ಚಳ್ಳಕೆರೆ
ರಾಜ್ಯದ ಶಾಶ್ವರ ಬರಗಾಲ ಪೀಡಿತ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತ ಸಮುದಾಯವೂ ಸೇರಿದಂತೆ ಎಲ್ಲಾ ವರ್ಗಗಳ ನಿರುದ್ಯೋಗ ಯುವಕರ ಸಂಖ್ಯೆ ಹೆಚ್ಚುತ್ತಿದ್ದು, ಉದ್ಯೋಗ ಅವಕಾಶವಿಲ್ಲದೆ, ನಿರುದ್ಯೋಗಿಗಳ ಬಾಳು ಬೆಳಕಾಗಲು ರಾಜ್ಯ ಸರ್ಕಾರ 44 ಕೋಟಿ ವೆಚ್ಚದ ಸರ್ಕಾರಿ ಉಪಕರಣಗಾರ ತರಬೇತಿ (ಜಿಟಿಟಿಸಿ) ಕೇಂದ್ರ ಸ್ಥಾಪನೆಗೆ ರಾಜ್ಯ ಸಂಪುಟ ಅನುಮೋದನೆ ನೀಡಿದ್ದು, ಈಗಾಗಲೇ ಹಣವನ್ನು ಸಹ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಟ್ಟದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕ್ಷೇತ್ರ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಸೋಮವಾರ ಇಲ್ಲಿನ ಶಾಸಕ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ 2016ರಲ್ಲೇ ಈ ಭಾಗದ ಕೃಷಿಕರ ಹಾಗೂ ಇನ್ನಿತರ ಸಮುದಾಯದ ನಿರುದ್ಯೋಗಿಗಳಿಗೆ ನೆರವಾಗುವಂತೆ ಉತ್ತಮ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಜಿಟಿಟಿಸಿ ಕೇಂದ್ರ ಸ್ಥಾಪನೆಗೆ 2016ರಲ್ಲೇ ನಾನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದೆ. 2018ರಲ್ಲಿ ನಿರ್ಗಮನ ಮಾನ್ಯ ಮುಖ್ಯಮಂತ್ರಿಗಳು ಈ ಯೋಜನೆ ಅನುಮೋದನೆಗೆ ಮಂತ್ರಿಮಂಡಲ ಸಭೆ ಕರೆದಿದ್ದು, ಒಪ್ಪಿಗೆ ಪಡೆಯುವ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಈ ಯೋಜನೆಗೆ ಹಿನ್ನೆಡೆಯಾಗಿತ್ತು.
ಆದರೆ, ಮತದಾರರ ಅಭಿಮಾನದಿಂದ ಪುನರಾಯ್ಕೆಯಾದ ನಾನು ಶತಾಯ ಗತಾಯ ಈ ಯೋಜನೆಯನ್ನು ಜಾರಿಗೊಳಿಸಿದಲ್ಲಿ ಕ್ಷೇತ್ರದ ಸಾವಿರಾರು ನಿರುದ್ಯೋಗಿಗಳಿಗೆ ವಿಶೇಷವಾಗಿ ರೈತ ಮಕ್ಕಳಿಗೆ ಉದ್ಯೋಗದ ಅವಕಾಶ ಲಭಿಸಲಿ ಎಂಬ ಉದ್ದೇಶಿದಿಂದ ಮತ್ತೆ ಪ್ರಸ್ತಾವನೆಯನ್ನು ಸಲ್ಲಿಸಿ ಸಿದ್ದರಾಮಯ್ಯನವರ ಸಹಕಾರದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ವಿನಂತಿಸಿದಾಗ ಮುಖ್ಯಮಂತ್ರಿಗಳು ಈ ಯೋಜನೆಗೆ ಇತ್ತೀಚೆಗೆ ನಡೆದ ಸಂಪುಟಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ಮುಖ್ಯಮಂತ್ರಿಗಳು ಈ ಯೋಜನೆಗೆ ಅನುಮೋದನೆ ನೀಡಿದ್ದಲ್ಲದೆ, ಹಣವನ್ನೂ ಸಹ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲೇ ಜಿಟಿಟಿಸಿ ಕಟ್ಟಡ ನಿರ್ಮಾಣ ಮಾಡುವಂತೆ ಸೂಚಿಸಿದ್ದು, ಕ್ಷೇತ್ರದ ಜನತೆಯ ಪರವಾಗಿ ನಾನು ಅವರನ್ನು ಅಭಿನಂದಿಸುವೆ ಎಂದರು.
ಜಿಟಿಟಿಸಿ ಕೇಂದ್ರ ಸ್ಥಾಪನೆಗೆ ಇಲ್ಲಿನ ವಿವಿಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿ ಬಳ್ಳಾರಿ ರಸ್ತೆಯ ಸರ್ಕಾರಿ ಗೋಮಾಳದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಈ ಕೇಂದ್ರ ನಿರ್ಮಿಸಲು ನಿರ್ಧರಿಸಿದ್ದು, ಈಗಾಗಲೇ ಸರ್ಕಾರಕ್ಕೆ ವರದಿಯನ್ನು ಕಳುಹಿಸಿಕೊಟ್ಟಿದ್ದು, ಎಲ್ಲಾ ರೀತಿಯ ಅನುಮೋದನೆ ದೊರಕಿದೆ. ಜಿಟಿಟಿಸಿ ಕೇಂದ್ರದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಪಾಸ್ ಆದ ಮತ್ತು ಫೇಲ್ ಆದ ಎಲ್ಲರೂ ಸಹ ತರಬೇತಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ತರಬೇತಿಯ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆದವರಿಗೆ ಪ್ರಮಾಣ ಪತ್ರ ನೀಡುವ ಜೊತೆಗೆ ಉದ್ಯೋಗ ಅವಕಾಶವನ್ನು ಸಹ ಮಾಡಿಕೊಡಲಾಗುವುದು ಎಂದರು.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿ ಸಹ ಸುಮಾರು 25 ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಈ ಕಾರ್ಯವೂ ಸಹ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಧರು. ನಾನು ಕಳೆದ ಅವಧಿಯಲ್ಲಿ ಶಾಸಕನಾಗಿ ನೀಡಿದ ಚುನಾವಣಾ ಭರವಸೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಅವಧಿಯಲ್ಲೂ ಸಹ ಮತ್ತಷ್ಟು ಹೊಸ ಯೋಜನೆಗಳಿಗೆ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗುವೆ ಎಂದರು. ಪ್ರಸ್ತುತ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಮರ್ಥವಾಗಿದ್ದು ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯ ಮೂಲಕ ಹೊಸ ದಾಖಲೆ ನಿರ್ಮಿಸಲಿದೆ ಎಂದರು. ಕ್ಷೇತ್ರದ ಜನತೆಯ ವಿಶ್ವಾಸಕ್ಕೆ ಯಾವುದೇ ರೀತಿಯಲ್ಲಿ ಘಾಸಿಯಾಗದಂತೆ ಕಾರ್ಯನಿರ್ವಹಿಸುವ ಭರವಸೆಯನ್ನು ಅವರು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ