ಜಗಳೂರು-ಹೊನ್ನಾಳಿಯಲ್ಲಿ ಅರಳಿದ ಕಮಲ: ಚನ್ನಗಿರಿ ಅತಂತ್ರ, ಜೆಡಿಎಸ್ ನಿರ್ಣಾಯಕ

ದಾವಣಗೆರೆ :

      ಕಳೆದ ಶನಿವಾರ ನಡೆದ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಗಳೂರು ಮತ್ತು ಹೊನ್ನಾಳಿ ಪಟ್ಟಣ ಪಂಚಾಯ್ತಿಗಳಲ್ಲಿ ಕಮಲ ಅರಳಿದ್ದರೆ, ಚನ್ನಗಿರಿ ಪುರಸಭೆ ಅತಂತ್ರವಾಗಿದೆ.

      ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಕಳೆದ ಶನಿವಾರ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯಿತಿ, ಹೊನ್ನಾಳಿ ಪಟ್ಟಣ ಪಂಚಾಯಿತಿ ಹಾಗೂ ಚನ್ನಗಿರಿ ಪುರಸಭೆಗೆ ಮತದಾನ ನಡೆದಿತ್ತು, ಈ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜಗಳೂರು ಮತ್ತು ಹೊನ್ನಾಳಿಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿ ಹೊರಹೊಮ್ಮಿದ್ದರೆ, ಚನ್ನಗಿರಿ ಪುರಸಭೆಗೆ ಅತಂತ್ರವಾಗಿದ್ದು, ಇಲ್ಲಿ 3 ಸ್ಥಾನಗಳಲ್ಲಿ ಜಯಗಳಿಸಿರುವ ಜೆಡಿಎಸ್ ನಿರ್ಣಾಯಕವಾಗಿದೆ.

      ಬರದನಾಡು ಜಗಳೂರು ಪಟ್ಟಣ ಪಂಚಾಯ್ತಿಯ 18 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 11 ಸ್ಥಾನಗಳನ್ನು ಪಡೆದು, ಬಹುಮತ ಪಡೆದಿದ್ದರೆ, ಕಾಂಗ್ರೆಸ್ ಪಕ್ಷ 5 ಸ್ಥಾನ ಪಡೆದು ತೀವ್ರ ಮುಖಭಂಗಕ್ಕೆ ಒಳಗಾಗಿದ್ದು, ಜೆಡಿಎಸ್ 2 ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ.

      ಪ್ರತಿಷ್ಠೆಯ ಕಣವಾಗಿದ್ದ ಹೊನ್ನಾಳಿ ಪಟ್ಟಣ ಪಂಚಾಯ್ತಿಯ 18 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 10 ಸ್ಥಾನಗಳನ್ನು ಪಡೆಯುವ ಮೂಲಕ ಆಡಳಿತ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್ ಪಕ್ಷ ಕೇವಲ ಐದು ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದರೆ, ಇಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಜಯಭೇರಿ ಬಾರಿಸಿದ್ದಾರೆ.

      ಅಡಿಕೆ ನಾಡು ಚನ್ನಗಿರಿ ಪುರಸಭೆಯ 23 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಹಾಗೂ ಕಾಂಗ್ರೆಸ್ ತಲಾ 10 ಸ್ಥಾನಗಳನ್ನು ಪಡೆಯುವ ಮೂಲಕ ಸಮ ಬಲವನ್ನು ಹೊಂದಿದ್ದರೆ. 3 ಸ್ಥಾನಗಳನ್ನು ಪಡೆದಿರುವ ಜೆಡಿಎಸ್ ಇಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದು, ಜೆಡಿಎಸ್ ಸದಸ್ಯರ ಬೆಂಬಲ ಯಾರಿಗೆ ಸಿಗುತ್ತದೋ ಆ ಪಕ್ಷ ಇಲ್ಲಿ ಆಡಳಿತ ನಡೆಸಲಿದೆ.

ಪಕ್ಷವಾರು ಮತಗಳ ವಿವರ:

      ಜಗಳೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಚಲಾವಣೆಯಾದ 11,102 ಮತಗಳಲ್ಲಿ ಕಾಂಗ್ರೆಸ್ ಪಕ್ಷ 3,959, ಬಿಜೆಪಿ 4,733, ಜೆಡಿಎಸ್ 1,633, ಪಕ್ಷೇತರರು 710 ಮತಗಳನ್ನು ಪಡೆದಿದ್ದು, 67 ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. ಹೊನ್ನಾಳಿ ಪಟ್ಟಣ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಚಲಾವಣೆಯಾಗಿರುವ 12,478 ಮತಗಳಲ್ಲಿ ಕಾಂಗ್ರೆಸ್ 3,766, ಬಿಜೆಪಿ 5,746, ಜೆಡಿಎಸ್ 432 ಹಾಗೂ ಪಕ್ಷೇತರರು 2,435 ಮತಗಳನ್ನು ಪಡೆದಿದ್ದರೆ, 99 ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. ಇನ್ನೂ ಚನ್ನಗಿರಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ಚಲಾವಣೆಯಾಗಿರುವ 13,297 ಮತಗಳ ಪೈಕಿ ಕಾಂಗ್ರೆಸ್ 5,216, ಬಿಜೆಪಿ 5,519, ಜೆಡಿಎಸ್ 1,721, ಪಕ್ಷೇತರರು-1,484 ಮತಗಳನ್ನು ಪಡೆದಿದ್ದರೆ, 99 ಮತಗಳು ನೋಟಾಕ್ಕೆ ಚಲಾವಣೆಯಾಗಿವೆ.

      ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಗೆದ್ದ ಅಭ್ಯರ್ಥಿಗಳ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದ ದೃಶ್ಯ ಮತ ಎಣಿಕೆ ಕೇಂದ್ರದ ಎದುರು ಸಾಮಾನ್ಯವಾಗಿತ್ತು.
ಮತ ಎಣಿಕೆಯ ಹಿನ್ನೆಲೆಯಲ್ಲಿ ಜಗಳೂರು, ಹೊನ್ನಾಳಿ, ಚನ್ನಗಿರಿಯ ಮತ ಎಣಿಕೆ ಕೇಂದ್ರಗಳ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

 
           ಸ್ಥಳೀಯ ಸಂಸ್ಥೆ ಒಟ್ಟು ಸ್ಥಾನ
  • ಬಿಜೆಪಿ     ಕಾಂಗ್ರೆಸ್     ಜೆಡಿಎಸ್     ಪಕ್ಷೇತರ
  • ಚನ್ನಗಿರಿ     ಪುರಸಭೆ     23, 10,  10,  03,  00
  • ಹೊನ್ನಾಳಿ    ಪ.ಪಂ.     18,  10,  05,  00,  03
  • ಜಗಳೂರು    ಪ.ಪಂ.     18,  11,  05,  02,  00
 
  ಚನ್ನಗಿರಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷವು 10 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಸಂತೋಷ ತಂದಿದೆ. ಆದರೆ, ನಾವು ಆಡಳಿತ ಮಾಡಲು ಕೆಲವೇ ಸ್ಥಾನಗಳ ಕೊರತೆ ಇದೆ. ಇತರೆ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಬಯಸಿದರೆ ಮೈತ್ರಿ ಆಡಳಿತ ನಡೆಸಲು ಬಿಜೆಪಿ ಸಿದ್ಧವಾಗಿದೆ.
                                                                                         -ಮಾಡಾಳು ವಿರೂಪಾಕ್ಷಪ್ಪ,  ಚನ್ನರಿ ಶಾಸಕ.
 
   ರಾಜ್ಯದಲ್ಲೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ. ಹೀಗಾಗಿ ಚನ್ನಗಿರಿಯಲ್ಲೂ 10 ಸ್ಥಾನ ಪಡೆದಿರುವ ಕಾಂಗ್ರೆಸ್ ಮೂರು ಸ್ಥಾನ ಪಡೆದಿರುವ ಜೆಡಿಎಸ್ ಬೆಂಬಲ ಪಡೆದು ಸಮ್ಮಿಶ್ರ ಆಡಳಿತ ನೀಡುತ್ತೇವೆ. 
                                                                                     -ವಡ್ನಾಳ್ ರಾಜಣ್ಣ,  ಮಾಜಿ ಶಾಸಕ

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap