ಚಿತ್ರದುರ್ಗ:
33 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಬಸವೇಶ್ವರ ಪುನರ್‍ಜ್ಯೋತಿ ಐ.ಬ್ಯಾಂಕ್, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ಜೋಗಿಮಟ್ಟಿ ರಸ್ತೆಯಲ್ಲಿರುವ ಪಟ್ಟದಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ನುರಿತ ನೇತ್ರ ತಜ್ಞ ಡಾ.ಆರ್.ಕೃಷ್ಣಮೂರ್ತಿ 75 ಮಂದಿಯ ನೇತ್ರ ತಪಾಸಣೆ ನಡೆಸಿದರು. ಅಗತ್ಯವಿರುವ 15 ಜನರಿಗೆ ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು.
ಬಸವೇಶ್ವರ ಪುನರ್‍ಜ್ಯೋತಿ ಐ ಬ್ಯಾಂಕ್ ಸ್ಥಾಪಕ ಅಧ್ಯಕ್ಷೆ ಗಾಯತ್ರಿ ಶಿವರಾಂ ಶಿಬಿರ ಕುರಿತು ಮಾತನಾಡಿ ಯಾರಾದರೂ ಮೃತಪಟ್ಟಾಗ ಮಣ್ಣಿನಲ್ಲಿ ಹೂಳುವ ಇಲ್ಲವೆ ದಹಿಸುವ ಮೊದಲು ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಹೊಸ ಬೆಳಕು ನೀಡಿ ಅಂಧತ್ವವನ್ನು ನಿವಾರಣೆ ಮಾಡಬೇಕೆಂದು ವಿನಂತಿಸಿದರು.
33 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ನಡೆಸುತ್ತಿರುವ ಉಚಿತ ನೇತ್ರ ತಪಾಸಣೆಯ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಂಡು ನೇತ್ರಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಜಾಗೃತಿ ಮೂಡಿಸಿದರು.
ಬಸವೇಶ್ವರ ಪುನರ್‍ಜ್ಯೋತಿ ಐ ಬ್ಯಾಂಕ್‍ನ ಕಾರ್ಯದರ್ಶಿ ಪಿ.ಬಿ.ಶಿವರಾಂ, ಸಹ ಕಾರ್ಯದರ್ಶಿ ಟಿ.ವೀರಭದ್ರಸ್ವಾಮಿ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಸ್ಥಾನ ಟ್ರಸ್ಟ್‍ನ ಕ್ಯಾತಣ್ಣ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.