ಭಾಗಿಗಳಾಗಿದ್ದರು. ಗರ್ಭಿಣಿ ಶಾಂತಮ್ಮ, ಗಂಗಮ್ಮ ಇವರ ದಿಟ್ಟ ಹೆಜ್ಜೆಗಳು ಎಲ್ಲರನ್ನು ಹುರುದುಂಬಿಸುತ್ತ್ತಿದ್ದವು. ಸತ್ಯಾಗ್ರಹಿಗಳ ಹಣೆಗೆ ಕುಂಕಮ, ಅರಿಷಿಣ ಹಚ್ಚಿ, ವೀರ ತಿಲಕವಿತ್ತು ಕೊರಳಿಗೆ ಹೂಮಾಲೆ ಹಾಕಿ, ಆರತಿ ಎತ್ತಿ, ಹಾಲುಣಿಸಿ ಬೀಳ್ಕೊಡುತ್ತಿದ್ದ ಆ ದೃಶ್ಯ ಅಸದೃಶವಾದುದು! ವೀರ ಯೋಧರು ಹೆಗಲ ಮೇಲೆ ಕೊಡಲಿ ಹೊತ್ತು ಜಯಘೋಷ, ರಾಷ್ಟ್ರಗೀತೆ ಮೊಳಗಿಸುತ್ತ ಈಚಲವನ ಪ್ರವೇಶಿಸುತ್ತಿದ್ದಂತೆ ಬಂಧನಗಳು ಸಾಗಿದವು. ಒಂದೊಂದು ತಂಡದಲ್ಲೂ 20ಕ್ಕೂ ಹೆಚ್ಚು ಹೋರಾಟಗಾರರು. ಅವರ ಹುರುಪು ಆವೇಶ ವರ್ಣಾತೀತ.
ಲಾಕಪ್ಪಿನಲ್ಲಿ ಬಂಧಿತ ಸತ್ಯಾಗ್ರಹಿಗಳನ್ನು ಹೆದ್ದಾರಿಗೆ ತರಲು ಕಾಲಾಳುಗಳ ಬಿಗಿ ಕ್ರಮ ಅಮಾನುಷ. ಈ ಸಂದರ್ಭದಲ್ಲಿ ಬಂಧಿತ ಸತ್ಯಾಗ್ರಹಿ ತಿಮ್ಮಪ್ಪಯ್ಯ ಇವರ ವೃದ್ಧ ತಾಯಿ ಮಗನನ್ನು ಕಾಣಲು ಚಡಪಡಿಸಿ ಚೀರಾಡುತ್ತ ಓಡಿಬಂದಳು! ಆ ತಾಯಿ ಮಕ್ಕಳ ವಾತ್ಸಲ್ಯ ಸತ್ಯಾಗ್ರಹಿಗಳ ಕಣ್ಣಲ್ಲಿ ನೀರುದುರಿಸಿಬಿಟ್ಟಿತು. ಇದನ್ನು ಕಂಡ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್-ಸತ್ಯಾಗ್ರಹಿಗಳನ್ನು ಅಪಮಾನಗೊಳಿಸಿ ಚುಚ್ಚುವ ಮಾತುಗಳಿಂದ ಚುಡಾಯಿಸಿದರು. ಈ ಅನುಭವದಿಂದ ಸತ್ಯಾಗ್ರಹಿಗಳು ಬಹು ನೊಂದರು ಆಗ ಆ ತಾಯಿಯ ಪುತ್ರ ತಿಮ್ಮಪ್ಪಯ್ಯ ತನ್ನ ತಾಯಿಯ ಪಾದಗಳಿಗೆ ಎರಗಿ ಛತ್ರಪತಿ ಶಿವಾಜಿ, ಅಂಬಾಭವಾನಿಗೆ ನಮಸ್ಕರಿಸುವ ಭಂಗಿಯಲ್ಲಿ ಆಶೀರ್ವಾದ ಬಯಸಿ ನಮಸ್ಕರಿಸಿದ. ಆಗ ಆ ತಾಯಿಯಲ್ಲಿ ನಾಡಕಟ್ಟುವ ಆವೇಶ ಉಕ್ಕಿಬಂತು. ತನ್ನ ಬಾಯಿಂದಲೇ ಜಯಘೋಷ ಹಾಡುತ್ತ ಹರಸಿದಳು ಆ ತಾಯಿ. ಧ್ವನಿಗೂಡಿಸಿದ ಸತ್ಯಾಗ್ರಹಿಗಳ ಗರ್ಜನೆ ಮುಗಿಲಮುಟ್ಟಿತು. ಆಕೆ ತಂದಿದ್ದ ತುಪ್ಪದಲ್ಲಿ ಅದ್ದಿದ್ದ ಖಾರೀಕ ಹಂಚಿದಳು. ಅಲ್ಲಿಯ ತೋಟಗಾರರು ಎಳೆನೀರು ಕುಡಿಸಿದರು. ಪೊಲೀಸರು ತೆಪ್ಪಗಾಗಿ ಹೆದ್ದಾರಿಯ ಮೂಲಕ ಹೊಳಲ್ಕೆರೆ ಲಾಕಪ್ಪಿಗೆ ಕೊಂಡೊಯ್ದು ಕೂಡಿ ಹಾಕಿದರು.
ಆ ಲಾಕಪ್ಪಿನಲ್ಲಿ ವಿಧುರಾಶ್ವತ್ತದ ಗೋಲಿಬಾರ್ ಪ್ರಕರಣದಲ್ಲಿ ಹೆಸರಾಗಿದ್ದ ಭೀಕರ ಕೃತ್ಯದ ಪೊಲೀಸ್ ಅಧಿಕಾರಿ ನೇಮಕಗೊಂಡಿದ್ದರು. ಉಸಿರಾಡಲಿಕ್ಕೂ ಸಾಲದ ಚಿಕ್ಕ ಕತ್ತಲೆ ಕೋಣೆ ಅದಾಗಿತ್ತು. ಸತ್ಯಾಗ್ರಹಿಗಳಿಗೆ ದೊರಕುತ್ತಿದ್ದ ಅಲ್ಪ ಆಹಾರದಲ್ಲೇ ಮಣ್ಣು – ಕಲ್ಲು, ಕುಡಿಯಲು ಕೊಳಕು ನೀರು. ಮಾತಾಡಿಸಿದರೆ ಕೆಟ್ಟ ಮಾತು, ಲಾಠಿಪೆಟ್ಟು ಆ ಠಾಣೆಯಲ್ಲಿ . ಇದೆಲ್ಲಾ ಕಂಡು ರೋಸಿದ ಯೋಧರು ನೇರ ಆಫೀಸಿಗೆ ಧಾವಿಸಿ ದುರ್ವರ್ತನೆಯನ್ನು ಪ್ರತಿಭಟಿಸಿದರು ಉಪವಾಸ ವ್ರತ ಕೈಗೊಳ್ಳುವುದಾಗಿ ತಿಳಿಸಿದ ಮೇಲೆ ಸೌಲಭ್ಯ ಸೌಜನ್ಯತೆ ದೊರಕಿದವು
ದಾವಣಗೆರೆ ಪುರಸಭಾ ಭವನದ ಹಿಂಭಾಗದಲ್ಲಿ ಆಗ ಸ್ಪೆಷಲ್ ಕೋರ್ಟ್. ಆ ಕೋರ್ಟಿನಲ್ಲೇ ಹೊಳೆಲ್ಕೆರೆ ತಾಲ್ಲೂಕು ಅರಣ್ಯ ಸತ್ಯಾಗ್ರಹಿಗಳ ವಿಚಾರಣೆ. ಸತ್ಯಾಗ್ರಹಿಗಳ ಹೇಳಿಕೆಗಳು ದಂಡಾಧಿಕಾರಿಗಳಿಗೆ ಅಚ್ಚರಿ ತಂದವು. ವಯಸ್ಸು ಕೇಳಿ ಪ್ರಶ್ನಿಸಿದರೆ, ಸ್ವಾತಂತ್ರ್ಯ ಪ್ರಜ್ಞೆ ಬಂದಂದಿನಿಂದ ಲೆಕ್ಕಾಹಾಕಿ ವಯಸ್ಸು ಹೇಳುತ್ತಿದ್ದರು. ಕೆಲಸ ಏನೆಂದು ಪ್ರಶ್ನಿಸಿದರೆ, ದೇಶ ಸೇವೆ ಎಂಬ ಉತ್ತರ. 500 ರೂ. ದಂಡ ಆ ದಂಡ, ತೆರದಿದ್ದರೆ 48 ತಿಂಗಳು(3 ವರ್ಷ ಕಠಿಣ ಶಿಕ್ಷೆ 500 ರೂ ದಂಡ) ಶಿಕ್ಷೆ. ಶಿಕ್ಷೆಗೊಳಗಾದ ರಾಜಕೀಯ ಬಂಧಿಗಳನ್ನು ಸಂದರ್ಶಿಸಲು ಕಿಕ್ಕಿರಿದ ಜನ. ಈ ಜನಸಂದಣಿ ಚದುರಿಸಲು ಪೊಲೀಸರ ಬಿಗಿ ಕ್ರಮ. ಆದರೆ ಅವರ ಶ್ರಮ ನಿರರ್ಥಕ. ಶಿಕ್ಷಿತರನ್ನು ನಿವಾರಿಸಲು ಪೊಲೀಸ್ ವ್ಯಾನು. ವ್ಯಾನು ಹತ್ತಿ ಹೋಗಲು ಸತ್ಯಾಗ್ರಹಿಗಳ ನಿರಾಕರಣೆ. ನ್ಯಾಯಾಲಯದಿಂದ ಪೊಲೀಸ್ ಠಾಣೆ ಮಂಡಿಪೇಟೆ ಉದ್ದಕ್ಕೂ ಜನಸಾಗರ. ಕಾಲ್ನಡಿಗೆಯಲ್ಲೇ ಸಾಗಿದ್ದ ಸತ್ಯಾಗ್ರಹಿಗಳಿಗೆ ಮಾಲಾರ್ಪಣೆ, ಜಯಘೋಷ ಎಡಬಿಡದೆ ಸಾಗಿದ್ದವು. ಕೊಟಿಗೆ ಸಿದ್ದಲಿಂಗಪ್ಪನವರ ಭಾಷಣ ಸುರಿಮಳೆ ಬೇರೆ ಸಾಗಿದ್ದಿತು.
ಬೆಂಗಳೂರು ಜೇಲಿನಲ್ಲಿ :
ಒಳಗಿರಲಿ ಹೊರಗಿರಲಿ, ಸತ್ಯಾಗ್ರಹಿಗಳಕಾಟ ಸರ್ಕಾರಕ್ಕೆ ತಲೆ ಬೇನೆ ತಂದವು. ಸರ್ಕಾರ ರೊಚ್ಚಿಗೆದ್ದಿತು; ದಂಡ ವಸೂಲಿಗೆ ಕೈ ಹಚ್ಚಿತು. ರೈತರ ದನಕರುಗಳನ್ನು, ಅವರ ಮನೆಗಳ ಮೇಲಿದ್ದ ಮೇಲ್ಚಾವಣಿ ತಗಡು, ಬಾಗಿಲುಗಳನ್ನು ಹರಾಜಿಗೆ ಹಾಕಿತು. ಸರ್ಕಾರ ಕೊಟಿಗಿಯವರ ಮನೆ ಮೇಲೆ ಜಪ್ತು ವಾರೆಂಟ್ ಜರುಗಿಸುತ್ತಿದ್ದಾಗ, ನಗರದ ಹರಳೆಣ್ಣೆ ವಕೀಲರು ಜನರ ಸಹಕಾರದಿಂದ ತಡೆಗಟ್ಟಿ ಕೀರ್ತಿಶೇಷರಾದರು. ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಈ ಜಿಲ್ಲೆಯ ರಾಜಕೀಯ ಕೈದಿಗಳ ಮೇಲೆ ವಿಶೇಷವಾದ ನಿಗ ಇರಿಸಲಾಗಿತ್ತು. ಒಮ್ಮೆ ನಿರ್ದೋಷಿ ಸತ್ಯಾಗ್ರಹಿ ಕೊಟ್ರೆ ಬಸಪ್ಪನವರಿಗೆ ಒಂದು ಡಜನ್ ಫಟಿಗೆ ಶಿಕ್ಷೆ(ಛಡೀ ಏಟು) ನೀಡಲಾಯಿತು. ಆ ಛಡೀ ಏಟು ಬಾರಿಸಲು ಶ್ರೀಯುತರನ್ನು ಮರಕ್ಕೆ ಕಟ್ಟಿ ಅವರಕೈ ಕಾಲು ಸೊಂಟಗಳಿಗೆ ಬೆಲ್ಟ್ ಪಟ್ಟಿ ಕಟ್ಟಿತ್ತಲೆ ಮೇಲೊಂದೆ ಬಾರಿಸಿದ ಹೃದಯವಿದ್ರಾವಕ ದೃಶ್ಯ ಮರೆಯುವಂಥದಲ್ಲ! ರಕ್ತ ಚಿಮ್ಮಿದರೂ ಬಿಡದೆ ಒಂದು ಡಜನ್ ಪೂರ್ತ ಹೊಡೆತ. ಅಳ್ಳೆದೆ ಹೇಡಿಗಳಾಗಿದ್ದರೆ ಪ್ರಾಣ ಉಳಿಯದ ಕೃತ್ಯ ಅದಾಗಿತ್ತು. ಆದರೆ ವೀರ ಸತ್ಯಾಗ್ರಹಿ ಧೈರ್ಯಗೆಡಲಿಲ್ಲ.
ಜೇಲಾಧಿಕಾರಿಯು ಕೊಟಿಗಿ ಸಿದ್ಧಲಿಂಗಪ್ಪ ಮತ್ತು ಇವರ ತಂಡದವರಿಗೆ ತಲಾ ಇಪ್ಪತ್ತೈದು ರಾಗಿ ಬೀಸಲು ಹಚ್ಚಿದರು. ಆ ರಾಗಿ ಬೀಸುವಾಗಲೂ ಕೊಟಿಗಿ ತೆಪ್ಪಗಿರದೆ ರಾಗಿ ಬೀಸುವ ರಾಷ್ಟಗೀತೆ ಹಾಡಿ ಇತರರಿಂದಲೂ ಹಾಡಿಸಹತ್ತಿದರು. ಇವರ ನಾದ ಜೇಲಾಧಿಕಾರಿಗಳ ಕಿವಿಗೂ ತಾಕಿತು. ತಕ್ಷಣ ಶ್ರೀಯುತರನ್ನು ಆ ಗುಂಪಿನಿಂದ ಬೇರ್ಪಡಿಸಿ ಜಮೀನು ಕೆಲಸಕ್ಕೆ ಹಾಕಿದರು. ಕಳೇ ಕೀಳುವುದi ಇತ್ಯಾದಿ ಕೆಲಸ. ಆ ಜೈಲಿನಲ್ಲಿ ಹೀಗೆ ಒಬ್ಬೊಬ್ಬರದೂ ಒಂದೊಂದು ವಿಚಿತ್ರ ಅನುಭವ.
ಕೊಟಿಗಿಯವರಿಗೆ ಕಡೆ ತನಕ ಈ ಜೇಲಿನಲ್ಲಿ ಉಳಿಯಕ್ಕಾಗಲಿಲ್ಲ. ಹಠಾತ್ತಾನೆ ಹಾಸನ ಸೆರೆಮನೆಗೆ ವರ್ಗಾವಣೆ, ಹಾಸನ ಜೇಲಿನಲ್ಲಿದ್ದ ಎಸ್.ನಿಜಲಿಂಗಪ್ಪ, ಎ. ಭೀಮಪ್ಪನಾಯಕ್, ಕೆ.ಕೆಂಚಪ್ಪ, ಟಿ.ಮರಿಯಪ್ಪ, ಹೆಚ್. ಸಿದ್ದಯ್ಯ, ಸಾಹುಕಾರ್ ಚನ್ನಯ್ಯ ಬಂದೀಗೌಡರೇ ಮುಂತಾದರೊಡನೆ ಕೂಡಿ ಕೊಂಡಿರಲು ಅವರಿಗೆ ಒಂದು ಸದಾವಕಾಶ ಸಿಕ್ಕಿತು. ಅಲ್ಲಿ ರಾಜಕೀಯ ಉಪದೇಶಕ್ಕೆ ಶ್ರೀ ನಿಜಲಿಂಗಪ್ಪನವರು ಏರ್ಪಡಿಸಿದ್ದರು. ಅದರ ಉಪಯೋಗ ಎಲ್ಲರಿಗೂ ಲಭಿಸಿತು. ಈ ಸಚ್ಛಾರಿತ್ಯ್ರಾ ಇತಿಹಾಸವು ಕಣ್ಮರೆಯಾದರೆ ಕನಸಿಗೂ ಸಿಗದಂತಹ ಅನುಭವಗಳಿವು. ಈ ರೀತಿ ನಾಡಿನಾದ್ಯಂತ ಹಬ್ಬಿದ ಅರಣ್ಯ ಸತ್ಯಾಗ್ರಹದ ಮತ್ತು ಸತ್ಯಾಗ್ರಹಿಗಳ ಜೇಲು ಅನುಭವಗಳು ಬೇಕಾದಷ್ಟು. ಆದರೆ ಚಿತ್ರದುರ್ಗ ಜಿಲ್ಲೆಯ ಸತ್ಯಾಗ್ರಹಿಗಳ ಕ್ರಾಂತಿಕಾರಿ ಅನುಭವ ಮತ್ತು ಈ ಜಿಲ್ಲೆಯ ನಾಯಕರು ಜೇಲಿನಲ್ಲಿ ನೀಡಿದ ರಾಜಕೀಯ ತರಬೇತಿ – ಇವುಗಳೇ ಮುಂದಿನ ಹೋರಾಟಕ್ಕೆ ಮಾರ್ಗದರ್ಶನವಾದವು
ಕ್ವಿಟ್ ಇಂಡಿಯಾ ಚಳುವಳಿ
ರಾಷ್ಟ್ರದಲ್ಲೇ ಅತಿ ಉಗ್ರ ಸಂಗ್ರಾಮ 1942ರ ಕ್ವಿಟ್ ಇಂಡಿಯಾ ಸಮರ. ‘ಮಾಡು ಇಲ್ಲವೆ ಮಡಿ ‘ ಹೋರಾಟಗಾರರ ಪ್ರತಿಜ್ಞೆ. ಆಳರಸರ ದೌರ್ಜನ್ಯ ಅವರ ಎದೆಗುಂದಿಸಲಿಲ್ಲ. ಬ್ರಿಟೀಷ್ ಸಾಮ್ರಾಜ್ಯ ಶಾಹಿಯನ್ನು ಮೆಟ್ಟಿ ತಾಯಿ ಭಾರತಾಂಬೆಯ ಮೇಲಿನ ದೇಶ ಭಕ್ತಿಯ ಹರಿಸಲು ಎಂಥ ತ್ಯಾಗ – ಬಲಿದಾನಕ್ಕೂ ಹಿಂಜರಿಯಲಿಲ್ಲ. ಹಳ್ಳಿಗಳಿಂದ ದಿಲ್ಲಿಯವರೆಗೆ ಸ್ವಾತಂತ್ರ್ಯ ಕಹಳೆ ಮೊಳಗಿತು.
ಕರ್ನಾಟಕದಲ್ಲಿ ಗಂಡು ಮೆಟ್ಟಿನ ನೆಲ ಚಿತ್ರದುರ್ಗ ಜಿಲ್ಲೆ, ದಾವಣಗೆರೆಗಂತೂ ಧವಳಕೀರ್ತಿ. ಬೆಂಗಳೂರಿನಲ್ಲಿ ವ್ಯಾಸಂಗದಲ್ಲಿದ್ದ ವೇದ ಮೂರ್ತಿ ಕಾಲೇಜು ಕಲಿಕೆಗೆ ಶರಣು ಹೊಡೆದು ದಾವಣಗೆರೆಗೆ ಧಾವಿಸಿ ಬಂದರು. ನಗರದ ನಾಗರಿಕರನ್ನು ಬಡಿದೆಬ್ಬಿಸಿದರು; ಸ್ವಾತಂತ್ರ್ಯ ಸಮರದ ಕಿಡಿ ಹೊತ್ತಿಸಲು ಬಾಲ್ಯ ಸ್ನೇಹಿತ ಕೊಟಿಗಿಯವರನ್ನು ಕಲೆ ಹಾಕಿಕೊಂಡರು; ವಿದ್ಯಾರ್ಥಿಗಳು ಸಂಗ್ರಾಮಕ್ಕೆ ಧುಮುಕಲು ಕರೆಕೊಟ್ಟರು. ಶಾಲಾ ಕಟ್ಟಡಗಳಿಗೆ ಬೀಗ ಹಾಕಲು ಸೂಚಿಸಿದರು. ಸೂಚನೆ ನಿರಾಕರಿಸಿದ್ದರಿಂದ , ಇಟಿಗೆ ಮತ್ತು ಕೊಟಿಗೆ ಜೈ ಘೋಷ ಮಾಡುತ್ತಲೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ತಮ್ಮ ಕೊಠಡಿಗಳಿಂದ ಹೊರಬಿದ್ದರು; ವಿದ್ಯಾರ್ಥಿನಿಯರೂ ಬಂದು ಸೇರಿದರು. ಆ ಹೈಸ್ಕೂಲ್ ಮೈದಾನದಲ್ಲೇ ಪ್ರಪ್ರಥಮ ಸಭೆ. ಸಾಕಷ್ಟು ಬಿರುಸಿನ ಪ್ರಚಾರ ಭಾಷಣಗಳಾದವು. ಕಾರ್ಮಿಕರೂ ಧಾವಿಸಿ ಬಂದರು. ಕಾಮ್ರೇಡ್ ಮುರುಗಯ್ಯ ಮೂಲಕ ಬೃಹತ್ ಮೆರವಣಿಗೆ ಹೊರಟಾಗ ರಾಜ ಮಾರ್ಗದ ಉದ್ದಕ್ಕೂ ಇಕ್ಕೆಡೆಗಳಲ್ಲೂ ಜನಸಾಗರ.
ಈ ಮೆರವಣಿಗೆಯನ್ನು ನಿಯಂತ್ರಿಸುತ್ತಿದ್ದ ನೇತಾರರೆಂದರೆ ಇಟಿಗೆ ಮತ್ತು ಕೊಟಿಗಿ, ಪುಢಾರಿ ಮತ್ತು ಆಹಿ ಶಿವಾನಂದ ಸ್ವಾಮಿ. ತಕ್ಷಣದಲ್ಲಿಯೇ ಅಮಿತೋತ್ಸಾಹ ಕಂಡ ಕಾಸಲ ಶ್ರೀನಿವಾಸ ಶೆಟ್ಟರು, ಮಾಗನಾರು ಬಸಪ್ಪನವರು ಗಾಂಧೀಜಿ ವೀರಪ್ಪನವರು. ಕೆ.ಟಿ ಜಂಬಣ್ಣನವರು, ಬೊಂದಾಡೆ ಹನುಮಂತರಾಯರು, ಜಡೆ ಕೃಷ್ಣರಾಯರು, ನಾಗಯ್ಯನವರು ಮಂಡ್ಲೂರು ತಿಮ್ಮಪ್ಪನವರೇ ಮೊದಲಾದವರು ಸ್ಫೂರ್ತಿ ತಂದುಕೊಂಡರು. ಕಲಾದಿಗಿ ನೀಲಪ್ಪ, ಕಂದಗಲ್ ವೀರಣ್ಣ ಶ್ರೀಮಂಧರ, ಉಮಾಪತಯ್ಯ ಬೆಳ್ಳೂಡಿ ಷಣ್ಮುಖಪ್ಪ, ನೆಗಳೂರು ಶರಭಲಿಂಗಪ್ಪ ಉತ್ತಂಗಿ ರುದ್ರಪ್ಪ ಮತ್ತು ಸಹೋದರರು ಸಕ್ರಿಯ ಪಾತ್ರ ವಹಿಸಿದ ಯುವ ಸಾಹಸಿಗಳ ಚಳವಳಿ ಕಾವೇರಿತು. ಸರ್ಕಾರವು ಸಶಸ್ತ್ರ ಪೊಲೀಸ್‍ಪಡೆ, ಮಿಲಿಟ್ರಿ ಸಿಬ್ಬಂದಿಯನ್ನು ಕರೆಸಿ ಕೆಲ ಸರ್ಕಾರಿ ಕಟ್ಟಡಗಳಲ್ಲಿ ರಹಸ್ಯವಾಗಿ ಕಲೆಹಾಕಿತು. ಇದನ್ನರಿತ ಇಟಗಿಯವರು ಗ್ರಾಮಾಂತರಲ್ಲಿ ಜನ ಜಾಗ್ರತಗೊಳಿಸಲು ಸುಮಾರು 50 ಜನ ವಿದ್ಯಾರ್ಥಿಗಳನ್ನು ಕರೆದುಕೊಂಡು ಕಣ್ಮರೆಯಾದರು.
ಈ ಕಡೆ ನಗರದ ತಾಲ್ಲೂಕು ಕಚೇರಿ, ಟ್ರೆಜರಿಗೆ ಮುತ್ತಿಗೆ ಹಾಕಿದ ಜನರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು, ಗುಂಡಿನ ಸುರಿಮಳೆ ಜರುಗಿತು. ಹತ್ತಾರು ಜನ ಈ ಗುಂಡುಗಳಿಗೆ ಬಲೆಯಾಗಿ ನೆಲಕಚ್ಚಿದರು. “ಸತ್ಯಾಗ್ರಹಿಗಳನ್ನು ಶಾಂತಗೊಳಿಸುತ್ತೇವೆ; ಗುಂಡು ಹಾರಿಸಬೇಡಿರೆಂದು” ಕರ ಜೋಡಿಸಿ ಬೇಡುತ್ತಿದ್ದ ಖಾದಿ ಸಿದ್ದಪ್ಪನವರ ರೋಧನೆ ವ್ಯರ್ಥವಾಯಿತು. ಶಾಂತ ರೀತಿ ಸತ್ಯಾಗ್ರಹ ಆಚರಿಸಲು ಕೋರುತ್ತಿದ್ದ ಕೊಟಿಗಿಯವರದೂ ಅರಣ್ಯರೋಧನವಾಯ್ತು. ಉದ್ರಿಕ್ತ ಜನರ ಗುಂಪು ಸೇಡು ತೀರಿಸಿಕೊಳ್ಳುವ ಹಟದಿಂದ ದಾರಿ ತಪ್ಪಿತು. ಅಂಗಡಿ ಮನೆಗಳಲ್ಲಿ ಸೀಮೆಎಣ್ಣೆ ಡಬ್ಬಗಳನ್ನು ಹೊತ್ತು ತಂದರು. ರೈಲ್ವೆ ಸ್ಟೇಷನ್ ರೈಲ್ವೆ ಬೋಗಿಗಳ ಮೇಲೆ ಆ ಎಣ್ಣೆ ಸುರಿದು ಬೆಂಕಿ ಇಟ್ಟರು. ಭುಗಿಲೆದ್ದ ಬೆಂಕಿಯ ಜ್ವಾಲೆ ಮುಗಿಲೆತ್ತರ ಆವರಿಸಿತು. ಈ ಸಮಯದಲ್ಲಿ ಶಿವಾನಂದ ಸ್ವಾಮಿ ಆಲೂರು ಚಂದ್ರಶೇಖರಪ್ಪ ಲೋಕಪಾಲ್, ಕೆ ವೀರಣ್ಣ ಇತರರು ಶಾಂತಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು.
ಕರುಳು ಹಿಂಡುವ ದೃಶ್ಯ
ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಬಿದ್ದ ಹೆಣಗಳ ರಕ್ತ ,ಮಡುಗಟ್ಟಿನಿಂತಿತ್ತು. ರೌದ್ರತೆ ಕರಗಿ ಸ್ಮಶಾನಮೌನ ಆವರಿಸಿತ್ತು. ಇದೊಂದು ಕರುಳು ಕತ್ತರಿಸುವ ದೃಶ್ಯ. ಉತ್ತಂಗಿ ಕೊಟ್ರಪ್ಪನವರ ಐದು ಮಕ್ಕಳಲ್ಲಿ ನಾಗಪ್ಪ, ರುದ್ರಪ್ಪ, ಬಸವರಾಜಪ್ಪ ಇವರುಗಳಲ್ಲಿ ಇಬ್ಬರಿಗೆ ಲಾಠಿ ಪೆಟ್ಟುಗಳು, ಓರ್ವ ನಾಗಪ್ಪನಿಗೆ ಗುಂಡು ಸೇರಿದ ತೋಳಿನಿಂದ ಸುರಿಯುತ್ತಿದ್ದ ರಕ್ತ ಕಂಡ ಕೊಟಿಗಿಯವರು ನಾಗಪ್ಪ ಡಾಕ್ಟರ್ ಗೋಪಾಲರಾವ್ ಷಾಪಿಗೆ ಕರೆದುಕೊಂಡು ಹೋಗಿ, ಕಾಂಪೌಂಡರ್ ನಾರಾಯಣರಾವ್ ಅವರಿಂದ ತೋಳಿನಲ್ಲಿ ಹೊಕ್ಕಿದ್ದ ಗುಂಡನ್ನು ಹೊರತೆಗಿಸಿ ಉಪಚರಿಸಿದರು. ಆ ಕಾಂಪೌಂಡರ್ ದಯಾಮಯರು.
ಮಧ್ಯಾಹ್ನ ಏರಿದಂತೆ ಜನ ಹರಿಹರದ ರಸ್ತೆಗೆ ಧಾವಿಸಿ ನಡೆದರು. ಹರಿಹರದಲ್ಲೇ ಇದ್ದ ಮಿಲಿಟ್ರಿ ನಗರಕ್ಕಾಗಮಿಸುವುದನ್ನು ತಡೆಹಾಕುವ ಸನ್ನಾಹದಲ್ಲಿತ್ತು. ಅಕ್ಕಸಾಲೆ ವಿರೂಪಾಕ್ಷಪ್ಪ, ಹಳ್ಳೂರು ನಾಗಪ್ಪ, ಅಂದನೂರು ಗುರುಶಾಂತಪ್ಪ, ಜೆ.ಎಂ. ಕಲ್ಲಪ್ಪ ಪ್ರಮುಖ ಮುಂದಾಳುಗಳೊಡನೆ ದೊಡ್ಡ ತಂಡ. ರಸ್ತೆ ಬದಿಯ ಮರ ಕಡಿದು, ಉರುಳಿಸಿ, ಕಲ್ಲುಬಂಡೆಗಳನ್ನು ಹೊತ್ತು ತಂದು, ಮಿಲಿಟ್ರಿ ವಾಹನಗಳು ಪ್ರವೇಶಿಸಲು ತಡೆ ಒಡ್ಡುತ್ತಿದ್ದರು. ಈ ಸುದ್ದಿ ಹೋಯಿತೊ ಏನೋ ಹರಿಹರದಿಂದ ಮಿಲಿಟ್ರಿ ಧಾವಿಸಿ ಬಂದೇ ಬಿಟ್ಟಿತು. ತಡ ಮಾಡದೆ ಗುಂಡು ಹಾರಿಸಲು ಸಿದ್ಧರಾಗುತ್ತಿದ್ದಂತೆ ಎದೆಯೊಡ್ಡಿ ನಿಂತ ಶೂರ ಪುತ್ರ ಹಳ್ಳೂರು ನಾಗಪ್ಪ ಈ ನೆಲದ ಋಣ ತೀರಿಸಿ ಹುತಾತ್ಮನಾದ ಇದರಿಂದ ತೃಪ್ತರಾಗದ ಬ್ರಿಟಿಷ ದಂಡು, ಗಂಡೆದೆಯ ವಿರೂಪಾಕ್ಷಪ್ಪನಿಗೆ ಗುರಿಯಿಟ್ಟು ಬಂದೂಕು ಏರಿಸಿ ಬಲಿ ತೆಗಿದುಕೊಂಡಿತು. ಅಕ್ಕ ಸಾಲೇ ವಿರೂಪಾಕ್ಷಪ್ಪ, ಹಳ್ಳೂರು ನಾಗಪ್ಪ ಇಬ್ಬರೂ ರಣಧೀರರೆನಿಸಿದ ಹುತಾತ್ಮರಾದರು. ಈ ಗೋಲಿಬಾರಿನಲ್ಲಿ ಬುರುಡೆ ಬಿಚ್ಚಿದವರು, ಕೈ ಮೈ ಪೆಟ್ಟಾದವರೂ ಇದ್ದರು ಜಿ.ಎಂ. ಕಲ್ಲಪ್ಪನವರು ಕಾಲು ಗುಂಡಿನಿಂದಲೇ ಊನವಾಯ್ತು.
ಭೂಗತ ಚಟುವಟಿಕೆ
ಸಂಜೆ ಆದಂತೆ ಆಹಾರ ಸಾಮಗ್ರಿಗಳಿದ್ದ ರೈಲ್ವೆ ಗೋಡನ್ನುಗಳಿಗೂ ನಾಗರಿಕರ ಪಡಿ ಪದಾರ್ಥಗಳಿಗೂ ಬೆಂಕಿ ಹಾಕುತ್ತಾರೆಂಬ ಸುದ್ದಿ ತಿಳಿದ ಸಿದ್ದಮ್ಮನವರು ತಮ್ಮ ಸಹೋದರ ಸಿದ್ಧಲಿಂಗಪ್ಪನಿಗೆ ಅದನ್ನು ತಪ್ಪಿಸಲು ಸಲಹೆ ನೀಡಿದರು. ಸಿದ್ಧಲಿಂಗಪ್ಪ ಒಡನೆಯ ಜಾಧವ ನೀಲಕಂಠಪ್ಪ, ಸಿಂಧೆ ಹನುಮಂತರಾವ್ ಇವರನ್ನು ಜೊತೆಗೆ ಕರೆದುಕೊಂಡು ಗೂಡ್‍ಷೆಡ್ ಬಳಿ ಧಾವಿಸಿ ಓಡಿಹೋಗಿ, ನೋಡುವಲ್ಲಿ ಸಿದ್ದಮ್ಮನವರ ವರದಿ ಸತ್ಯವೆಂದು ಕಂಡಿತು. ಕೈಲಿ ಸೀಮೆಎಣ್ಣೆ ಡಬ್ಬ, ಕೆಲವರ ಕೈಲಿ ಕತ್ತಿ ಮಚ್ಚು ಕಂಡುಬಂದವು. ಸಿಂಧೆಯವರು ಮತ್ತು ಜಾಧವ ಕೈ ಮುಗಿದು ನಿಂತರು. ಈ ರೀತಿ ಹಠ ಸೇಡು ತೀರಿಸಿಕೊಳ್ಳಲೇ ಬೇಕಾಗಿದ್ದರೆ ನಮ್ಮ ಮೂವರ ಮೇಲೂ ಎಣ್ಣೆ ಸುರಿದು ತೃಪ್ತರಾಗಿರೆಂದು ಕೊಟಗಿಯವರು ಅವರ ಕಾಲಿಗೆ ಬಿದ್ದರು. ಆ ಜನ ಶಾಂತರಾಗಿ ಸರಿದರು. ಜನತೆಗೆ ಉಪಯುಕ್ತವಾಗುವ ಆಹಾರ ಸಾಮಗ್ರಿ ನಾಶವಾಗದೆ ಉಳಿಯುವಂತಾಯಿತು.
50 ಜನರೊಂದಿಗೆ ಗ್ರಾಮಗಳತ್ತ ತೆರಳಿದ್ದ ಇಟಿಗಿಯವರ ತಂಡ ತೀವ್ರ ಚಟುವಟಿಕೆ ಆರಂಭಸಿತ್ತು. ಇವರ ಮೇಲೆ ಕಂಡಲ್ಲಿ ಗುಂಡು ಹಾರಿತ ಸಶಸ್ತ್ರಪಡೆ ಪೊಲೀಸ್ ವ್ಯಾನು ಕಳಿಸಲ್ಪಟ್ಟಿತ್ತು. ಊಟ-ಉಪಚಾರ, ತಿಂಡಿ, ವಿಶ್ರಾಂತಿ, ನಿದ್ದೆ ಇಲ್ಲದೆ ನಿಶಾಚರರಂತೆ ರಾತ್ರೋರಾತ್ರಿ ಹಳ್ಳ-ಕೊಳ್ಳ, ಹಾಳು ದೇಗುಲ ಗುಡ್ಡ ಗವಿಗಳೇ ಇವರಿಗೆ ಆಶ್ರಯವಾಗಿವು.
ಮೊದಮೊದಲು ರೈಲ್ವೆ ಸಂಪರ್ಕ ತಪ್ಪಿಸುವ ಕಾರ್ಯಕ್ರಮ ಸ್ವಾತಂತ್ರ್ಯ ಯೋಧರದಾಗಿತ್ತು. ಕೊಡಗನೂರು, ಮಾಯಕೊಂಡ, ತೋಳ ಹುಣಸೆ, ರೈಲ್ವೆಸ್ಟೇಷನ್ ಗಳಿಗೆ ಹಟಾತ್ ಮುತ್ತಿಗೆ. ಸ್ಟೇಷನ್ ಮಾಸ್ಟರ್ ಮತ್ತು ಪೊರ್ಟರ್‍ಗಳ ಕೈಗಳಿಗೆ ಹಗ್ಗ ಬಿಗಿದು ಅಲ್ಲೇ ಅವರನ್ನು ಕೂಡಿ ಹಾಕಿ ಅಲ್ಲಿದ್ದ ತಂತಿ ಸಂಪರ್ಕ ನಾಶಪಡಿಸುವುದು, ನಂತರ ರೈಲ್ವೆ ಹಳಿಗಳ ಪಕ್ಕದಲ್ಲಿ ಇಟ್ಟಿದ್ದ ಗ್ಯಾಂಗ್‍ಮನ್ ಪೆಟ್ಟಿಗೆ ಒಡೆದು ಅದರೊಳಗೆ ಇರುತ್ತಿದ್ದ ಸಲಕರಣೆಗಳ ಸಹಾಯದಿಂದ ರೈಲ್ವೆ ಹಳಿಗಳ ನಟ್ ಬೋಲ್ಟ್ ಸಡಿಲಿಸುವುದು, ಹಳಿಗಳನ್ನು ಎತ್ತಿ ಸ್ಥಳಾಂತರಿಸುವುದು, ಜೊತೆಗೆ ಟೆಲಿಫೋನ್ ಕಂಬಗಳನ್ನು ನಾಶಮಾಡುವುದು-ಇವೇ ಮೊದಲಾದ ಕಾರ್ಯಗಳಲ್ಲಿ ಅವರು ನಿರತರಾಗಿದ್ದರು. ಇದರ ಜೊತೆಗೆ, ಅನುಕೂಲವಾದ ಕಡೆ ಹಳ್ಳಿಗರಿಗೆ ಸ್ವಾತಂತ್ರ್ಯಾಂದೋಲನದ ಬಗೆಗೆ ತಿಳಿಸಿ ಹೇಳಲಾಗುತ್ತಿದ್ದಿತು.
ಇವೆಲ್ಲಾ ಸಾಲದೆ, ವೇದಮೂರ್ತಿ ಕೆಲವರೊಂದಿಗೆ ಅಲ್ಲಲ್ಲಿಯ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಿ ಅಲ್ಲಿದ್ದ ಶಸ್ತ್ರಾಸ್ತ್ರ ವಶಪಡಿಸಿಕೊಂಡು ಬರುತ್ತಿದ್ದರು. ಈ ಕಾರ್ಯ ಸತತವಾಗಿ 4-5 ದಿನ ಹಗಲು ರಾತ್ರಿ ಜರುಗಿದರೂ ಪೊಲೀಸ್‍ರಿಂದ ಪತ್ತೆ ಹಚ್ಚಲಾಗಲಿಲ್ಲ. ಈ ಕಡೆ ನಗರದಲ್ಲಿ ಬಂಧನಗಳು ಪ್ರಾರಂಭವಾಗಿದ್ದವು. ಪುಢಾರಿ ಮುರುಗಯ್ಯನವರು, ಬಳ್ಳಾರಿ ಮುರಿಗೆಪ್ಪನವರು, ಖಾದಿ ಸಿದ್ದಪ್ಪನವರು, ಅಮರನಾಥಸ್ವಾಮಿ ಮುಂತಾದ ಅನೇಕರು ಬಂಧಿತರಾಗಿದ್ದರು. ಇಟಿಗಿ ವೇದಮೂರ್ತಿ ಎಲ್ಲೋ ಅವಿತುಕೊಂಡಿದ್ದರು. ರಾತ್ರಿ ಹನ್ನೆರಡರ ಮೇಲೆ ಆಗಿತ್ತು ಕೊಟಿಗಿ ಸಿದ್ದಲಿಂಗಪ್ಪ ಮನೆಗೆ ಬಂದು ಸೇರಿದಾಗ, ಅವರನ್ನು ಬಂಧಿಸಲು ಹೊಂಚು ಹಾಕಿ ಕೂತಿದ್ದ 15-20 ಸಶಸ್ತ್ರ ಸಿಪಾಯಿಗಳು ಏಕಾ ಏಕಿ ಮನೆಯ ಸುತ್ತಲೂ ದಾಳಿ ಮಾಡಿ ಅವರನ್ನು ಬಂಧಿಸಿ ಬಿಗಿ ಬಂದೋಬಸ್ತಿನಲ್ಲಿ ಕರೆದೊಯ್ದರು.
ದಾವಣಗೆರೆ ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪ ಕಂಡ ಜನಕ್ಕೆ ಈ ಸತ್ಯಾಗ್ರಹಿಗಳನ್ನೆಲ್ಲಾ ಮಾರಣಾಂತಿಕ (ಜೀವಾವಧಿ) ಶಿಕ್ಷೆ ಅಥವಾ ಗಲ್ಲಿಗೇರಿಸುತ್ತಾರೆಂಬ ಭಯವಿತ್ತು. ಚಿತ್ರದುರ್ಗದ ವಕೀಲರ ಸಂಘದ ವಕೀಲರಾದ ಎ.ಭೀಮಪ್ಪನಾಯಕ್, ಎಮ್.ವೀರಬಸಪ್ಪ, ಎಸ್. ವೀರಬಸಪ್ಪ, ವೆಂಕಟಾಚಲಯ್ಯ ಮೊದಲಾದವರು ಈ ಸತ್ಯಾಗ್ರಹಿಗಳ ಪರವಾಗಿ ವಕಾಲತ್ತು ವಹಿಸಿದ್ದರು. ವಿಚಾರಣಾ ಕಾಲಮಿತಿ ಮೀರಿದ್ದನ್ನು ಪ್ರತಿಭಟಿಸುತ್ತಿದ್ದ ಬಳ್ಳಾರಿ ಮರಿಗಪ್ಪನವರ ಚುಟುಕುಗಳು, ತಾವೂ ಹಾಡಿ ಇತರರಿಂದಲೂ ಹಾಡಿಸುತ್ತಿದ್ದ ಕೊಟಿಗಿಯವರ ರಾಷ್ಟ್ರಗೀತೆಗಳು ನ್ಯಾಯಾಧೀಶರಿಗೂ, ಒಮ್ಮೊಮ್ಮೆ ಜಿಲ್ಲಾಧಿಕಾರಿಗಳಿಗೂ ತಲೆಬೇನೆ ತರುತ್ತಿದ್ದವು. ಸತ್ಯಾಗ್ರಹಿಗಳಿಗೆ ಕೈಕೋಳ ತಪ್ಪಿರಲಿಲ್ಲ. 6 ತಿಂಗಳ ನಂತರ ಎಲ್ಲಾ ಸತ್ಯಾಗ್ರಹಿಗಳಿಗೂ ತಲಾ ಒಂದೊಂದು ವರ್ಷ ಕಠಿಣ ಸಜ ವಿಧಿಸಲಾಯ್ತು. ಸುಮಾರು 18 ತಿಂಗಳ ಜೈಲು ಅನುಭವವಾಯ್ತು (ವಿಚಾರಣಾ ಅವಧಿ ಸಹಿತ).
ಶ್ರೀಗುರು ಬಕ್ಕೇಶ್ವರ ಸ್ವಾಮಿಯವರ ತಪೋಭೂಮಿಯ ಈ ನೆಲದಲ್ಲಿ ನಡೆದ ಈ ಘಟನೆಗಳು ಸ್ಮರಣೀಯವಾದವುಗಳು. ಮಹಾತ್ಮ ಗಾಂಧೀಜಿ ಸಾರಿ ಸಾರಿ ಹೇಳಿದ್ದರು ‘ಸ್ವಾತಂತ್ರ್ಯವೇ ಸಂಜೀವಿನಿ’. ಈ ಸಂಜೀವಿನಿಗಾಗಿ ಹೋರಾಡಿದವರು ಸ್ವಾತಂತ್ರ್ಯ ಯೋಧರು. 42 ರ ಸ್ವಾತಂತ್ರ್ಯ ಸಂಗ್ರಾಮ ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಒಂದು ಅಧ್ಯಾಯ.
ನಮ್ಮ ಪಕ್ಕದ ಧಾರವಾಡ ಜಿಲ್ಲೆಯವರಾದ ಮೈಲಾರ ಮಹದೇವ, ಸಂಗೂರು ಕರಿಯಪ್ಪ, ಮನ್ನಂಗಿ ರಮಾನಂದ, ತಾವರೆ ಫಕೀರಪ್ಪ, ಕಡ್ಲಿ ವಿರೂಪಾಕ್ಷಪ್ಪ, ಆವಸಂಗದ ಪಂಚಾಕ್ಷರಪ್ಪ, ವೆಂಕಣ್ಣಾಚಾರ ಮುಂತಾದ ಸಾಹಸಿಗಳು ಪಂಜಾಬದ ಸಿಂಹಗಳಂತೆ ಕಾದಾಡಿದ್ದು ಮರೆಯುವಂತಿಲ್ಲ. ಚಲೇ ಜಾವ್ ಚಳುವಳಿಯಲ್ಲಿ ಭಾಗಿಗಳಾದ ಈ ವೀರ ಸಾಹಸಿಗಳ ಕೃತಿಗಳು ನವ ಪೀಳಿಗೆಯಲ್ಲಿ ರಾಷ್ಟ್ರಾಭಿಮಾನವನ್ನು ಉಕ್ಕಿಸಬಲ್ಲವು.
ಅರಮನೆ ಚಳವಳಿ
ಭಾರತವು ಬ್ರಿಟಿಷರ ಆಡಳಿತದಿಂದ ಬಿಡುಗಡೆಯಾಗಿ ಸ್ವಾತಂತ್ರ್ಯ ಹೊಂದಿತ್ತು ಆದಾಗ್ಯೂ ಮೈಸೂರು ಸಂಸ್ಥಾನದಲ್ಲಿ ಅರಸರ ಆಡಳಿತ ಮುಂದುವರಿದಿತ್ತು. ಮೈಸೂರು ಪ್ರಜೆಗಳಿಗೆ ತಾವು ಡಬ್ಬಲ್ ಗುಲಾಮಗಿರಿಯಲ್ಲಿದ್ದೇವೆ ಎಂಬ ಭಾವನೆಯಿತ್ತು. ಅರಸರನ್ನು ಇಳಿಸಿ ಸಂಪೂರ್ಣ ಜವಾಬ್ದಾರಿ ಸರ್ಕಾರ ಸ್ಥಾಪಿಸಬೇಕೆಂದು ಕಾಂಗ್ರೆಸ್ ತೀರ್ಮಾನಿಸಿತು. ಗಂಡ ಭೇರುಂಡ ಧ್ವಜ ಬದಲಾಯಿಸಿ ರಾಷ್ಟ್ರದ ತ್ರಿವರ್ಣ ಧ್ವಜ ಏರಿಸಲು ಸಂಕಲ್ಪ ತೊಟ್ಟು ಹೋರಾಟಕ್ಕೆ ಕರೆ ಕೊಟ್ಟ ಕಾಂಗ್ರೆಸ್ ನಾಯಕರಾದ ಹೆಚ್.ಸಿ. ದಾಸಪ್ಪ, ಕೆಂಗಲ್ ಹನುಮಂತಯ್ಯ, ಟಿ,ಸುಬ್ರಮಣ್ಯ, ಕೆ.ಟಿ.ಭಾಷ್ಯಂ ಐಯಂಗಾರ್, ಕೆ.ಸಿ.ರೆಡ್ಡಿ, ಕೆ.ಪಟ್ಟಾಭಿರಾಮನ್ ಮುಂತಾದವರು ದೇಶದ್ಯಂತ ಸಂಚರಿಸಿದರು. ಇವರ ಪ್ರಚಾರದಿಂದ ಜನ ಜಾಗೃತರಾದರು.
ಮೈಸೂರು ಸಂಸ್ಥಾನದ ಅನೇಕ ಭಾಗಗಳಲ್ಲಿ ತಮಿಳು, ಆಂಧ್ರ, ಕೇರಳ, ಉತ್ತರ’ ಕರ್ನಾಟಕದವರೂ ಜೀವನ ಮಾಡುತ್ತಿದ್ದರು. 47ರ ಮೈಸೂರು ಚಳುವಳಿಗೆ ಯಾರ ಜಾತಿ ಭಾಷೆ ಯಾವುದೂ ಅಡ್ಡಿ ಬರಲಿಲ್ಲ. ಎಲ್ಲರೂ ಸಹೃದಯರಾಗಿ ಒಗ್ಗಟ್ಟಾಗಿ ದುಡಿದರು. ನಾಲ್ಕೂ ದಿಕ್ಕಿನಿಂದ ಗಡಿ ಹೊರಗಿದ್ದವರೂ ಗಡಿಯೊಳಗೆ ಪ್ರವೇಶಿಸಿದರು. ಹೋರಾಟಗಾರರ ಪ್ರಹಾರ ಎಲ್ಲೆಲ್ಲೂ ಹಬ್ಬಿತು. ಗಡಿಕಾವಲಲ್ಲಿದ್ದ ಮಿಲಿಟ್ರಿ ಪಡೆ ತಡೆಗಟ್ಟಲು ವಿಫಲಗೊಂಡಿತು. ಸಹಸ್ರಾರು ಸತ್ಯಾಗ್ರಹಿಗಳು ಮೈಸೂರು ಅರಮನೆ ಮುತ್ತಿದರು. ಅರಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು. ಇದರಲ್ಲಿ ರಾಮಸ್ವಾಮಿ ಗುಂಡಿಗೆ ಬಲಿಯಾದ ವೀರ ಬಾಲಕ.
ಸರ್ಕಾರದ ಪ್ರತಿಬಂಧಕ ಆಜ್ಞೆಗಳಿಗೆ ಮಿತಿ ಇರಲಿಲ್ಲ. ಹೊರಗಿನಿಂದ ಆಗಮಿಸಿದ ಸತ್ಯಾಗ್ರಹಿಗಳಿಗೆ ಅನ್ನ ಆಹಾರ ಸಿಗಬಾರದೆಂದು ನಗರದ ಎಲ್ಲಾ ಹೋಟೆಲ್‍ಗಳನ್ನು ಮುಚ್ಚಿಸಲಾಗಿತ್ತು. ಸಂಚಾರಕ್ಕೆ ಅಡೆ-ತಡೆ ಹಾಕಲಾಗಿತ್ತಲ್ಲದೆ ಪತ್ರಿಕೆಗಳ ಮೇಲೆ ಬಲವಾದ ಕಡಿವಾಣ ಹಾಕಲಾಗಿತ್ತು.
ಅಪ್ಪಿ-ತಪ್ಪಿ ಬಾತ್ಮಿ ಸಂಗ್ರಹಿಸುವ ಪತ್ರಿಕಾ ಬಾತ್ಮಿದಾರರು ಸಿಕ್ಕರೆ ಹೊಡೆತಗಳು ತಪ್ಪಿದಲ್ಲ. ಉತ್ತರ ಕರ್ನಾಟಕದ ರಾಣೆಬೆನ್ನೂರು, ಹಾವೇರಿ, ಹಿರೇಕೆರೂರು ಕಡೆಗಳಿಂದಲೂ ಸತ್ಯಾಗ್ರಹಿಗಳು ಹೋರಾಟಕ್ಕೆ ಧಾವಿಸಿ ಬಂದು ನಿಂತರು. ಎಲ್ಲಾ ಕಡೆ ಬಿರುಸಿನ ಸತ್ಯಾಗ್ರಹ ಸಾಗಿತು. ಚಿತ್ರದುರ್ಗ ಜಿಲ್ಲೆಗೂ ಅದರ ಬಿಸಿ ತಗುಲಿತು.
ದಾವಣಗೆರೆ ಮೌನವಾಗಿತ್ತು. ಯುವ ಪೀಳಿಗೆಗೆ ಒಬ್ಬ ನೇತಾರ ಬೇಕಿತ್ತು. ‘ಸತ್ಯಾಗ್ರಹ ಕಹಳೆ’ ಹಸ್ತಪ್ರತಿಗಳನ್ನು ಶ್ರೀಕೊಟಿಗಿ ಸಿದ್ದಲಿಂಗಪ್ಪ ರಾತ್ರೋರಾತ್ರಿ ಅಚ್ಚುಹಾಕಿಸಿದರು; ನಗರದಲ್ಲಿ ಹಂಚಿಸಿದರು. ಆ ಹಸ್ತ ಪ್ರತಿಯಲ್ಲಿ ತಿಳಿಸಿದ್ದಂತೆ ಪ್ರಾತಃಕಾಲ 7 ಕ್ಕೆ ಸರಿಯಾಗಿ ಚೌಕೀಪೇಟೆಯಲ್ಲಿರುವ ಶ್ರೀಗುರು ಬಕ್ಕೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಪ್ರಸಾದದೊಂದಿಗೆ ದೇವಾಲಯದ ಜಾಗಟೆಯಲ್ಲಿ ಸ್ವಾತಂತ್ರ್ಯ ಕಹಳೆ ಊದಿ ದೇವಾಲಯದಿಂದ ನ್ಯಾಯಾಲಯಕ್ಕೆ ಹೋಗಲು ಹೊರಬಿದ್ದರು. ಸಿದ್ದಲಿಂಗಪ್ಪನವರ ರಾಷ್ಟ್ರಗೀತೆ. ಜೈ ಘೋಷಗಳಿಗೆ ಧ್ವನಿಗೂಡಿಸಿದ ನೆಗಳೂರು ಗಂಗಮ್ಮ ಮತ್ತು ಯರಗುಂಟಿ ಸುಶೀಲಮ್ಮ ಇವರನ್ನೊಳಗೊಂಡ ಸತ್ಯಾಗ್ರಹಿಗಳು ಚೌಕಿಪೇಟೆ ದಾಟಿ ಚಾಮರಾಜಪೇಟೆ ಸಮೀಪಿಸುತ್ತಿದ್ದಂತೆ ಸಹಸ್ರಾರು ಜನಸಂದಣಿ ಕೋರ್ಟು ಆವರಣ ಪ್ರವೇಶಿಸುವಾಗ ಹತ್ತು ಸಹಸ್ರ ಜನ ಸೇರಿದ್ದರು.
ಸಬ್ ಇನ್‍ಸ್ಪೆಕ್ಟರ್ ಹನುಮಂತಪ್ಪ ತಮ್ಮ ಸಿಬ್ಬಂದಿ ಸಹಿತ ಸಿದ್ದವಾಗಿದ್ದರು, ಸತ್ಯಾಗ್ರಹಿಗಳಿಂದ ಧ್ವಜ ವಂದನೆ, ಜೈ ಘೋಷಣೆ, ಭಾಷಣ ಪ್ರಾರಂಭವಾಗುತ್ತಲೇ ಸಿದ್ದಲಿಂಗಪ್ಪನವರಿಗೆ ಬೇಡಿ ತೊಡಿಸಿ ಅವರ ತಂಡದಲ್ಲಿದ್ದ ಬೆಳ್ಳೂಡಿ ಷಣ್ಮಖಪ್ಪ, ಶ್ರೀ ಮಂಧರ, ಶರಭ ಲಿಂಗಪ್ಪ ಮುಂತಾದವರನ್ನು ಬಂಧಿಸಿದರು. ಬಂಧಿತರಾದ ಸತ್ಯಾಗ್ರಹಿಗಳು ಚಿತ್ರದುರ್ಗ ಸೆರೆಮನೆ ಸೇರಿದಾಗ ಜೇಲಿನಲ್ಲಿ ಮುಂಚಿತವಾಗಿಯೇ ಗಾಂಜಿ ವೀರಪ್ಪ, ಕೆ.ಟಿ.ಜಂಬಣ್ಣ, ಕಾಸಲ ಶ್ರೀನಿವಾಸ ಶೆಟ್ಟರು, ಡಾಕ್ಟರ್ ಪ್ರಹ್ಲಾದ್‍ರಾಯರೇ ಮೊದಲಾದರು ಸ್ಥಾನಬದ್ಧತೆಯಲ್ಲಿದ್ದರು. ನೂರಾರು ರಾಜಕೀಯ ಬಂಧಿಗಳಿದ್ದ ಚಿತ್ರದುರ್ಗ ಜೈಲಿನಲ್ಲಿ ರಾಷ್ಟ್ರೀಯ ಮನರಂಜನೆಗೋಸ್ಕರ, ಗೋಲಿಬಾರ್, ಎಂಬ ರಾಷ್ಟ್ರ ಪ್ರೇಮಿ ವೀರ ರಸ ಪ್ರಧಾನ ಒಂದು ಏಕಾಂಕ ನಾಟಕ ರಚಿಸಿದ ಕೊಟಗಿಯರು ರಾಜನಹಳ್ಳಿ ಕಾಂತರಾಜ ಶೆಟ್ಟಿ, ಎನ್.ಆರ್ ಗುಂಡಪ್ಪನವರ ಮಗ ಶ್ರೀ ಶಿವಕುಮಾರ ಮುಂತಾದವರು ಅದರಲ್ಲಿ ಪಾತ್ರಧಾರಿಗಳಾಗಿದ್ದರು. ದಾವಣಗೆರೆ ನಗರದ ನಾಯಕರೂ, ಚಿತ್ರದುರ್ಗದ ನಾಯಕರೂ, ಹಿರಿಯರೂ, ಜಗಳೂರು ಮುಂತಾದ ಕಡೆಗಳಿಂದ ಬಂದಿದ್ದ ಸತ್ಯಾಗ್ರಹಿಗಳೂ ಈ ಪ್ರದರ್ಶನ ಕಂಡು ಬೆರಗಾದರು. ಕಲಾ ಪ್ರತಿಭೆಯ ಬಗೆಗೆ ಎಸ್ ವೀರಬಸಪ್ಪ ನಾಯಕರೂ ಎ. ಭೀಮಪ್ಪನವರೂ ಮಾತನಾಡಿದರು.
ಚಿತ್ರದುರ್ಗ ಸೆರೆಮನೆಯಲ್ಲಿ ಸ್ಥಳ ಸಾಲದಿದುದ್ದರಿಂದ ಕೆಲವರೊಂದಿಗೆ ಸಿದ್ದಲಿಂಗಪ್ಪನವರನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು. ಈ ಸತ್ಯಾಗ್ರಹ ತಂಡಕ್ಕೆ ಕೇವಲ 6 ತಿಂಗಳ ಸಜಾ ಲಭಿಸಿತ್ತು. ಇಡೀ ಸಂಸ್ಥಾನದಾದ್ಯಂತ ಅವ್ಯಾಹತವಾಗಿ ಸಾಗಿದ್ದ ಸತ್ಯಾಗ್ರಹವನ್ನು ಕಂಡ ಸರ್ಕಾರಕ್ಕೆ ದಿಕ್ಕುದೆಸೆ ಕಾಣದಂತಾಯಿತು. ಕೇವಲ 5 ವಾರಗಳಲ್ಲಿ ಸರ್ ಆರ್ಕಾಟಕ ಸರ್ಕಾರ ಕುಸಿದು ಬಿತ್ತು. ಸಂಪೂರ್ಣ ಜವಾಬ್ದಾರಿ ಸರ್ಕಾರ ಸ್ಥಾಪಿಸಲ್ಪಟ್ಟಿತ್ತು. ಇದು ಭಾರತ ಒಕ್ಕೂಟದೊಂದಿಗೆ ಸೇರಲು ನಾಂದಿಯಾಯಿತು.
ಹೋರಾಟಕ್ಕೆ ಹೆಸರಾದ ಜಿಲ್ಲೆ ಚಿತ್ರದುರ್ಗ. ಈ ಜಿಲ್ಲೆಯ ಸ್ವಾತಂತ್ಯ್ರ ಹೋರಾಟಗಾರರು ಕೂಡ ಕಡೆ ತನಕ ಹೋರಾಡಿದ ಕನ್ನಡ ಹಡುಗಲಿಗಳು. 1937-1939-1942ರಲ್ಲಿ ಜೈಲಿನಲ್ಲಿದ್ದ ಹಳೆ ಸಂಪ್ರದಾಯಗಳು ಹೋಗಿ ನವೀಕರಿಸಿದ ಜೈಲು ಸುಧಾರಣೆಗಳು ಜಾರಿಯಾದವು. 1937-39ರಲ್ಲಿ ಮಣ್ಣಿನ ಮಗೆಯಲ್ಲಿ ನೀರು, ಮಣ್ಣಿನ ಮುಚ್ಚಳದಲ್ಲಿ ಊಟ. ಅದೇ 1942-47ರಲ್ಲಿ ಸ್ಟೀಲ್ ತಟ್ಟೆ, ಚೆಂಬು ಲೋಟಗಳು, ಮೊದಲು ಕೊಡುತ್ತಿದ್ದ ಗೋಣೀ ತಾಟು ಬದಲು ಜಾಳದ ಕಂಬಳಿ ಸುಧಾರಣೆಗೆ ಬಂದವು. ತೊಡುವ ಕೈದಿಗಳ ಬಟ್ಟೆ ಊಟದ ಸಾಮಾಗ್ರಿ ಎಲ್ಲಾ ಸುಧಾರಣೆಯಾಗಿದ್ದವು.
ಡೆಟಿನ್ಯೂ (ಸ್ಥಾನ ಭದ್ರತಾ) ಖೈದಿಗಳು, ಸಾದಾ ಶಿಕ್ಷಾ ಖೈದಿಗಳು, ಕಠಿಣಾ ಶಿಕ್ಷೆಗಳು ಈ ಮೂರು ಬಗೆಯ ಖೈದಿಗಳಿಗೂ ಬೇರೆ ಖೈದಿಗಳಿಗೂ ಅಂದರೆ ಸಾಮಾನ್ಯ ಖೈದಿಗಳಿಗೂ, ಇತರೆ ಕ್ರಿಮಿನಲ್ ಖೈದಿಗಳಿಗೂ ಮೊದಮೊದಲು ವ್ಯತ್ಯಾಸವೇ ಕಾಣುತ್ತಿರಲಿಲ್ಲ. 42ರ ನಂತರ ತುಂಬಾ ಸುಧಾರಣೆಗಳು ಜಾರಿಗೆ ಬಂದಿದ್ದವು. ಈ ಸುಧಾರಣೆಗಾಗಿ ಟಿ.ಸಿದ್ದಲಿಂಗಯ್ಯ, ಹೆಚ್.ಸಿದ್ದಯ್ಯ, ಕೆ.ಹನುಮಂತಯ್ಯ, ಮುಂತಾದ ರಾಜಕೀಯ ಮುಖಂಡರು ತುಂಬಾ ಶ್ರಮವಹಿಸಿ ದುಡಿದಿದ್ದರ ಪರಿಣಾಮಗಳಿಂದ ಜೈಲು ಜೀವನ ಸುಧಾರಿಸಲ್ಪಟ್ಟಿತು.
ರಚನೆ-ಜೆ. ಮಹಾಲಿಂಗಪ್ಪ
ಸಲಹೆ,ಸಹಕಾರ-ಹನುಮಂತಪ್ಪ(ಮಾಜಿ), ತುರುವನೂರು
