ಝಣ ಝಣ ಕಾಂಚಾಣದ ಸದ್ದು

ತುಮಕೂರು:

      ಮತದಾರರನ್ನು ಓಲೈಸುವ ವಿವಿಧ ಹಂತದ ಆಮಿಷಗಳು ಈಗ ಮುಕ್ತಾಯ ಹಂತಕ್ಕೆ ಬಂದಿದೆ. ಕಳೆದ ಒಂದು ವಾರದಿಂದ ತರಾವರಿ ಪ್ರಚಾರಗಳು ವಾರ್ಡ್‍ವಾರು ನಡೆದಿದ್ದವು. ಬಹಿರಂಗ ಪ್ರಚಾರ, ರೋಡ್ ಶೋ ಮನೆ ಮನೆಗಳಿಗೆ ಭೇಟಿ ನಡುವೆ ಉಡುಗೊರೆಗಳು, ವಸ್ತ್ರ, ಬಟ್ಟಲು ಇತ್ಯಾದಿಗಳ ಜೊತೆಗೆ ಯಾತ್ರಾ ಸ್ಥಳಗಳಿಗೆ ಮತದಾರರನ್ನು ಕರೆದುಕೊಂಡು ಹೋಗುವ ಪ್ರಕ್ರಿಯೆಗಳೂ ನಡೆದು ಹೋದವು.

      ಮತದಾನಕ್ಕೆ ಇನ್ನೊಂದು ದಿನ ಮಾತ್ರವೇ ಉಳಿದಿರುವಾಗ ಬೇರೆಲ್ಲ ಆಸೆ, ಆಮಿಷಗಳನ್ನು ಬದಿಗಿಟ್ಟು ಕೊನೆಯ ಹಂತದ ಪ್ರಯತ್ನ ಎಂಬಂತೆ ಹಣ ಹರಿದಾಡುತ್ತಿರುವ ವದಂತಿಗಳು ನಿನ್ನೆಯಿಂದಲೇ ಹೆಚ್ಚಾಗಿ ಕೇಳಿ ಬರುತ್ತಿವೆ. ಕಾಂಚಾಣ ಹಂಚುವಿಕೆ ವಿಷಯದಲ್ಲಿ ಒಂದೊಂದು ಅಭ್ಯರ್ಥಿಗಳದ್ದು ಒಂದೊಂದು ನಿರ್ಧಾರ. ಕೆಲವು ಅಭ್ಯರ್ಥಿಗಳು 2000 ರೂ.ಗಳವರೆಗೂ ಮನೆಗಳಿಗೆ ಹಂಚಿದ್ದಾರೆಂದು ಕೇಳಿಬರುತ್ತಿದೆ.

      ಮತ್ತೆ ಕೆಲವರು 1000 ರೂ. ಹಂಚಿದ್ದಾರಂತೆ. ಅತ್ಯಂತ ಕಡಿಮೆ ಎಂದರೆ 500 ರೂ.ಗಳು. ಯಾವ್ಯಾವ ಪ್ರದೇಶಗಳಲ್ಲಿ ಕಾಂಚಾಣ ಹರಿದಾಡಿದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಚುನಾವಣೆಗಳು ಬಂದಿತೆಂದರೆ ಇಂತಹ ಪ್ರದೇಶಗಳಲ್ಲಿ ಕಾಂಚಾಣ ಹರಿದಾಡುವುದು ಸಾಮಾನ್ಯ. ಅದಕ್ಕಾಗಿಯೇ ಕೆಲವು ಗುಂಪುಗಳು ಸೃಷ್ಟಿಯಾಗಿಬಿಡುತ್ತವೆ. ರಾಜಕಾರಣಿಗಳು, ಅಭ್ಯರ್ಥಿಗಳು ಅವರನ್ನು ಸಮಾಧಾನಿಸುತ್ತಲೇ ಹಣ ಹಂಚುವ ಪ್ರಕ್ರಿಯೆಗಳಿಗೆ ಮುಂದಾಗುತ್ತಾರೆ. ಈಗ ಎರಡು ದಿನಗಳಿಂದ ನಡೆಯುತ್ತಿರುವುದು ಅದೆ.

      ಕೆಲವು ವಾರ್ಡ್‍ಗಳಲ್ಲಿ ಅಲ್ಲಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. ನಮ್ಮ ವಾರ್ಡ್‍ನಲ್ಲಿ ನಮಗಿನ್ನೂ ಹಣವೇ ಬಂದಿಲ್ಲ ಎಂಬ ಮಾತುಗಳಿಗೆ ಕೊರತೆಯಿಲ್ಲ. ಇನ್ನೂ ಒಂದು ದಿನ ಸಮಯವಿದೆ, ಕಾದು ನೋಡಿ ಎಂದೆಲ್ಲಾ ಕೆಲವರು ಸಮಾಧಾನಿಸಿರುವ ಪ್ರಸಂಗಗಳು ನಡೆದಿವೆ. ಕಾಂಚಾಣ ಬರಲಿಲ್ಲವೆಂದರೆ ಮತ್ತೊಬ್ಬ ಅಭ್ಯರ್ಥಿಯನ್ನು ನೋಡಿಕೊಳ್ಳುತ್ತೇವೆ ಎಂದಿರುವ ಉದಾಹರಣೆಗಳೂ ಇವೆ. ಇಂತಹ ಪ್ರಹಸನಗಳಿಂದ ಕೆಲವು ಅಭ್ಯರ್ಥಿಗಳು ರೋಸಿ ಹೋಗಿದ್ದಾರೆ ಕೂಡ.

      ಕೆಲವರು ಉಡುಗೊರೆಗಳನ್ನು ನೀಡಿದ್ದಾರೆ. ಮತ್ತೆ ಕೆಲವರು ಹಣ ಹಂಚಿದ್ದಾರೆ. ಇನ್ನು ಕೆಲವರು ಬಾಡೂಟ ಮಾಡಿಸಿದ್ದಾರೆ. ಹೊಟ್ಟೆತುಂಬ ತಿಂಡಿ, ಊಟ, ಬಿರ್ಯಾನಿ, ಕೈಗೆ ಕಾಸು ಬಾಟಲು ಇವೆಲ್ಲವೂ ನಡೆದು ಹೋಗಿದೆಯಂತೆ. ಯಾವ್ಯಾವ ಅಭ್ಯರ್ಥಿಗಳು ಅದೆಷ್ಟು ಖರ್ಚು ಮಾಡಿಕೊಂಡಿದ್ದಾರೋ? ಯಾರ್ಯಾರು ವಾಗ್ದಾನ ಮಾಡಿದ್ದಾರೋ ನಿಜವಾದ ಬಣ್ಣ ಗೊತ್ತಾಗುವುದು ಮತ ಎಣಿಕೆಯ ದಿನವೇ.
ಹಣದ ಮುಂದೆ ಬೇರೇನೂ ಇಲ್ಲ

      ಜಾತಿ ಮತ್ತು ಹಣದ ಮುಂದೆ ಬೇರೆಲ್ಲವೂ ಗೌಣವಾಗುತ್ತಿವೆ. ಹಣದ ಮುಂದೆ ಜಾತಿಯೂ ಲೆಕ್ಕಕ್ಕೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡದಿರುವುದೇ ಲೇಸು ಎನ್ನುತ್ತಾರೆ ಕೆಲವು ಪ್ರಜ್ಞಾವಂತ ಮತದಾರರು. ಜನರ ಅಪೇಕ್ಷೆಗೆ ತಕ್ಕಂತೆ ಅಭ್ಯರ್ಥಿಗಳು ಬದಲಾಗುತ್ತಾರೆ. ಜನರ ಮನೋಭಾವ ಬದಲಿಸುವವರು ರಾಜಕೀಯ ನಾಯಕರೇ ಆಗಿರುತ್ತಾರೆ. ಹೀಗಿರುವಾಗ ಚುನಾವಣೆಗಳು ಅಭಿವೃದ್ಧಿಗೋ… ಹಣಕ್ಕೋ.. ಎಂದು ಕೇಳಿದರೆ ಅವರವರ ಮನಸ್ಥಿತಿಗೆ ತಕ್ಕಂತ ಉತ್ತರಗಳು ಬರುತ್ತವೆ.

      ಚುನಾವಣೆಗೆ ಸ್ಪರ್ಧಿಸುವವರು ಏನೆಲ್ಲಾ ಖರ್ಚು ಮಾಡಿಕೊಳ್ಳಬಹುದು. ಆದರೆ ಅವರ ಅಂತಿಮ ಗುರಿ ಆ ವಾರ್ಡಿನ ಅಭಿವೃದ್ಧಿ ಆಗಿರಬೇಕಷ್ಟೇ. ಮುಂದಿನ ಯೋಜನೆಗಳು ಮತ್ತು ಯೋಚನೆಗಳು ಅವರಲ್ಲಿ ಇರಬೇಕು. ಆ ಬಡಾವಣೆಯ ನಾಗರಿಕ ಸಂಘಟನೆಗಳು ಇಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು. ಆಗ ಮಾತ್ರವೇ ಓರ್ವ ಜನಪ್ರತಿನಿಧಿಯಿಂದ ನಿಜವಾದ ಸೇವೆಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಲು ಸಾಧ್ಯ. ಮತ್ತೆ ಈಗಲೂ 500 ರೂ.ಗಳಿಗೆ ಕೈ ಯೊಡ್ಡಿದರೆ ಮುಂದಿನ 5 ವರ್ಷಗಳ ಕಾಲ ಮೌನವಾಗಿಯೇ ಇರಬೇಕಾಗುತ್ತದೆ. 500 ರೂ. ಪಡೆದ ಮೇಲೆ ಪ್ರಶ್ನಿಸುವ ಮನೋಭಾವ ಹೇಗೆ ಬಂದೀತು? ವಾರ್ಡ್‍ನ ಬೀದಿ ಬೀದಿಗಳಲ್ಲಿ ನೀರನ ಅಭಾವ, ವಿದ್ಯುತ್ ಸಮಸ್ಯೆ, ಚರಂಡಿ, ರಸ್ತೆ, ಇತ್ಯಾದಿ ಮೂಲಭೂತ ಸೌಕರ್ಯಗಳ ಚಿಂತನೆ ಮತದಾರರದ್ದಾಗಬೇಕು.

      ಜಾತಿ ಮತ್ತು ಹಣದ ಮುಂದೆ ಬೇರೆಲ್ಲವೂ ಗೌಣವಾಗುತ್ತಿವೆ. ಹಣದ ಮುಂದೆ ಜಾತಿಯೂ ಲೆಕ್ಕಕ್ಕೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡದಿರುವುದೇ ಲೇಸು ಎನ್ನುತ್ತಾರೆ ಕೆಲವರು. ಜನರ ಅಪೇಕ್ಷೆಗೆ ತಕ್ಕಂತೆ ಅಭ್ಯರ್ಥಿಗಳು ಬದಲಾಗುತ್ತಾರೆ. ಜನರ ಮನೋಭಾವ ಬದಲಿಸುವವರು ರಾಜಕೀಯ ನಾಯಕರೇ ಆಗಿರುತ್ತಾರೆ. ಹೀಗಿರುವಾಗ ಚುನಾವಣೆಗಳು ಅಭಿವೃದ್ಧಿಗೋ… ಹಣಕ್ಕೋ.. ಎಂದು ಕೇಳಿದರೆ ನೀವೇ ಅರ್ಥ ಮಾಡಿಕೊಳ್ಳಿ ಎಂಬ ಮುಗುಂ ಉತ್ತರಗಳು ಬರುತ್ತವೆ.

 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap