ಜಲಪ್ರಳಯದಿಂದ ನಲುಗಿದ ಜನಜೀವನ ಪರಿಹಾರ ಸಾಮಗ್ರಿ ಸ್ವೀಕಾರ ಕೇಂದ್ರ

 ತುಮಕೂರು:

      ಜಲಪ್ರಳಯದ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಲು ನಗರದಾದ್ಯಂತ ಎಲ್ಲಾ ಕಡೆ ಬಿರುಸಿನ ಕಾರ್ಯಗಳು ನಡೆದಿವೆ.  ಪತ್ರಿಕಾ ವರದಿಗಳನ್ನು ಗಮನಿಸಿದ ನಾಗರಿಕರು ಬೆಳಗಿನಿಂದಲೆ ಉತ್ತಮ ಸ್ಪಂದನೆ ನೀಡಿದ್ದಾರೆ.

      ಭಾನುವಾರ ಬೆಳಿಗ್ಗೆ ಜಿಲ್ಲಾಡಳಿತವು ರೆಡ್‍ಕ್ರಾಸ್ ಬಳಿ ಸಾರ್ವಜನಿಕರಿಂದ ಬಂದ ವಿವಿಧ ರೀತಿಯ ಸಾಮಗ್ರಿಗಳನ್ನು ಸ್ವೀಕರಿಸುವ ಕಾರ್ಯದಲ್ಲಿ ನಿರತವಾಗಿತ್ತು. ಇಡೀ ದಿನ ಸಂಗ್ರಹಿಸಿದ ಸಾಮಗ್ರಿಗಳನ್ನು ಇಂದು ಕೊಡಗು ಹಾಗೂ ಕೇರಳಕ್ಕೆ ಎರಡು ಬೃಹತ್ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ.

     ನಗರದ ಕೇರಳ ಸಮಾಜಂನ ಪದಾಧಿಕಾರಿಗಳು ಬಿ.ಹೆಚ್. ರಸ್ತೆಯ ಸೇರುಸ್ಥಳದಲ್ಲಿರುವ ಗಂಗೋತ್ರಿ ರಸ್ತೆ ಮತ್ತು ಲಕ್ಕಪ್ಪ ಸರ್ಕಲ್ ಬಳಿ ಇರುವ ರಾಜಟೈರ್ಸ್‍ನಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಸಂಗ್ರಹಿಸಲಾಗಿರುವ ವಸ್ತುಗಳನ್ನು ಅಂದರೆ ಉಡುಪುಗಳು, ಶೌಚ ಸಾಮಗ್ರಿಗಳು, ಬಿಸ್ಕೆಟ್, ಅಕ್ಕಿ, ರವೆ ಮುಂತಾದವುಗಳನ್ನು ಇಂದು ಮೈಸೂರು ಮಾರ್ಗವಾಗಿ ಕಳುಹಿಸಿಕೊಡಲಾಗುತ್ತಿದೆ. ಕೇರಳ ರಾಜ್ಯದ ತ್ರಿಷೂರ್ ಮತ್ತು ಎರನಾಕುಲಂ ಪ್ರದೇಶಗಳಿಗೆ ಎರಡು ಲಾರಿಗಳ ಮೂಲಕ ಸಾಮಗ್ರಿಗಳು ರವಾನೆಯಾಗಲಿವೆ.

      ನೆರೆಪೀಡಿತ ಸಂತ್ರಸ್ಥರಿಗಾಗಿ ದೇಶಾದ್ಯಂತ ಸಹಾಯದ ಮಹಾಪೂರ ಹರಿದು ಬರುತಿದ್ದು ಕರ್ನಾಟಕದ ಮಾನವೀಯತೆ ಮಾತ್ರ ಸ್ಮರಿಸುವಂತಾಗಿದೆ. ಮುಖ್ಯಮಂತ್ರಿಗಳು ತಿಳಿಸಿರುವಂತೆ ಕೊಡಗು ಜಿಲ್ಲೆಗೆ ಆಹಾರ, ಉಡುಪು ಮತ್ತು ಆಶ್ರಯಕ್ಕೆ ತಾತ್ಕಾಲಿಕ ಆಸರೆ ಕಲ್ಪಿಸುತ್ತಿರುವುದರಿಂದ ಅಲ್ಲಿಗೆ ಹೆಚ್ಚಾಗಿ ಬೇಕಾಗಿರುವುದು ಜೀವ ರಕ್ಷಕ ಔಷಧಿಗಳು ಮತ್ತು ವೈದ್ಯರ ಸಹಕಾರ.
ಕುಡಿಯುವ ನೀರಿಗೆ ತುಂಬಾ ತಾಪತ್ರಯ ಇರುವುದರಿಂದ ಕುಡಿಯುವ ನೀರಿನ ಬಾಟಲ್‍ಗಳ ಒಂದು ಲೋಡ್ ಅನ್ನು ಪ್ರತ್ಯೇಕವಾಗಿ ಕಳುಹಿಸಿ ಕೊಡಲು ತೀರ್ಮಾನಿಸಲಾಗಿದೆ. ಇದರ ಜೊತೆ ರಗ್ಗುಗಳು ಸಹ ರವಾನೆಯಾಗಲಿವೆ.

      ನಗರದ ಚರ್ಚ್ ಸರ್ಕಲ್ ಬಳಿ ಇರುವ ರೆಡ್‍ಕ್ರಾಸ್ ಭವನದಲ್ಲಿ ಸೋನಿ ಶೋರೂಂ ಬಳಿ ಪರಿಹಾರ ಸಾಮಗ್ರಿ ಸ್ವೀಕಾರ ಕೇಂದ್ರ ತೆರೆಯಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 6 ಘಂಟೆಯ ತನಕ ವಸ್ತುಗಳನ್ನು ಸ್ವೀಕರಿಸಲಾಗುತ್ತದೆ. ನಾಗರಿಕರು ನೀಡುವ ಪದಾರ್ಥಗಳನ್ನು ಮತ್ತು ಪರಿಮಾಣವನ್ನು ಅವರ ವಿಳಾಸ ಸಮೇತ ದಾಖಲಿಸಿಕೊಂಡು ಸ್ವೀಕರಿಸಲಾಗುತ್ತದೆ. ಉಪಯೋಗಿಸದೆ ಇರುವ ಉಡುಪುಗಳನ್ನು ಮತ್ತು ದ್ರವ ಪದಾರ್ಥಗಳಲ್ಲದ, ಹಲವು ದಿನ ಶೇಖರಿಸಿ ಇಡಬಹುದಾದ ಆಹಾರ ಪದಾರ್ಥಗಳನ್ನು ಮಾತ್ರವೆ ನೀಡಬೇಕು ಎಂದು ರೆಡ್‍ಕ್ರಾಸ್ ಸೊಸೈಟಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳಾದ ರಾಕೇಶ್‍ಕುಮಾರ್, ರೆಡ್‍ಕ್ರಾಸ್ ಸೊಸೈಟಿ ಛೇರ್‍ಮನ್ ಎಸ್.ನಾಗಣ್ಣ ಮನವಿ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link