ದಾವಣಗೆರೆ :
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು, ಅನಧಿಕೃತ ಮರಳು ಸಾಗಾಣಿಕೆ ತಡೆಯಬೇಕು, ಬಗರ್‍ಹುಕುಂ ಅಡಿಯಲ್ಲಿ ಜಮೀನು ಮಂಜೂರು ಮಾಡಿಕೊಡಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು, ಎಪಿಎಂಸಿಯಲ್ಲಿ ರೈತರಿಗೆ ಆಗುವ ಮೋಸಕ್ಕೆ ಬ್ರೇಕ್ ಹಾಕಬೇಕೆಂಬುದು ಸೇರಿದಂತೆ ಸಾಲು, ಸಾಲು ಮನವಿಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಡೆಸಿದ ಜನಸ್ಪಂದನಾ ಸಭೆಯಲ್ಲಿ ಸಲ್ಲಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಆಯಾ ದೂರುಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕೆಂದು ಸೂಚಿಸಿದರು.
ಹರಪನಹಳ್ಳಿ ತಾಲೂಕಿನ ವೃದ್ಧರೊಬ್ಬರು ಮಾತನಾಡಿ, ಯರಬಾಳು, ಶಿವಪುರ, ಇಟ್ಟುಗುಡಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದೆ. ಹೀಗಾಗಿ ಮಕ್ಕಳು, ಮಹಿಳೆಯರು ಬಹಳ ಕಷ್ಟ ಪಡುತ್ತಿದ್ದಾರೆ. ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಳತೆಯಲ್ಲಿ ರೈತನ್ನು ಮೋಸ ಮಾಡಲಾಗುತ್ತಿದೆ. ಹಮಾಲಿ ಕಮೀಷನ್ ಹೆಚ್ಚು ಪಡೆಯುತ್ತಾರೆ. ರೈತರಿಗೆ ಸರಿಯಾದ ರಸೀದಿ ಕೊಡುತ್ತಿಲ್ಲ. ಬಿಳಿ ಚೀಟಿಯಲ್ಲಿ ಬರೆದು ಕೊಡುತ್ತಾರೆ. ಈ ಕುರಿತು ಹಿಂದೆ ಫೆಡರೇಷನ್‍ಗೂ ದೂರು ನೀಡಿದಾಗ ಎಪಿಎಂಸಿಯವರು ತಪ್ಪೊಪ್ಪಿ ಕೊಂಡಿದ್ದಾರೆ. ನಾವೇ ಚೀಲ ಎತ್ತಿ ಹಾಕಿದರೂ ಹಮಾಲಿ ಕೇಳುತ್ತಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರನ್ನು ಕರೆಸಿ ಸಭೆ ನಡೆಸಿ, ಈ ಮೋಸಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಕ್ರಮ ಮದ್ಯ ಮಾರಾಟ ಹಾಗೂ ರೈತರಿಗೆ ಎಪಿಎಂಸಿಗಳಲ್ಲಾಗುವ ಮೋಸ ತಡೆಯಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಸೂಚಿಸಿದರು.
ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮಸ್ಥರೊಬ್ಬರು ಮಾತನಾಡಿ, ಪಹಣಿ ತಿದ್ದುಪಡಿಗೆ ಕೊಟ್ಟು 1 ವರ್ಷ ಆಗಿದೆ. ಸುಮ್ಮನೆ ಆಕ್ಷೇಪಗಳನ್ನು ಹಾಕುತ್ತಾರೆ. ಒಂದು ಫೈಲ್ ಮುಂದೆ ಹೋಗಲು ಆರು ತಿಂಗಳು ತಗೊಂಡರೆ ಹೇಗೆ? ರೈತರನ್ನು ಹೀಗೆ ಅಲೆದಾಡಿಸಬೇಡಿ ಮನವಿ ಮಾಡಿದಾಗ, ಜಿಲ್ಲಾಧಿಕಾರಿಗಳು ಶೀಘ್ರವಾಗಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಲೋಕಿಕೆತೆ ಗ್ರಾಮಸ್ಥರೊಬ್ಬರು ಮಾತನಾಡಿ, ಲೋಕಿಕೆರೆ ಭಾಗದಲ್ಲಿ ರಾತ್ರೋರಾತ್ರಿ ಮರಳು ತುಂಬಿಸುತ್ತಾರೆ. ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗಿದೆ. ಇದರಿಂದ ಅಕ್ಕಪಕ್ಕದವರು ಬೆಳೆ ಬೆಳೆಯಲು ಆಗುತ್ತಿಲ್ಲ. ಆದ್ದರಿಂದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳ ತಂಡವನ್ನು ಕಳುಹಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಶಾಮನೂರಿನ ನಾಗರೀಕರೊಬ್ಬರು ಮಾತನಾಡಿ, ಮಳೆಯಿಂದ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ದೊರಕಿಸಿ ಕೊಡಬೇಕು. ಕಳೆದ ಬಾರಿ ಬೆಳೆ ವಿಮೆ ಮಾಡಿಸಲಾಗಿದೆ. ಆದರೆ, ಬೆಳೆ ಹಾನಿಯಾದರೂ ಬೆಳೆ ವಿಮೆ ಬಂದಿಲ್ಲ. ಬೆಳೆ ವಿಮೆ ಕೊಡಿಸಿ ರೈತರಿಗೆ ನ್ಯಾಯ ಕಲ್ಪಿಸಬೇಕೆಂದು ಮನವಿ ಮಾಡಿದರು.
ಮಳಲ್ಕೆರೆ ಗ್ರಾಮಸ್ಥರೊಬ್ಬರು ನನ್ನ ಜಮೀನಿನಲ್ಲಿ ಬೆಳೆದಿರುವ ತೇಗದ ಮರ ಕಟಾವು ಮಾಡಲು ತಹಶೀಲ್ದಾರರಿಗೆ ಮನವಿ ಕೊಟ್ಟು 3ವರ್ಷ ಆಗಿದೆ. ಪಹಣಿಯೂ ನನ್ನ ಹೆಸರಿನಲ್ಲಿದೆ. ಆದರೆ, ಮರಕ್ಕೆ ಸಂಬಂಧಿಸಿದಂತೆ ಮತ್ತೆ ಜಮೀನಿನ ಮಾಲಿಕತ್ವ ಯಾರದು ಎಂಬುದಾಗಿ ಕೇಳುತ್ತಿದ್ದಾರೆ. ನನ್ನ ಜಮೀನಿನಲ್ಲಿರುವ ಮರಗಳು ನನ್ನದಲ್ಲದೇ ಮತ್ತೆ ಯಾರವು ಎಂದು ಪ್ರಶ್ನಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಮರ ಸಂರಕ್ಷಣೆ ಉದ್ದೇಶದಿಂದ ಹಾಗೆ ಕೇಳಿರಬಹುದು. ಜಮೀನು ನಿಮ್ಮದೇ ಆಗಿದ್ದರೂ ಒಮ್ಮೆಲೇ ಹೆಚ್ಚು ಮರಗಳನ್ನು ಕಡಿಯಲು ಬರುವುದಿಲ್ಲ. ಕಡತ ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದರು.
ನಗರದಲ್ಲಿ ಹೆಚ್ಚುತ್ತಿರುವ ಅಪಾರ್ಟ್‍ಮೆಂಟ್‍ಗಳಲ್ಲಿ ಎಸ್.ಟಿ.ಪಿ. ಪ್ಲಾಂಟ್ ಇಲ್ಲ. 20 ಮನೆಗಳಿದ್ದರೆ ಒಂದು ಎಸ್.ಟಿ.ಪಿ ಪ್ಲಾಂಟ್ ಇರಬೇಕೆಂಬ ನಿಯಮವಿದೆ. ಈ ಕುರಿತು ಹೈಕೋರ್ಟ್ ಆದೇಶವಿದೆ ಹಾಗೂ ಅಪಾರ್ಟ್‍ಮೆಂಟ್‍ಗಳವರು ಚರಂಡಿ ಒತ್ತುವರಿ ಮಾಡಿಕೊಂಡಿದ್ದಾರೆಂದು ನಾಗರೀಕರೊಬ್ಬರು ಆರೋಪಿಸಿದರು.
ರೈತರೊಬ್ಬರು ಮಾತನಾಡಿ, ಜಮೀನು ಅಭಿವೃದ್ಧಿಗಾಗಿ ಕಳೆದ 8 ವರ್ಷಗಳ ಹಿಂದೆ 10 ಲಕ್ಷ ರೂ. ಸಾಲ ಪಡೆದಿದ್ದೆ. ಆದರೆ, ಈಗ ಅದು 45 ಲಕ್ಷ ಆಗಿದೆ. ಅಷ್ಟು ಸಾಲ ತೀರಿಸಲಾಗದು. ನಾನು ಪಡೆದ ಅಸಲು ಮಾತ್ರ ತೀರಿಸುತ್ತೇನೆ. ಇದಕ್ಕೆ ನಿಮ್ಮ ಸಹಾಯಬೇಕೆಂದು ಮನವಿ ಮಾಡಿದರು.
ಬ್ಯಾಂಕಿನವರ ಜೊತೆ ಚರ್ಚಿಸಿ ನೀವೆ ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ ಸಾಲದ ಮೊತ್ತ ಬೆಳೆಯುತ್ತಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಕೊಡಗನೂರು ಗ್ರಾಮದ ಗಂಗಮ್ಮ ಮಾತನಾಡಿ, ರಸ್ತೆ ಪಕ್ಕ ಗುಡಿಸಲು ನಿರ್ಮಿಸಿಕೊಂಡಿದ್ದೇನೆ. ಊರಿನವರು ತುಂಬಾ ತೊಂದರೆ ಕೊಡುತ್ತಿದ್ದಾರೆ. ಒಂದು ಶಾಶ್ವತ ನೆಲೆ ಕಲ್ಪಿಸಿ ತನ್ನ ಮಗನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೇಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಬಗಾದಿ ಗೌತಮ್, ಗ್ರಾ.ಪಂ.ನಿಂದ ನಿವೇಶನ ಕೊಡಿಸಲಾಗುವುದು ಹಾಗೂ ಈಗಿರುವ ಸ್ಥಳದಲ್ಲಿ ವಾಸಿಸಲು ಯಾವುದೇ ತೊಂದರೆ ಕೊಡದಂತೆ ಪಿ.ಡಿ.ಓಗೆ ಸೂಚಿಸಿ ಸೂಕ್ತ ರಕ್ಷಣೆ ಕೊಡಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಷಡಾಕ್ಷರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ಡಿ.ಹೆಚ್.ಓ ಡಾ.ತ್ರಿಪುಲಾಂಭ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ