ಇಡೀ ಪ್ರಪಂಚವೇ ಕೊರೊನಾ ವೈರಾಣುವಿಗೆ ಹೆದರಿ ಪತರುಗುಟ್ಟುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ ಒಂದು ದಿನದ ‘ಜನತಾ ಕಫ್ರ್ಯೂ’ಗೆ ಇಡೀ ದೇಶದ ಜನರೇ ಅಭೂತಪೂರ್ವಕವಾಗಿ ಬೆಂಬಲ ನೀಡಿದ್ದು ಸ್ವಾಗತಾರ್ಹ. ಆದರೆ ಕೊರೊನಾ ಸದ್ಯದ ಮಟ್ಟಿಗೆ ಕೆಲವೇ ದಿನಗಳಲ್ಲ್ಲಿ ಹತೋಟಿಗೆ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಆದ್ದರಿಂದ ಜನ ತಮ್ಮಷ್ಟಕ್ಕೇ ತಾವೇ ಇನ್ನೂ ಕೆಲವು ದಿನ ಕಫ್ರ್ಯೂ ವಿಧಿಸಿಕೊಳ್ಳುವುದು ಉತ್ತಮ.
ಒಂದು ದಿನದ ಜನತಾ ಕಫ್ರ್ಯೂಗೆ ಹೇಗೆ ಜನ ಸ್ಪಂದಿಸಿದರೋ ಹಾಗೆಯೇ ಇನ್ನೂ ಕೆಲವು ದಿನ ಬೆಂಬಲಿಸಿದರೆ ಕೊರೊನಾವನ್ನು ಒಂದಿಷ್ಟು ಹತೋಟಿಗೆ ತರಲು ಸಾಧ್ಯವಿದೆ. ಕೊರೊನಾ ಬಗ್ಗೆ ಜಾಗೃತವಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹೀಗಾಗಿ ಇಡೀ ಭಾರತವೇ ಲಾಕ್‍ಡೌನ್ ಆಗುವುದು ಅನಿವಾರ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೊರೊನಾ ಹರಡದಂತೆ ತಡೆಯಲು ಪ್ರತಿಯೊಬ್ಬ ನಾಗರಿಕನೂ ಸೈನಿಕರಂತೆ ಕಾರ್ಯನಿರ್ವಹಿಸಬೇಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ತಡೆಗಟ್ಟುವುದು ಸಾರ್ವಜನಿಕರ ಕೈಯಲ್ಲಿದೆಯೇ ಹೊರತು ವೈದ್ಯರ ಕೈಯಲ್ಲಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ಯಾವ ಸರ್ಕಾರಗಳೂ ಜನರ ಪ್ರಾಣ ಉಳಿಸಲು ಸಾಧ್ಯವಿಲ್ಲ. ಜನಸಾಮಾನ್ಯರು ಮನೆಯಲ್ಲೇ ಇದ್ದು, ಸ್ವಯಂ ಚೌಕಟ್ಟು ಹಾಕಿಕೊಂಡು ಸಹಕರಿಸುವುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಪತ್ರಿಕಾ ಮಾಧ್ಯಮ ಜನರಿಗೆ ಸಾಕಷ್ಟು ತಿಳಿವಳಿಯನ್ನು ನೀಡುತ್ತಲೇ ಬರುತ್ತಿದೆ.
ಪ್ರತಿಯೊಬ್ಬರೂ ಹೇಗೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಮಾಹಿತಿಯನ್ನು ಪತ್ರಿಕೆಗಳು ನೀಡುತ್ತಿವೆ. ಮನೆಯನ್ನು ಬಿಟ್ಟು ಹೊರಗೆ ಬರಬೇಡಿ ಎಂದು ಎಷ್ಟು ವಿನಂತಿಸಿಕೊಂಡರೂ ನಮ್ಮ ಜನರಿಗೆ ಕೊರೊನಾದ ತೀವ್ರತೆಯ ಬಗ್ಗೆ ಅರಿವಾದಂತಿಲ್ಲ. ಹಾಗೆ ನೋಡಿದರೇ ಜಾಗೃತಿಯ ವಿಷಯದಲ್ಲಿ ನಮ್ಮ ಹಳ್ಳಿಗರೇ ಗ್ರೇಟ್ ಎನ್ನಬಹುದು. ಸರ್ಕಾರ ಕೊರೊನಾದ ಜಾಗೃತಿಯ ಬಗ್ಗೆ ಏನೇನು ಕ್ರಮಗಳನ್ನು ಬೇಕೋ ಅದೆಲ್ಲವನ್ನೂ ತೆಗೆದುಕೊಳ್ಳುತ್ತಿದೆ.
ಅದಕ್ಕೆ ಸಾರ್ವಜನಿಕರು ಸ್ಪಂದಿಸದಿದ್ದರೆ ಕೊರೊನಾವನ್ನು ತಡೆಗಟ್ಟುವುದು ಹೇಗೆ? ಹಳ್ಳಿಗರು ಎಂದರೆ ತಿಳಿವಳಿಕೆ ಇಲ್ಲದವರು, ಸಾಮಾನ್ಯಪ್ರಜ್ಞೆ ಇಲ್ಲದವರು ಎಂದುಕೊಳ್ಳುತ್ತಿದ್ದವರೇ ಇಂದು ಹಳ್ಳಿಗರು ಜಾಗೃತರಾಗಿರುವುದನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಹಳ್ಳಿಯ ಜನ ತಮ್ಮ ಊರಿಗೆ ಯಾರೂ ಬರದಂತೆ ದಿಗ್ಭಂದನ ಹಾಕಿದ್ದಾರೆ. ಊರಿನ ಮುಖಂಡರೆಲ್ಲಾ ಸೇರಿ ಇಡೀ ಊರಿನ ಜನ ಹೊರಗೆ ಹೋಗದಂತೆ, ಹೊರಗಿನಿಂದ ಒಳಗೆ ಯಾರೂ ಬರದಂತೆ ಬೇಲಿಗಳನ್ನು ಹಾಕುತ್ತಿದ್ದಾರೆ. ಊರಿನಲ್ಲಿ ಯಾರಿಗಾದರೂ ಆಹಾರ ಹಾಗೂ ಇನ್ನಿತರೆ ಸಮಸ್ಯೆಗಳಿಗೆ ತಾವೇ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಹಾಗೇ ನೋಡಿದರೆ ಹಳ್ಳಿಯ ಜನರಿಗಿಂತ ನಗರದ ಜನ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಒಂದೇ ಕಡೆ ಸೇರಬೇಡಿ ಎಂದು ಸರ್ಕಾರದ ಪ್ರತಿನಿಧಿಗಳು, ಪೋಲೀಸರು, ಸಮೂಹ ಮಾಧ್ಯಮಗಳು ಬೇಡಿಕೊಂಡರೂ ನಗರದ ‘ಸುಶಿಕ್ಷಿತ’ ಜನ ಗಮನ ಹರಿಸುತ್ತಿಲ್ಲ. ಕೇವಲ ಹಳ್ಳಿಗರು ಅಷ್ಟೇ ಜಾಗೃತರಾದರೆ ಸಾಲದು. ಪ್ರತಿಯೊಬ್ಬ ನಾಗರಿಕನು ಕೊರೊನಾ ಯುದ್ಧದ ವಿರುದ್ಧ ಕೈಜೋಡಿಸಿದಾಗ ಮಾತ್ರ ನಾವು ಪಾರಾದಂತೆ. ಆದ್ದರಿಂದ ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡು ಜಾಗೃತರಾಗಿ, ಎಚ್ಚರವಹಿಸುವುದೇ ತುರ್ತು ಅಗತ್ಯವೆಂದು ಮನಗಾಣಬೇಕಿದೆ. ಈಗಾಗಲೇ ಕೊರೊನಾ ರೋಗವನ್ನು ಎದುರಿಸುವಲ್ಲಿ ಎರಡು ಹಂತಗಳನ್ನು ದಾಟುತ್ತಿದ್ದೇವೆ.
ಮೂರನೆಯ ಹಂತಕ್ಕೆ ಹೋದರೆ ಖಂಡಿತಾ ಸಾಲು ಸಾಲು ಹೆಣಗಳು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ! ಇಷ್ಟು ದಿನ ಪ್ರಳಯ ಎಂದರೆ ಭೂಕಂಪ, ಸುನಾಮಿ, ಪ್ರವಾಹವೆಂದು ತಿಳಿದುಕೊಂಡಿದ್ದೆವು. ನಾವು ತಾತ್ಸಾರ, ಉಡಾಫೆ, ಅಸಡ್ಡೆ, ಉದ್ಧಟತನ ಮಾಡಿದರೇ ಇದೇ ಪ್ರಳಯ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಈ ಸಮಯದಲ್ಲಿ ಪ್ರತಿಯೊಬ್ಬ ನಾಗರಿಕನೂ ಸಾಮಾಜಿಕ ಅಂತರದ ಜೊತೆಗೆ ವೈಯಕ್ತಿಕ ಅಂತರವನ್ನು ಕಾಯ್ದುಕೊಂಡು ಶುಚಿಯಾಗಿರುವುದು ತುಂಬಾ ಮುಖ್ಯ.
ಅಲ್ಲದೆ ಮನೆಯ ಶುಚಿತ್ವ, ಮನೆಯ ಸುತ್ತಮುತ್ತಲಿನ ಶುಚಿತ್ಚಕ್ಕೂ ಆದ್ಯತೆ ನೀಡುವುದು ತೀರಾ ಅವಶ್ಯಕವಾಗಿದೆ. ಪರಿಸ್ಥಿತಿ ಕೈಮೀರುವ ಮೊದಲು ಒಂದಿಷ್ಟು ದಿನ ಮನೆಯಲ್ಲೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳೋಣ. ಅದು ವಾರ ಆಗಬಹುದು, ಹದಿನೈದು ದಿನಗಳಾಗಬಹುದು, ತಿಂಗಳಾದರೂ ಆಗಬಹುದು. ಎಲ್ಲದಕ್ಕೂ ಸಿದ್ಧರಾಗೋಣ. ಇದರಿಂದ ಬಹಳಷ್ಟು ಜನರಿಗೆ ತೊಂದರೆ ಆಗಬಹುದು. ಸದ್ಯದ ಸಮಯದಲ್ಲಿ ಜನರಿಗೆ ಜೀವವನ್ನು ಉಳಿಸಿಕೊಳ್ಳುವುದಕ್ಕಿಂತ ಜರೂರು ಕಾರ್ಯ ಇರಲಾರದು. ಇದನ್ನು ಅರ್ಥಮಾಡಿಕೊಂಡು ಎಲ್ಲರೂ ಸ್ಪಂದಿಸಿದರೆ ಕೊರೊನಾ ಹೆಮ್ಮಾರಿಯನ್ನು ಓಡಿಸಬಹುದೇನೋ! ಸ್ಪಂದಿಸದಿದ್ದರೆ ಆಸ್ಪತ್ರೆಯಲ್ಲಿ ನರಳಲು ಸಿದ್ಧರಾಗಿ. ಮೈಮರೆತರೆ ಕಣ್ಣಿಗೆ ಕಾಣದ ಲೋಕಕ್ಕೆ ಹೋಗಲು ಸಿದ್ಧರಾಗಿ! ಖಂಡಿತಾ ಇವೆರಡೂ ಬೇಡವೆಂದರೆ ಮನೆಯಲ್ಲೇ ಇರೋದಕ್ಕೆ ಸಿದ್ಧರಾಗೋಣ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ