ಜುಲೈಯಿಂದ 8 ವಿದೇಶಿ ನಗರಗಳಿಗೆ ಇಂಡಿಗೋದಿಂದ ನೇರ ವಿಮಾನ ಸೌಲಭ್ಯ …..!

ನವದೆಹಲಿ:

    ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ  ಇಂಡಿಗೋ  ಇನ್ನು ಮುಂದೆ ಲಂಡನ್, ಅಥೆನ್ಸ್, ಕೋಪನ್ ಹ್ಯಾಗನ್ ಹಾಗೂ ಇತರ 5 ನಗರಗಳಿಗೆ ನೇರ ವಿಮಾನಯಾನ  ಸೇವೆ ಪ್ರಾರಂಭಿಸಲಿದೆ. ಅಂತಾರಾಷ್ಟ್ರೀಯ ಪ್ರಯಾಣ ವಿಸ್ತರಣೆಯ ಭಾಗವಾಗಿ ಜುಲೈಯಲ್ಲಿ ಮುಂಬೈನಿಂದ ಇಂಗ್ಲೆಂಡ್‌ ಮತ್ತು ನೆದರ್‌ಲ್ಯಾಂಡ್ಸ್‌ಗೆ ಇಂಡಿಗೋ ನೇರ ವಿಮಾನ ಸಂಚಾರ ಆರಂಭವಾಗಲಿದೆ. ಆರ್ಥಿಕ ವರ್ಷ 2030ರ ವೇಳೆಗೆ ಇಂಡಿಗೋ 600ಕ್ಕೂ ಹೆಚ್ಚು ವಿಮಾನಗಳನ್ನು ಹೊಂದುವ ನಿರೀಕ್ಷೆಯಿದೆ ಎಂದು ವಿಮಾನಯಾನ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ.

    ನವದೆಹಲಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂತಾರಾಷ್ಟ್ರೀಯ ಸಂಚಾರ ವಿಸ್ತರಣೆಯನ್ನು ಮುಂದುವರಿಸುತ್ತಿರುವ ಇಂಡಿಗೋ ಪ್ರಸಕ್ತ ಹಣಕಾಸು ವರ್ಷದಲ್ಲಿ ಲಂಡನ್, ಅಥೆನ್ಸ್ ಸೇರಿದಂತೆ ಇತರ ಎಂಟು ವಿದೇಶಿ ನಗರಗಳಿಗೆ ನೇರ ವಿಮಾನಯಾನವನ್ನು ಆರಂಭಿಸಲಿದೆ. ಆರ್ಥಿಕ 2030ರ ವೇಳೆಗೆ ಇಂಡಿಗೋ ತನ್ನ ಫ್ಲೀಟ್‌ನಲ್ಲಿ 600ಕ್ಕೂ ಹೆಚ್ಚು ವಿಮಾನಗಳನ್ನು ಹೊಂದುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

   ಮೂಲಸೌಕರ್ಯಗಳ ವಿಸ್ತರಣೆಯು ಹೆಚ್ಚುತ್ತಿರುವ ಬೇಡಿಕೆ ಸಹಕಾರಿಯಾಗಲಿದೆ. ಭಾರತೀಯ ವಿಮಾನಯಾನದಲ್ಲಿ ಅಗಾಧ ಅವಕಾಶಗಳಿದ್ದು, 2025ರಿಂದ 2030ರ ವೇಳೆಗೆ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇರುವುದರಿಂದ ಅದಕ್ಕಾಗಿ ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಿಕೊಳ್ಳಲಾಗುತ್ತಿದೆ ಎಂದು ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ.

   ಮುಂಬೈಯಿಂದ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಮತ್ತು ನೆದರ್‌ಲ್ಯಾಂಡ್ಸ್‌ನ ಆಮ್ಸ್ಟರ್‌ಡ್ಯಾಮ್‌ಗೆ ವಿಮಾನಗಳು ಜುಲೈಯಲ್ಲಿ ಪ್ರಾರಂಭವಾಗಲಿದ್ದರೂ ವಿಮಾನಯಾನ ಸಂಸ್ಥೆಯು ಇನ್ನೂ 8 ವಿದೇಶಿ ತಾಣಗಳನ್ನು ಸಂಪರ್ಕಿಸಲಿದೆ. ಇದರಲ್ಲಿ ಲಂಡನ್, ಗ್ರೀಸ್‌ನ ಅಥೆನ್ಸ್, ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್, ಕಾಂಬೋಡಿಯಾದ ಸೀಮ್ ರೀಪ್ ಮತ್ತು ಮಧ್ಯ ಏಷ್ಯಾದ 4 ಸ್ಥಳಗಳು ಸೇರಿವೆ ಎಂದಿದ್ದಾರೆ.

   ವಿಮಾನಯಾನ ಸಂಸ್ಥೆಯು ತನ್ನ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಿಗಾಗಿ ನಾರ್ಸ್ ಅಟ್ಲಾಂಟಿಕ್ ಏರ್‌ವೇಸ್‌ನಿಂದ ಆರು ಬೋಯಿಂಗ್ 787-9 ವಿಮಾನಗಳನ್ನು ಗುತ್ತಿಗೆಗೆ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ.18 ವರ್ಷಗಳಿಗೂ ಹೆಚ್ಚು ಕಾಲ ಹಾರಾಟ ನಡೆಸುತ್ತಿರುವ ಇಂಡಿಗೋದ ಬೆಳವಣಿಗೆ ಮತ್ತು ಮುಂದಿನ ದಾರಿಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಎಲ್ಬರ್ಸ್, ಇನ್ನು ಹೇಳುವುದು ಇದೆ ಎಂದು ಹೇಳಿದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಗುತ್ತಿಗೆ ಪಡೆದ ಬೋಯಿಂಗ್ 787-9 ವಿಮಾನಗಳೊಂದಿಗೆ ಇಂಡಿಗೋ ಜುಲೈನಲ್ಲಿ ಮುಂಬೈಯಿಂದ ಮ್ಯಾಂಚೆಸ್ಟರ್ ಮತ್ತು ಆಮ್ಸ್ಟರ್‌ಡ್ಯಾಮ್‌ಗೆ ನೇರ ವಿಮಾನ ಸೇವೆ ನಿರ್ವಹಿಸಲಿದೆ. ಈ ಮೂಲಕ ವಿಮಾನಯಾನ ಸಂಸ್ಥೆಯು ಇಂಗ್ಲೆಂಡ್‌ ನಗರಕ್ಕೆ ದೀರ್ಘ ಪ್ರಯಾಣದ ಮೂಲಕ ಮೊದಲ ಬಾರಿಗೆ ಪ್ರವೇಶ ಮಾಡಲಿದೆ ಎಂದಿದ್ದಾರೆ.

   10 ಬಿಲಿಯನ್ ಡಾಲರ್ ಆದಾಯ ಹೊಂದಿರುವ ಇಂಡಿಗೋ ಸಂಸ್ಥೆ 90ಕ್ಕೂ ಹೆಚ್ಚು ದೇಶೀಯ ಮತ್ತು 40 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. 430ಕ್ಕೂ ಹೆಚ್ಚು ವಿಮಾನಗಳ ಫ್ಲೀಟ್‌ನೊಂದಿಗೆ ಪ್ರತಿದಿನ 2,300ಕ್ಕೂ ಹೆಚ್ಚು ಪ್ರದೇಶಗಳಿಗೆ ವಿಮಾನ ಸೇವೆಯನ್ನು ಒದಗಿಸುತ್ತಿದೆ. ಸಂಸ್ಥೆಯು ಈಗ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ವಿಸ್ತರಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಸಂಪರ್ಕ ವಿಮಾನಗಳಿಗೆ ಭಾರತವನ್ನು ಉತ್ತಮ ಸ್ಥಳವಾಗಿ ನಿರ್ಮಿಸಲು ಅಗಾಧ ಅವಕಾಶವಿದೆ ಎಂದು ಎಲ್ಬರ್ಸ್ ಹೇಳಿದ್ದಾರೆ. 

   ಪ್ರಸ್ತುತ ಭಾರತದ ಅಂತಾರಾಷ್ಟ್ರೀಯ ಸಂಚಾರದಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು ಶೇ. 45ರಷ್ಟನ್ನು ಹೊಂದಿದ್ದರೆ ಉಳಿದ ಶೇ. 55ರಷ್ಟು ವಿದೇಶಿ ವಿಮಾನಯಾನ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ ಎಂದ ಅವರು ಒಟ್ಟು ಪೈಲಟ್ ಬಲದ ಸುಮಾರು ಶೇ. 15ರಷ್ಟು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆ ಇಂಡಿಗೋ ಆಗಿದೆ ಎಂದಿದ್ದಾರೆ.

   ಇಂಡಿಗೋ ಜೂನ್‌ನಲ್ಲಿ ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘದ (IATA) 81ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಆಯೋಜಿಸಲಿದೆ. 42 ವರ್ಷಗಳ ಅನಂತರ ಈ ವಾರ್ಷಿಕ ಮಹಾಸಭೆ ಭಾರತದಲ್ಲಿ ನಡೆಯುತ್ತಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಇದರ ಮೇಲಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ವಾಯು ಸಾರಿಗೆಯಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ.

Recent Articles

spot_img

Related Stories

Share via
Copy link