ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ : ಅಭ್ಯರ್ಥಿಗಳಿಗೆ ತಹಶೀಲ್ದಾರ್ ಕಟ್ಟುನಿಟ್ಟಿನ ಸೂಚನೆ

ಚಳ್ಳಕೆರೆ

           ನಗರಸಭೆ ಚುನಾವಣೆಗೆ ಕೇವಲ 8 ದಿನಗಳು ಮಾತ್ರ ಬಾಕಿ ಇದ್ದು, ಈಗಾಗಲೇ ಎಲ್ಲಾ ವಾರ್ಡ್‍ಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕಣದಲ್ಲಿ ಉಳಿದಿರುವ 102 ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಶಾಂತಿಯುತ ಚುನಾವಣೆಗೆ ಸಹಕಾರ ನೀಡಬೇಕು. ಯಾವುದೇ ಹಂತದಲ್ಲೂ ಕಾನುನ್ನನ್ನು ಉಲ್ಲಂಘಿಸಿದಂತೆ ಜಾಗೃತೆ ವಹಿಸಬೇಕೆಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.

            ಅವರು, ಗುರುವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ನೂತನ ಸಭಾಂಗಣದಲ್ಲಿ ಚುನಾವಣಾಧಿಕಾರಿಗಳು, ಚುನಾವಣಾ ವೆಚ್ಚ ನಿರೀಕ್ಷಕರು ಹಾಗೂ ಅಭ್ಯರ್ಥಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ನಗರಸಭೆಯ 31 ವಾರ್ಡ್‍ಗಳಿಂದ ಒಟ್ಟು 102 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಇದ್ದೀರಿ, ಪ್ರತಿಯೊಬ್ಬ ಅಭ್ಯರ್ಥಿಯೂ ಸಹ ತನ್ನದೇಯಾದ ಕಾರ್ಯತಂತ್ರದೊಂದಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಯತ್ನ ಪಡುತ್ತಾನೆ. ನಾನು ಸೇರಿದಂತೆ ಎಲ್ಲಾ ಚುನಾವಣಾಧಿಕಾರಿಗಳು ಸಹ ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಸಿದ್ದಿವಿದ್ದೇವೆ. ಆದರೆ, ಚುನಾವಣಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕಾನೂನು ಕ್ರಮವನ್ನು ಜರುಗಿಸಲಾಗುವುದು. ಚುನಾವಣಾ ವಿಷಯದಲ್ಲಿ ಎಲ್ಲರಿಗೂ ಮುಕ್ತವಾದ ಅವಕಾಶವಿದ್ದು, ಶಾಂತಿಯುತ ಚುನಾವಣೆ ನಡೆಸುವ ತಾಲ್ಲೂಕು ಆಡಳಿತಕ್ಕೆ ಎಲ್ಲಾ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ತಮ್ಮ ಸಹಕಾರ ನೀಡಬೇಕು. ಎಲ್ಲಾ ಅಭ್ಯರ್ಥಿಗಳು ಸ್ನೇಹ ಪ್ರೀತಿ ವಿಶ್ವಾಸದಿಂದ ಚುನಾವಣೆ ಎದುರಿಸಬೇಕು ಎಂದರು.

            ಈಗಾಗಲೇ ಜಿಲ್ಲಾಧಿಕಾರಿಗಳ ಸೂಚನೆಯಂತೆ ವಿವಿಧ ವಾರ್ಡ್‍ಗಳ ಅಭ್ಯರ್ಥಿಗಳ ವೆಚ್ಚದ ಪರಿಶೀಲನೆ ಬಗ್ಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಾಮಪತ್ರ ಸಲ್ಲಿಸಿದ ದಿನಾಂಕದಿಂದಲೇ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಲೆಕ್ಕವನ್ನು ನೀಡಬೇಕು. ಒಬ್ಬ ಅಭ್ಯರ್ಥಿ ಎರಡು ಲಕ್ಷ ಮಾತ್ರ ವೆಚ್ಚ ಮಾಡಲು ಅವಕಾಶವಿದೆ. ಲೆಕ್ಕ ಪತ್ರವನ್ನು ಅತ್ಯಂತ ಪಾರದರ್ಶಕವಾಗಿ ಸಂಬಂಧಪಟ್ಟ ಅಧಿಕಾರಿಗೆ ನೀಡಬೇಕು. ಚುನಾವಣಾ ಮತದಾನದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡಲು ಪ್ರಯತ್ನಿಸಬಾರದು. ಕಾರಣ ಇಂತಹ ಆಮಿಷಗಳನ್ನು ತಡೆಯಲು ವಿಶೇಷವಾದ ತಂಡವನ್ನು ರಚಿಸಿದ್ದು, ತಂಡ ಹಗಲು ರಾತ್ರಿ ಎನ್ನದೆ ನಗರದಲ್ಲಿ ಗಸ್ತು ತಿರುಗುತ್ತಿದ್ದು, ಅಕ್ರಮಗಳು ನಡೆದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

           ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಈಶ್ವರಪ್ರಸಾದ್, ರಾಜಣ್ಣ, ಭಗವಂತಕಟ್ಟಿಮನಿ, ತುಲಸಿಕುಮಾರ್, ಎಆರ್‍ಒಗಳಾದ ಶ್ರೀನಿವಾಸ್‍ಮೂರ್ತಿ, ಜಿ.ಎಚ್.ಶಶಿಕುಮಾರ್, ಎಚ್.ಸತ್ಯಪ್ಪ, ಎಂ.ಟಿ.ಪ್ರಕಾಶ್, ಕಂದಾಯಾಧಿಕಾರಿ ಶರಣಬಸಪ್ಪ, ಗ್ರಾಮ ಲೆಕ್ಕಿಗ ರಾಜೇಶ್, ಚುನಾವಣಾ ಶಾಖೆಯ ಪ್ರಕಾಶ್, ವರುಣ್, ಶ್ರೀಧರ್, ಓಬಳೇಶ್ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link