ಚಳ್ಳಕೆರೆ
ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರೈತರ ಹಿತವನ್ನು ಕಾಯುವಲ್ಲಿ ಬದ್ದವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ನೇತೃತ್ವದಲ್ಲಿ ರೈತ ಸಾಲವನ್ನು ಮನ್ನಾ ಮಾಡುವಲ್ಲಿ ಸರ್ಕಾರ ಯಶಸ್ಸಿಯಾಗಿದೆ. ಖಾಸಗಿ ಸಾಲ ಮನ್ನಾಕ್ಕೂ ಸಹ ಸರ್ಕಾರ ಆದೇಶ ನೀಡಿದ್ದು, ಈ ಸರ್ಕಾರ ಸಂಪೂರ್ಣವಾಗಿ ರೈತರನ್ನು ಸದೃಢಗೊಳಿಸುವ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಬುಧವಾರ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಮೀನುಗಾರಿಕೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಹಾಗೂ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ರೈತರಿಗೆ ಕೃಷಿ ಇಲಾಖೆ ಹಾಗೂ ಇನ್ನಿತರೆ ಎಲ್ಲಾ ಇಲಾಖೆಗಳು ಹೆಚ್ಚಿನ ಸೌಲಭ್ಯವನ್ನು ನೀಡುವಲ್ಲಿ ಮುಂದಾಗಬೇಕು.
ಯಾವುದೇ ಸಣ್ಣ ಕಾರಣ ಒಡ್ಡಿ ರೈತರ ಅರ್ಜಿಗಳನ್ನು ತಿರಸ್ಕರಸದೆ ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕಳೆದ ಹಲವಾರು ವರ್ಷಗಳಿಂದ ಬರದ ಬೇಗುದಿಯಲ್ಲಿರುವ ರೈತ ಸಮುದಾಯಕ್ಕೆ ಇಲಾಖೆವತಿಯಿಂದ ಮತ್ತಷ್ಟು ಸೌಲಭ್ಯಗಳನ್ನು ನೀಡುವಲ್ಲಿ ಸಕರಾತ್ಮಕ ಚಿಂತನೆ ನಡೆಸಬೇಕೆಂದು ಮನವಿ ಮಾಡಿದರು. ಕೇಂದ್ರ ಸರ್ಕಾರದ ಫಸಲ್ ಭಿಮಾ ಯೋಜನೆ ಅವೈಜ್ಞಾನಿಕತೆಯಿಂದ ಕೂಡಿದ್ದು, ರೈತ ಹಿತಕ್ಕಾಗಿ ಈ ಯೋಜನೆಯಲ್ಲಿ ಮತ್ತಷ್ಟು ಸುಧಾರಣೆಯನ್ನು ತರುವ ಅವಶ್ಯಕತೆ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ, ಚಳ್ಳಕೆರೆ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ತಳಕು ಮತ್ತು ನಾಯಕನಹಟ್ಟಿ ಹೋಬಳಿಯಲ್ಲೂ ಸಹ ಇದೇ ಪರಿಸ್ಥಿತಿ ಮುಂದುವರೆದಿದೆ. ರೈತರಿಗೆ ನೆರವಾಗಲು ಕೃಷಿ ಹೊಂಡ ನಿರ್ಮಾಣಕ್ಕೆ ಇಲಾಖೆ ಸಹಕಾರ ನೀಡಲಿದೆ. ರೈತರು ಕೃಷಿ ಇಲಾಖೆ ಮಾರ್ಗದರ್ಶನದಲ್ಲಿ ಕೃಷಿ ಹೊಂದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ರೈತರ ಬೆಳೆ ಹಾನಿ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಫಸಲ್ ಭಿಮಾ ಯೋಜನೆಯಡಿ ತಾಲ್ಲೂಕಿನಾದ್ಯಂತ ಸುಮಾರು 2 ಕೋಟಿಗೂ ಹೆಚ್ಚು ಪರಿಹಾರವನ್ನು ರೈತ ಸಮುದಾಯ ಪಡೆದಿದೆ ಎಂದರು. ರಾಜ್ಯ ಸರ್ಕಾರ ಪ್ರತಿಯೊಬ್ಬ ರೈತ ಭೂಮಿಯ ಫಲವತ್ತತೆಯನ್ನು ಸದೃಢಗೊಳಿಸಲು ಮಣ್ಣು ಪರೀಕ್ಷೆ ಮೂಲಕ ರೈತರಿಗೆ ಮಾಹಿತಿ ನೀಡಿಲಿದೆ. ಈಗಾಗಲೇ ತಾಲ್ಲೂಕಿನಾದ್ಯಂತ ಇರುವ ರೈತರು ತಮ್ಮ ಜಮೀನುಗಳ ಮಣ್ಣಿನ ಪರೀಕ್ಷೆ ತಪ್ಪದೆ ನಡೆಸುವಂತೆ ಸೂಚಿಸಿದರು.
ಈಗಾಗಲೇ ತಾಲ್ಲೂಕಿನಾದ್ಯಂತ 436 ಕೃಷಿ ಹೊಂದ ನಿರ್ಮಾಣಕ್ಕೆ ಆದೇಶ ಹೊರಡಿಸಿದ್ದು, ಪ್ರತಿಯೊಂದು ಹೋಬಳಿಯಲ್ಲೂ 100ಕ್ಕೂ ಹೆಚ್ಚು ಕೃಷಿ ಹೊಂಡ ನಿರ್ಮಾಣ ಮಾಡುವ ಯೋಜನೆ ಸಿದ್ದಪಡಿಸಿದೆ. ತಾಡಪಾಲುಗಳ ಬೇಡಿಕೆ ಹೆಚ್ಚಿದ್ದು 903 ಅರ್ಜಿಗಳು ಬಂದಿದ್ದು 719 ಅರ್ಜಿದಾರರಿಗೆ ಲಾಟರಿ ಮೂಲಕ ತಾಡಪಾಲು ವಿತರಣೆ ಮಾಡಲಾಗುವುದು ಎಂದರು. ಹೆಚ್ಚಿನ ವಿವರಗಳಿಗೆ ರೈತ ಸಂಪರ್ಕ ಕೇಂದ್ರಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ಸದಸ್ಯರಾದ ಸಣ್ಣಸೂರಯ್ಯ, ಸಮರ್ಥರಾಯ, ನಗರಸಭಾ ಸದಸ್ಯರಾದ ಜಿ.ಮಲ್ಲಿಕಾರ್ಜುನ, ಬಿ.ಟಿ.ರಮೇಶ್ಗೌಡ, ಚಳ್ಳಕೇರಪ್ಪ, ಉಪಕೃಷಿ ನಿರ್ದೇಶಕಿ ಡಾ.ಸುಜಾತ, ಡಾ. ರುದ್ರೇಗೌಡ, ಕೃಷಿಕ ಸಮಾಜದ ನಿರ್ದೇಶಕ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








