ಚೇಳೂರು :
ಚೇಳೂರಿನ ಕೆಲವು ಕೋಳಿ ಅಂಗಡಿಯವರು ಕೋಳಿ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲಿ ಹಾಕುತ್ತಿದ್ದಾರೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ಕಂಡೂಕಾಣದಂತಿದ್ದಾರೆ. ಇವರು ಗ್ರಾಮದ ಸ್ವಚ್ಚತೆ ಬಗ್ಗೆ ಇನ್ನೆಷ್ಟು ಗಮನಹರಿಸುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಗ್ರಾಮಸ್ಥರು ಟೀಕಿಸುತ್ತಿದ್ದಾರೆ.
ಗ್ರಾಮದ ಸಿರಾ ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿ ಪ್ರತಿನಿತ್ಯ ರಾಶಿಗಟ್ಟಲೆ ಕೋಳಿ ತ್ಯಾಜ್ಯ ಬೀಳುತ್ತಿದೆ. ದುರ್ವಾಸನೆ, ಗಾಳಿಗೆ ಹಾರಾಡುವ ಕೋಳಿ ಪುಕ್ಕದಿಂದ ಪಾದಚಾರಿಗಳಿಗೆ, ದ್ವಿಚಕ್ರ, ತ್ರಿಚಕ್ರ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ತ್ಯಾಜ್ಯದ ಮಾಂಸ ತಿನ್ನಲು ನಾಯಿಗಳ ಹಿಂಡು ಸೇರಿ ಇಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತವೆ. ನಾಯಿಗಳು ಕಚ್ಚಾಡುತ್ತಾ ಜನರಲ್ಲಿ ಭೀತಿ ಉಂಟುಮಾಡುತ್ತವೆ. ಇಲ್ಲಿ ಕೊಳೆತ ತ್ಯಾಜ್ಯದಿಂದ ಸಾಂಕ್ರಮಿಕ ರೋಗಗಳು ಹರಡುವ ಭಯ ಜನರಲ್ಲಿದೆ.
ಇಂತಹ ಕೆಟ್ಟ ವಾತಾವರಣದಿಂದ ಈ ರಸ್ತೆಯನ್ನು ಮುಕ್ತಗೊಳಿಸಿ, ಸಾರ್ವಜನಿಕರು ಸುರಕ್ಷಿತವಾಗಿ ತಿರುಗಾಡಲು ಅನುಕೂಲ ಮಾಡಿಕೊಡಬೇಕು. ಈ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಂಬಂಧಿಸಿದ ಅಧಿಕಾರಿಗಳು ಕೋಳಿ ತ್ಯಾಜ್ಯ ಹಾಕುವುದನ್ನು ತಡೆಯಬೇಕು ಹಾಗೂ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಂಡು ಗ್ರಾಮದ ಸ್ವಚ್ಚತೆ ಹಾಗೂ ಆರೋಗ್ಯ ಕಾಪಾಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ