ಶಾರ್ಜಾ:
ಸೋಮವಾರ ರಾತ್ರಿ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಯುಎಇ ವಿರುದ್ಧ ಅಫ್ಘಾನಿಸ್ತಾನ ತ್ರಿಕೋನ ಸರಣಿಯ ಪಂದ್ಯದಲ್ಲಿ 38 ರನ್‌ಗಳಿಂದ ಮೊದಲ ಗೆಲುವು ದಾಖಲಿಸಿತು. ಪಂದ್ಯದ ಗೆಲುವಿನ ರುವಾರಿ ನಾಯಕ ರಶೀದ್ ಖಾನ್ ಅವರು ಇದೇ ಪಂದ್ಯದಲ್ಲಿ ವಿಶ್ವ ದಾಖಲೆಯೊಂದನ್ನು ಕೂಡ ನಿರ್ಮಿಸಿದರು.
ಎದುರಾಳಿ ತಂಡದ ಎಥಾನ್ ಡಿ’ಸೋಜಾ, ಆಸಿಫ್ ಖಾನ್ ಮತ್ತು ಧ್ರುವ್ ಪರಾಶರ್ ಅವರ ವಿಕೆಟ್‌ಗಳನ್ನು ಕಬಳಿಸಿದ ರಶೀದ್ ಖಾನ್, ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ನ್ಯೂಜಿಲ್ಯಾಂಡ್ ತಂಡದ ಹಿರಿಯ ವೇಗಿ ಟಿಮ್ ಸೌಥಿ ಹೆಸರಿನಲ್ಲಿತ್ತು. ಸೌಥಿ 164 ವಿಕೆಟ್ ಕಿತ್ತಿದ್ದಾರೆ. ರಶೀದ್ ಖಾನ್ 165 ವಿಕೆಟ್ ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಮೈಲುಗಲ್ಲನ್ನು ಅವರು ಕೇವಲ 98 ಪಂದ್ಯಗಳಲ್ಲಿ ತಲುಪಿದರು.
ರಶೀದ್ ಖಾನ್ ಎಲ್ಲಾ ಟಿ20 ಪಂದ್ಯಗಳಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನೂ ಹೊಂದಿದ್ದಾರೆ. ಅತಿ ಕಡಿಮೆ ಟಿ20 ಮಾದರಿಯಲ್ಲಿ 664 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಇದು ಎರಡೂ ತಂಡಗಳಿಗೆ ತಮ್ಮ ಮೊದಲ ಅಂಕಗಳನ್ನು ಗಳಿಸಲು ಒಂದು ಅವಕಾಶವಾಗಿತ್ತು. ರಹಮಾನುಲ್ಲಾ ಗುರ್ಬಾಜ್ ಅವರ ಆರಂಭಿಕ ವಿಕೆಟ್ ಕಳೆದುಕೊಂಡ ನಂತರ, ಸೆಡಿಕುಲ್ಲಾ ಅಟಲ್ ಮತ್ತು ಇಬ್ರಾಹಿಂ ಜದ್ರಾನ್ ಅಫ್ಘಾನ್ ತಂಡಕ್ಕೆ ನೆರವಾದರು. ಉಭಯ ಆಟಗಾರರ ಅರ್ಧಶತಕದಿಂದ ತಂಡ 4 ವಿಕೆಟ್‌ಗೆ 188 ರನ್ ಗಳಿಸಿತು. ಅಟಲ್ 54 ರನ್ ಗಳಿಸಿದರೆ, ಜದ್ರಾನ್ 63 ರನ್ ಗಳಿಸಿದರು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಯುಎಇ 8 ವಿಕೆಟ್‌ಗೆ 150 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು. ಯುಎಇ ಪರ ನಾಯಕ ಮುಹಮ್ಮದ್ ವಸೀಮ್(67) ಮತ್ತು ರಾಹುಲ್ ಚೋಪ್ರಾ(52) ಅರ್ಧಶತಕಗಳನ್ನು ಗಳಿಸಿದರು. ರಶೀದ್ ಖಾನ್ 21ಕ್ಕೆ 3 ವಿಕೆಟ್ ಕೆಡವಿದರು.








