ಚಿತ್ರದುರ್ಗ
ಜಿಲ್ಲೆಯ ಚಳ್ಳಕೆರೆ ಮೊಳಕಾಲ್ಮೂರು, ದಾವಣಗೆರೆ ಜಿಲ್ಲೆ ಜಗಳೂರು, ತುಮಕೂರು ಜಿಲ್ಲೆಯ ಪಾವಗಡ, ಶಿರಾ ತಾಲ್ಲೂಕುಗಳು ಅತ್ಯಂತ ಹಿಂದುಳಿದ್ದು ಹೈದಾರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ನೀಡಿರುವಂತೆ 371 ಜೆ ಮಾದರಿಯಲ್ಲಿಯೇ ಸ್ಥಾನಮಾನ ನೀಡುವಂತೆ ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸಲು ಹಾಗೂ ಇದಕ್ಕೆ ಸಂಬಂಧಿಸಿದಂತೆ ತಜ್ಞರಿಂದ ಮಾಹಿತಿ ಪಡೆಯಲು ಶುಕ್ರವಾರ ಐಶ್ವರ್ಯಪೋರ್ಟ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಹೋರಾಟದ ಸಾರಥ್ಯವನ್ನು ಸಾಹಿತಿ ಡಾ.ಬಂಜಿಗೆರೆ ಜಯಪ್ರಕಾಶ್ ಅವರಿಗೆ ವಹಿಸಲು ನಿರ್ಧರಿಸಲಾಯಿತು.
ಏಕಾಏಕಿ ಹೋರಾಟ ಆರಂಭಿಸುವುದು ಸೂಕ್ತವಲ್ಲ ಬದಲಿಗೆ ಮೊದಲು ಯಾವ್ಯಾವ ರಾಜ್ಯಗಳಲ್ಲಿ 371 ಜೆ ಕಲಂ ಅಡಿಯಲ್ಲಿ ಜಿಲ್ಲೆಗಳಲ್ಲಿ ಸ್ಥಾನಮಾನ ನೀಡಲಾಗಿದೆ. ಅದಕ್ಕೆ ಅನುಸರಿಸಿರುವ ಮಾನದಂಡಗಳು ಯಾವ್ಯಾವು, ಹೈದಾರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿನ ಮೊದಲಿನ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ತಜ್ಞರನ್ನು ಬರಮಾಡಿಕೊಂಡು ಕಾರ್ಯಾಗಾರ ನಡೆಸಿ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಹ ಸಭೆ ಒಮ್ಮತದಿಂದ ಸಮ್ಮತಿ ನೀಡಿತು.
ಉದ್ಯೋಗ, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಎಳೆಎಳೆಯನ್ನಾಗಿ ಪರಿಶೀಲಿಸಬೇಕಾದರೆ ಮೊದಲು ಅಧ್ಯಯನ ಸಮಿತಿ ರಚನೆಯಾಗಬೇಕು. ಈ ಹಿಂದೆ ಡಾ.ನಂಜುಂಡಪ್ಪ ವರದಿ ಆಧಾರದ ಮೇಲೆ ಯಾವ್ಯಾವ ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂದು ಪರಿಗಣಿಸಲಾಗಿತ್ತು. ಆಗ ಅನುಸರಿಸಿದ ಮಾನದಂಡ ಏನು. ಹಿಂದುಳಿದ ತಾಲ್ಲೂಕುಗಳ ಸ್ಥಿತಿ ಈಗ ಹೇಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕು. ಅನಂತರ ಹೋರಾಟದ ರೂಪರೇಶೆ ಸಿದ್ದಪಡಿಸಲು ಸಹ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಏಕಾಏಕಿ 371 ಜೆ ಕಲಂ ಅಡಿಯಲ್ಲಿ ಸ್ಥಾನಮಾನ ಕೊಡುವಂತೆ ಕೇಳುವುದು ಸೂಕ್ತವಲ್ಲ. ಇದರ ಬದಲಿಗೆ ಅದೇ ಮಾದರಿಯಲ್ಲಿ ಅಭಿವೃದ್ದಿ ಸೂಚ್ಯಂಕವನ್ನು ಮುಂದಿಟ್ಟುಕೊಂಡು ಹಿಂದುಳಿದ ತಾಲ್ಲೂಕುಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು. ಹಿಂದುಳಿದ ತಾಲ್ಲೂಕುಗಳ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮೊದಲು ಮನವರಿಕೆ ಮಾಡಿಕೊಡಬೇಕು. ಜನರು ಉದ್ಯೋಗ ಇಲ್ಲದೆ ಯಾವ ರೀತಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಂಬ ಬಗ್ಗೆ ಸರ್ಕಾರದ ಪ್ರತಿನಿಧಿಗಳ ಗಮನಕ್ಕೆ ತರಬೇಕು. ಅಭಿವೃದ್ದಿ ಮಾಡುವಂತೆ ಒತ್ತಡ ತರಬೇಕು ಎಂದು ಹೇಳಿದರು.
ಹೈಕದ ಸವಲತ್ತುಗಳಲ್ಲಿ ಪಾಲು ಕೇಳುತ್ತಿಲ್ಲ ಅಥವಾ ಹೈಕ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯನ್ನು ಸೇರಿಸಿ ಎಂಬುದು ಸಭೆಯ ಉದ್ದೇಶವಲ್ಲ. ಹೈದಾರಾಬಾದ್ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿ ಮಾದರಿ ಚಿತ್ರದುರ್ಗದ ಸಮಗ್ರ ಅಭಿವೃದ್ಧಿ,ಅದರಲ್ಲೂ ಕೃಷಿ ಆಧಾರಿತ ಅಭಿವೃದ್ಧಿಗೆ ಹೋರಾಟ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದರು.
ಹೈದಾರಬಾದ್ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಮಾತನಾಡಿ, ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳು ಅತ್ಯಂತ ಹಿಂದುಳಿದಿದೆ. ಅದೇ ರೀತಿ ದಾವಣಗೆರೆ ಜಿಲ್ಲೆ ಜಗಳೂರು, ತುಮಕೂರು ಜಿಲ್ಲೆ ಪಾವಗಡ, ಶಿರಾ ತಾಲ್ಲೂಕುಗಳು ಹಿಂದುಳಿದಿವೆ. ಇವುಗಳ ಅಭಿವೃದ್ದಿಗೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಹೋರಾಟ ಆರಂಭಿಸುವ ಮುನ್ನ ಮಾಹಿತಿ ಸಂಗ್ರಹಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹೋರಾಟ ಸಮಿತಿಗೆ ಸಂಚಾಲಕರನ್ನಾಗಿ ಯಾದವರೆಡ್ಡಿ ಮತ್ತು ದಾಸೇಗೌಡ ಅವರನ್ನು ನೇಮಕ ಮಾಡಲಾಯಿತು. ರೈತ ಸಂಘದ ಜಿಲ್ಲಾ ಅಧ್ಯಕ್ಷ ನುಲೇನೂರು ಶಂಕರಪ್ಪ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
