ದಾವಣಗೆರೆ:
ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಬೀದಿ ಬೆಳಕಿನಲ್ಲಿ ಓದಿ ಇಡೀ ಜಗತ್ತಿಗೆ ಬೆಳಕಾದ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಭಾರತ ದೇಶಕಂಡ ಆದರ್ಶ ಇಂಜಿನಿಯರ್ ಅವರ ದೇಶಸೇವೆ ಅನನ್ಯ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಿ. ಬಸವರಾಜ್ ಪ್ರಶಂಸಿದರು.
ನಗರದ ಎಂ.ಸಿ.ಸಿ ‘ಎ’ ಬ್ಲಾಕ್‍ನಲ್ಲಿರುವ ಅವರ ಗೃಹ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಸರ್.ಎಂ.ವಿ. ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‍ವರ ಆಸ್ಥಾನದಲ್ಲಿ ದಿವಾನರಾಗಿ ಕರ್ನಾಟಕ ರಾಜ್ಯ ಮತ್ತು ದೇಶಕ್ಕೆ ಅಪಾರವಾದ ಕೊಡುಗೆಯನ್ನು ಸರ್ ಎಂ.ವಿ.ರವರು ನೀಡಿದ್ದು ರಾಜ್ಯ ಅಭುತಪೂರ್ವ ಅಭಿವೃದ್ಧಿಯನ್ನು ಹೊಂದಿತು ಎಂದು ಸ್ಮರಿಸಿದರು.
ಸರ್.ಎಂ.ವಿ.ರವರು 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‍ನ್ನು ಸ್ಥಾಪಿಸಿದರು, ಕೃಷ್ಣರಾಜ ಸಾಗರ ಆಣೆಕಟ್ಟು ನಿರ್ಮಾಣ, ಹೆಚ್.ಎ.ಎಲ್. ವಿಮಾನ ಕಾರ್ಖಾನೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸರ್ಕಾರಿ ಸಾಬೂನ್ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ, ಮೈಸೂರು ಸಕ್ಕರೆ ಕಾರ್ಖಾನೆ, ಬೆಂಗಳೂರಿನ ಸೆಂಚುರಿ ಕ್ಲಬ್ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ನೀರಾವರಿ, ವಿದ್ಯುತ್ ಸೇರಿದಂತೆ ಹಲವು ಯೋಜನೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಅತ್ಯಂತ ಶಿಸ್ತು, ಸಮಯ ಪ್ರಜ್ಞೆ ಮತ್ತು ಪ್ರಮಾಣಿಕತೆ ಹೊಂದಿದ್ದ ಅವರ ಆಡಳಿತ ಇಂದಿಗೂ ಮಾದರಿಯಾಗಿದೆ. ಇಂದಿನ ಇಂಜಿನಿಯರ್‍ಗಳು ಅವರ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಶ್ರೇಷ್ಠ ಇಂಜಿನಿಯರ್‍ಗಳಾಗಿ ಸರ್ಕಾರದ ಸೇವೆ ಸಲ್ಲಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕೆ.ಜಿ. ರಹಮ್ಮತ್ತುಲ್ಲಾ, ಆಶ್ರಪ್ ಅಲಿ, ಲಿಯಾಖತ್ ಅಲಿ, ಹರೀಶ್, ಡಿ. ಶಿವಕುಮಾರ್, ಭೀಮೇಶ್, ರಮೇಶ್, ಖಾಜಿ ಕಲೀಲ್, ಟಿ. ಶಿವಕುಮಾರ್, ಫಾರೂಕ್ ಸೇರಿದಂತೆ ಇತರರು ಹಾಜರಿದ್ದರು.