ಮಧುಗಿರಿ:
ಹಾಲು ಉತ್ಪಾದಕರ ಸಂಘದ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಡಿ ಸಿ ಸಿ ಬ್ಯಾಂಕ್ ವತಿಯಿಂದ ಮತದಾರರಿಗೆ ಸಾಲ ನೀಡುವ ಆಮಿಷ ಒಡ್ಡಲಾಗುತ್ತಿದೆ ಎಂದು ತುಮುಲ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಬಾರದು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗುವುದು. ನಾನು ಡಿಸಿಸಿ ಬ್ಯಾಂಕ್‍ನ ನಿರ್ದೇಶಕನಾಗಿದ್ದು ರೈತರಿಗೆ ಸಾಲ ನೀಡುವುದಕ್ಕೆ ನನ್ನ ಅಭ್ಯಂತರವಿಲ್ಲ, ಚುನಾವಣೆ ಮುಗಿದ ಬಳಿಕ ನೀಡಲಿ. ಈಗಾಗಲೇ ರೈತರಿಗೆ ನೀಡಿರುವ ಸಾಲ ಮನ್ನಾ ಆಗಿರುವ ಬಗ್ಗೆ ಇನ್ನೂ ಸರಿಯಾದ ಮಾಹಿತಿಯೇ ದೊರೆತಿಲ್ಲ ಎಂದರು.
ಇದರ ಜೊತೆ ಈಗ ಮತ್ತೊಮ್ಮೆ ಸಾಲ ನೀಡುತ್ತೇವೆಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಪ್ರಸ್ತುತ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ತಿರಸ್ಕøತಗೊಂಡಿದೆ. ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯನವರನ್ನು ನನ್ನ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡುತ್ತೇನೆ. ಇತರೆ ಪಕ್ಷಗಳ ಮತದಾರರಿಗೂ ಮನವಿ ಮಾಡಿದ್ದು, ತುಮುಲ್ ಅಧ್ಯಕ್ಷನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಚುನಾವಣೆಯ ವಿಚಾರವಾಗಿ ನನ್ನ ರಾಜಕೀಯ ಗುರುಗಳಾದ ಮಾಜಿ ಶಾಸಕ ಕೆ.ಎನ್.ರಾಜಣ್ಣನವರನ್ನು ಭೇಟಿ ಮಾಡಿದ್ದೆ. ಅವರ ಒಪ್ಪಿಗೆಯ ನಂತರವೆ ನನ್ನ ಸ್ಪರ್ಧೆ ಖಚಿತ ಮಾಡಿಕೊಂಡಿದ್ದೇನೆ. ನಮ್ಮಿಬ್ಬರ ನಡುವೆ ಕೆಲವರು ವಿಷ ಬೀಜ ಬಿತ್ತಿ ದೂರ ಮಾಡಲು ಯತ್ನಿಸುತ್ತಿದ್ದಾರೆ. ಮುಂದೊಂದು ದಿನ ಇದಕ್ಕೆಲ್ಲಾ ಉತ್ತರ ಸಿಗಲಿದೆ. ಪಕ್ಷಾತೀತವಾಗಿ ಮುಖಂಡರು ನನ್ನ ಗೆಲುವಿಗೆ ಶ್ರಮಿಸುತ್ತಿದ್ದು ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ