ಜಿಎಸ್‍ಟಿ ಫೈಲಿಂಗ್‍ನಲ್ಲಿ ದಾವಣಗೆರೆ ವಿಭಾಗ ಹಿಂದೆ

ದಾವಣಗೆರೆ

      ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಫೈಲಿಂಗ್‍ನಲ್ಲಿ ದಾವಣಗೆರೆ ವಿಭಾಗ ಹಿಂದುಳಿದಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಎಸ್.ನಿಂಗೇಗೌಡ ತಿಳಿಸಿದ್ದಾರೆ.
       ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಎಸ್‍ಟಿ ಮತ್ತು ಆದಾಯ ತೆರಿಗೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ವಿಭಾಗದಲ್ಲಿ 2 ಕೋಟಿಯಿಂದ ಸುಮಾರು 200 ಕೋಟಿ ರೂಪಾಯಿಗಳ ವರೆಗೆ ವ್ಯವಹಾರ-ವಹಿವಾಟು ನಡೆಸುವ 200 ಮಂದಿ ವರ್ತಕರು ಇನ್ನೂ ಜಿಎಸ್‍ಟಿ ಫೈಲಿಂಗ್ ಮಾಡಿಲ್ಲ ಎಂದರು.


       ಬೇರೆ ವಿಭಾಗಗಳನ್ನು ಹೋಲಿಸಿದರೆ, ದಾವಣಗೆರೆ ವಿಭಾಗವು ಜಿಎಸ್‍ಟಿ ಫೈಲಿಂಗ್‍ನಲ್ಲಿ ಹಿಂದುಳಿದಿದೆ. ಆದ್ದರಿಂದ ಸಮಸ್ಯೆಗಳು ಎದುರಾಗಿದ್ದು, ಮೇಲಾಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ರಿಟರ್ನ್ ಫೈಲ್ ಮಾಡಿದರೆ ಅರ್ಧ ಸಮಸ್ಯೆ ಬಗೆಹರಿಯಲಿದೆ. ಇನ್ನೂ ಮುಂದಿನ 6 ತಿಂಗಳೊಳಗಾಗಿ ವರ್ತಕರು ರಿಟರ್ನ್ ಫೈಲ್ ಮಾಡದಿದ್ದರೆ, ಪರವಾನಗಿ ರದ್ದುಗೊಳಿಸಬೇಕಾಗುತ್ತದೆ ಎಚ್ಚರಿಸಿದರು.
ತೆರಿಗೆ ಸಲಹೆಗಾರರು, ಚಾರ್ಟೆಡ್ ಅಕೌಂಟೆಂಟ್ ಆದವರು ಇಲಾಖೆ ಮತ್ತು ತೆರಿಗೆ ಪಾವತಿದಾರರಾದ ವರ್ತಕರ ನಡುವೆ ಸಂಪರ್ಕ ಸೇತುವೆ ಇದ್ದಂತೆ. ಅವರು ಸಮರ್ಪಕ ರೀತಿಯಲ್ಲಿ ಕಾಲ ಕಾಲಕ್ಕೆ ತೆರಿಗೆ ಪಾವತಿಯ ಬಗ್ಗೆ ವರ್ತಕರಿಗೆ ಮನವರಿಕೆ ಮಾಡಿಕೊಡಬೇಕು. ಸರಿಯಾದ ರೀತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಸಲಹೆ ನೀಡಿದರು.
      ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಟಿ.ಬಾಣೇಗೌಡ ಮಾತನಾಡಿ, ಬದಲಾವಣೆ ನಿರಂತರವಾಗಿದೆ. ಬದಲಾವಣೆ ಆಗುವ ಸಮಯದಲ್ಲಿ ಕೆಲ ಸಮಸ್ಯೆಗಳು ಸಹಜ. ಅದನ್ನೇ ದೊಡ್ಡದು ಮಾಡದೇ ವರ್ತಕರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
          1957ರಲ್ಲಿ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಸೇಲ್ಸ್ ಟ್ಯಾಕ್ಸ್ ಗುರಿ 3.5 ಕೋಟಿ ನಿಗದಿ ಮಾಡಲಾಗಿತ್ತು. ಆದರೆ, ಈಗ ಜಿಎಸ್‍ಟಿಯಲ್ಲಿ 50 ಸಾವಿರ ಕೋಟಿ ಗುರಿ ನೀಡಲಾಗಿದೆ ಎಂದ ಅವರು, 1957ರ ಸೆಪ್ಟೆಂಬರ್ ಗಿಂತ ಮೊದಲು ನಮ್ಮ ರಾಜ್ಯದಲ್ಲಿ ವಿವಿಧ ರೀತಿಯ ತೆರಿಗೆ ಕಾನೂನುಗಳಿದ್ದವು. ಬಾಂಬೆ ಪ್ರಾವಿಡೆನ್ಸಿ, ಹೈದ್ರಾಬಾದ್ ಕರ್ನಾಟಕ, ಕೊಡಗು, ಮಂಗಳೂರು ಇವನ್ನೆಲ್ಲಾ ಏಕೀಕರಿಸಿ 1957 ಸೆಪ್ಟೆಂಬರ್ 30ರಂದು ಮೈಸೂರು ಮಾರಾಟ ತೆರಿಗೆ ಕಾಯ್ದೆ ಜಾರಿಗೊಳಿಸಲಾಯಿತು ಎಂದು ಮಾಹಿತಿ ನೀಡಿದರು.
ಇಂದಿನ ಆರ್ಥಿಕತೆಗೆ ಬದಲಾವಣೆ ಅವಶ್ಯಕತೆ ಇದೆ. ವ್ಯವಹಾರಕ್ಕೆ ಅನುಗುಣವಾಗಿ ನಾವು ಹೊಂದಿಕೊಳ್ಳಬೇಕಾಗುತ್ತದೆ.  ಬದಲಾವಣೆಯೊಂದಿಗೆ ಮತ್ತೊಮ್ಮೆ ಸಾಗುತ್ತಿದ್ದೇವೆ. ಜಿಎಸ್‍ಟಿ ಜಾರಿಯಾಗಿ ವರ್ಷಕಳೆದು ಮುಂದುವರೆಯುತ್ತಿದೆ. ಹೊಸ ವಿಧಿವಿಧಾನಗಳು ಬಂದಾಗ ಸಮಸ್ಯೆಗಳು ಸಹಜ. ಅದೆಲ್ಲವನ್ನು ಬಗೆಹರಿಸಿಕೊಂಡು ಗೊಂದಲಗಳನ್ನು ನಿವಾರಣೆ ಮಾಡಿಕೊಂಡು ಮುಂದೆ ಸಾಗಬೇಕು. ಸಮಸ್ಯೆಗಳನ್ನು ದೊಡ್ಡದು ಮಾಡುವುದು ಸರಿಯಲ್ಲ. ಜಿಎಸ್‍ಟಿ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳಿರಬಹುದು. ಅದೆಲ್ಲವನ್ನು ಬಗೆಹರಿಸಿಕೊಂಡು ಹೋಗುವುದು ಮುಖ್ಯ ಎಂದರು.
     ಜಿಲ್ಲಾ ತೆರಿಗೆದಾರರ ಸಂಘದ ಅಧ್ಯಕ್ಷ ಜಂಬಗಿ ರಾದೇಶ್ ಮಾತನಾಡಿ, ಕಳೆದ ವರ್ಷ ದಾವಣಗೆರೆ ವಿಭಾಗದಲ್ಲಿ ವಾರ್ಷಿಕ 2.29 ಕೋಟಿ ರೂ. ರಿಟರ್ನ್ ಫೈಲ್ ಆಗಿತ್ತು. ಆದರೆ, ಈ ವರ್ಷ ಕೇವಲ 6 ತಿಂಗಳಲ್ಲಿ 3.29 ಕೋಟಿ ರೂ. ರಿಟರ್ನ್ ಆಗಿದೆ. ಇದರ ಶ್ರೇಯಸ್ಸು ತೆರಿಗೆ ಸಲಹೆಗಾರರಿಗೆ ಸಲ್ಲಬೇಕಿದೆ. ರಿಟರ್ನ್ ಫೈಲ್‍ಗೆ ಸರ್ವರ್ ಸಮಸ್ಯೆ ಆಗುತ್ತಿದೆ. ದೇಶದಲ್ಲಿ ಒಂದು ಸರ್ವರ್ ಇರುವುದೇ ಕಾರಣವಾಗಿದೆ. ಆದ್ದರಿಂದ 4 ಕಡೆಯಲ್ಲಿ ಸರ್ವರ್ ಅಳವಡಿಸಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ಡಿ.ಆರ್.ವೆಂಕಟೇಶ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಬಿ.ಜಿ.ಬಸವರಾಜಪ್ಪ, ಶ್ರೀಕಾಂತ್, ರುದ್ರಸ್ವಾಮಿ, ಸಹನಾ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link