ಕೊರಟಗೆರೆ
ತಿಮ್ಮಲಾಪುರ ಅಭಯಾರಣ್ಯ ಸಮೀಪದ ಅನುಪಲು ಗ್ರಾಮದ ರೈತನ ರೊಪ್ಪದ ಮೇಲೆ ಚಿರತೆಗಳ ಹಿಂಡು ರಾತ್ರೋರಾತ್ರಿ ದಾಳಿ ನಡೆಸಿರುವ ಪರಿಣಾಮ ರೈತನ ಜೀವನಕ್ಕೆ ಆಧಾರವಾಗಿದ್ದ 1 ಲಕ್ಷ ರೂ. ಮೌಲ್ಯದ 12 ಮೇಕೆಗಳು ಮೃತಪಟ್ಟಿರುವ ಘಟನೆ ಶನಿವಾರ ತಡವಾಗಿ ಬೆಳಕಿಗೆ ಬಂದಿದೆ.
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಅನುಪಲು ಗ್ರಾಮದ ಕರಿರಂಗಯ್ಯನಿಗೆ ಸೇರಿದ ಮೇಕೆ ರೊಪ್ಪದ ಮೇಲೆ ಶುಕ್ರವಾರ ಮಧ್ಯರಾತ್ರಿ ಚಿರತೆಗಳ ಹಿಂಡು ದಾಳಿ ನಡೆಸಿ 10 ಮೇಕೆಗಳನ್ನು ಸ್ಥಳದಲ್ಲಿಯೇ ಸಾಯಿಸಿವೆ. ಇನ್ನುಳಿದ ಎರಡು ಮೇಕೆಗಳನ್ನು ಕಾಡಿಗೆ ಎಳೆದುಕೊಂಡು ಹೋಗಿವೆ.
ಅನುಪಲು ಗ್ರಾಮದ ಸುತ್ತಮುತ್ತಲು ತಿಮ್ಮಾಲಪುರ ಅಭಯಾರಣ್ಯ ಆವರಿಸಿದೆ. ಜನ ಮತ್ತು ಜಾನುವಾರುಗಳಿಗೆ ಸೌಲಭ್ಯದ ಜೊತೆ ಭದ್ರತೆಯು ಸಹ ಮರೀಚಿಕೆಯಾಗಿ ಪ್ರತಿನಿತ್ಯ ಭಯದ ವಾತಾವರಣದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪುಟಾಣಿ ಮಕ್ಕಳು ಕಾಡಿನ ಅಂಚಿನಲ್ಲಿಯೆ 3 ಕಿಮೀ ದೂರದ ಶಾಲೆಗೆ ತೆರೆಳಬೇಕಾಗಿದೆ.
ರೈತನ 12 ಮೇಕೆಗಳ ಚಿರತೆಗಳು ಮೇಲೆ ದಾಳಿ ಮಾಡಿದ್ದು, ಚಿರತೆಗಳ ಹಾವಳಿಯನ್ನು ತಪ್ಪಿಸುವಂತೆ ಅರಣ್ಯ ಇಲಾಖೆ ವಾಹನಕ್ಕೆ ಸ್ಥಳೀಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಸಮಸ್ಯೆ ಬಗೆಹರಿಯದೆ ಇದ್ದಾಗ ಘಟನಾ ಸ್ಥಳಕ್ಕೆ ಪಿಎಸೈ ಮುತ್ತುರಾಜು ಭೇಟಿ ನೀಡಿ ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ.
ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ನಾಗರಾಜು, ಪಿಎಸೈ ಮುತ್ತುರಾಜು, ಅರಣ್ಯ ರಕ್ಷಕ ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲ್ಲೇಕಾವು ಪಶು ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅರಣ್ಯ ಇಲಾಖೆ ಸರಕಾರದಿಂದ ಬರುವ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
