ಜೂ.10ರಂದು ರೈತರಿಂದ ಹೆದ್ದಾರಿ ತಡೆ

ದಾವಣಗೆರೆ:

     ರೈತರ ಭೂಮಿ ಸ್ವಾಧೀನ ಪಡಿಸಲು ಆದೇಶ ಹೊರಡಿಸಿರುವ ಸರ್ಕಾರದ ಕ್ರಮ ವಿರೋಧಿಸಿ, ಜೂ. 10ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-4 ಅನ್ನು ತಡೆ ಮಾಡಿ ಪ್ರತಿಭಟಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ತಿಳಿಸಿದ್ದಾರೆ

     ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದರೆ, ರೈತರ ನೆರವಿಗೆ ಧಾವಿಸದ ರಾಜ್ಯ ಸರ್ಕಾರವು, ಭೂಸ್ವಾಧೀನ ಕಾಯ್ದೆ ಜಾರಿಗೆ ತಂದಿದ್ದು, ಇದು ರೈತರ ಪಾಲಿಗೆ ಮರಣಶಾಸನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಈ ರೈತ ವಿರೋಧಿ ಭೂ ಸ್ವಾಧೀನ ಕಾಯ್ದೆಗೆ ವಿರೋಧ ಪಕ್ಷವೂ ಸಹ ಪ್ರತಿರೋಧ ವ್ಯಕ್ತಪಡಿಸಿಲ್ಲ. ಹೀಗಾಗಿ ಆಡಳಿತರೂಢ ಮತ್ತು ವಿರೋಧ ಪಕ್ಷಗಳು ಸಹ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದು, ರೈತರ ಜಮೀನಿಗೆ ಕೈ ಹಾಕಿದರೆ, ನಾವು ಸುಮ್ಮನೇ ಕೂಡುವುದಿಲ್ಲ. ರಾಜ್ಯ ಸರ್ಕಾರದ ಆದೇಶ ಪ್ರತಿ ಹಿಡಿದು ಬಂದು ಭೂಸ್ವಾಧೀನ ಪ್ರಕ್ರಿಯೆಗೆ ಅಧಿಕಾರಿಗಳು ಏನಾದರೂ ಮುಂದಾದರೆ, ಅವರಿಗೆ ಹಳ್ಳಿಗಳಲ್ಲಿಯೇ ತಕ್ಕ ಶಾಸ್ತಿ ಮಾಡಿಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

     ಈ ಕೂಡಲೇ ರೈತರಿಗೆ ಮಾರಕವಾಗಿರುವ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ವಾಪಾಸ್ಸು ಪಡೆಯಬೇಕು. ಬರಪರಿಹಾರ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿಮಾಡಬೇಕು ರೈತರ ಅನುಮತಿ ಇಲ್ಲದೇ ಯಾವುದೇ ಕಾರಣಕ್ಕೂ ಭೂ ಸ್ವಾಧೀನ ಪಡೆಸಿಕೊಳ್ಳಬಾರದು. ಜಿಲ್ಲೆಯ ಎನ್.ಹೆಚ್.4 ನಲ್ಲಿ ಬರುವ ಹಳ್ಳಿಗಳಿಗೆ ಓವರ್ ಬ್ರಿಡ್ಜ್, ಯುಟರ್ನ್, ಸೇವಾ ರಸ್ತೆ ಅಭಿವೃದ್ಧಿ ಪಡಿಸಬೇಕು. ಹಳ್ಳಿಯಿಂದ ಹಳ್ಳಿಗೆ ಹೋಗುವ, ಹಾಗೂ ಜಮೀನುಗಳಿಗೆ ಹೋಗುವ ರೈತರ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ರೈತರ ಸಂಪೂರ್ಣ ಸಾಲಮನ್ನ ಮಾಡಬೇಕು. ಭತ್ತಕ್ಕೆ ಖರೀದಿ ಕೇಂದ್ರ ತೆರೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಹೆದ್ದಾರಿ ತಡೆ ಚಳವಳಿ ಹಮ್ಮಿಕೊಂಡಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

     ಸುದ್ದಿಗೋಷ್ಠಿಯಲ್ಲಿ ಹಾಳೂರು ನಾಗರಾಜ್, ಆವರಗೆರೆ ಬಸವರಾಜ್, ಹುಚ್ಚವ್ವನಹಳ್ಳಿ ಗಣೇಶ್, ಮಲ್ಲಶೆಟ್ಟಿಹಳ್ಳಿ ಹನುಮೇಶ್, ಅಜ್ಜಯ್ಯ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap