ಬೆಂಗಳೂರು:
ಬಿಬಿಎಂಪಿ ಗುತ್ತಿಗಾರರ ಬಳಿ ಲಂಚ ತೆಗೆದುಕೊಂಡಿಲ್ಲ ಎನ್ನುವುದಾದರೇ ಹೋಗಿ ಅಜ್ಜಯ್ಯನ ಬಳಿ ಹೋಗಿ ಆಣೆ ಮಾಡು. ನಿಮಗೆ ತಾಕತ್, ಧಮ್ ಇದ್ದರೆ ಅಜ್ಜಯ್ಯನ ಬಳಿ ಹೋಗಿ ಪ್ರಮಾಣ ಮಾಡಿ ಎಂದು ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ್ ನಾರಾಯಣ್ ಅವರು ಸವಾಲು ಹಾಕಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಮಿಷನ್ ಕಾಳಗ ತಾರಕಕ್ಕೇರಿದೆ. ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ತಾಕತ್, ಧಮ್ ಇದ್ರೆ ಅಜ್ಜಯ್ಯನ ಮುಂದೆ ಆಣೆ ಮಾಡಲಿ, ಡಿಕೆಶಿ ಎಲ್ಲದಕ್ಕೂ ಅಜ್ಜಯ್ಯನ ಬಳಿ ಹೋಗ್ತಾರೆ, ಈಗ ಹೋಗಪ್ಪ ಅಜ್ಜಯ್ಯನ ಬಳಿ ಹೋಗಿ ಆಣೆ ಮಾಡಪ್ಪ ಎಂದು ಸವಾಲೆಸೆದರು. ಅದಲ್ಲದೇ ಡಿಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿ ಸಚಿವರಲ್ಲ, ಅವರು ಬೆಂಗಳೂರು ನಿರ್ನಾಮ ಮಂತ್ರಿ, ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಡಿಕೆ ಶಿವಕುಮಾರ್ ಕಳಂಕ ತರೋದುಬೇಡ ಎಂದರು.
ಕಮಿಷನ್ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ಗೆ ತಿರುಗೇಟು ನೀಡಿರುವ ಅಶ್ವತ್ಥ ನಾರಾಯಣ, ನೀನು ರಾಜಕೀಯ ನಿವೃತ್ತಿ ಆದರೂ ಆಗು, ಕಾಂಗ್ರೆಸ್ ಅನ್ನು ನಿರ್ನಾಮ ಆದರೂ ಮಾಡು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಲುವಾಗಿ ಎಟಿಎಂ ಸರ್ಕಾರ ಆಗಿದೆ, ಕಾಂಗ್ರೆಸ್‌ನಲ್ಲಿ ಸಿಎಂ, ಸೂಪರ್ ಸಿಎಂ, ಶ್ಯಾಡೋ ಸಿಎಂ ಇದ್ದಾರೆ, ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್‌ನಲ್ಲಿ ವೈಎಸ್‌ಟಿ, ಜಿಎಸ್‌ಟಿ ಇದೆ, ಸುರ್ಜೇವಾಲಾ ಬರ್ತಾರೆ, ಟಾರ್ಗೆಟ್ ಕೊಡ್ತಾರೆ, ಕಲೆಕ್ಷನ್ ಮಾಡ್ತಾರೆ, ಕಾಂಗ್ರೆಸ್‌ನವರು ಹವಾಲಾ ಮಾಡ್ತಾರೆ ಎಂಬ ಆರೋಪ ಇದೆ, ಡಿಕೆಶಿ ಟ್ರ್ಯಾಕ್ ರೆಕಾರ್ಡ್ ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು ಜೊತೆಗೆ ಕಮಿಷನ್ ವಿಚಾರವಾಗಿ ಸೋಮವಾರ ರಾಜ್ಯಪಾಲರ ಭೇಟಿ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಂಡ ಎರಡೂವರೆ ತಿಂಗಳಲ್ಲೇ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೊಲೆ, ಸುಲಿಗೆ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಟೀಕಿಸಿದ ಅವರು, ಭರವಸೆ, ವಿಶ್ವಾಸ ಮೂಡಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಬಗ್ಗೆ ಜನತೆ ಸಂಪೂರ್ಣವಾಗಿ ನಿರಾಶರಾಗಿದ್ದಾರೆ. ಸ್ವಚ್ಛ, ಭ್ರಷ್ಟಾಚಾರರಹಿತ ಆಡಳಿತದ ಭರವಸೆ ಕೊಟ್ಟಿದ್ದರು. ಸಿಎಂ ಜೊತೆ ಹಲವಾರು ಸಿಎಂಗಳು, ಶ್ಯಾಡೋ ಸಿಎಂಗಳಿದ್ದು, ಎಟಿಎಂ ಸರಕಾರವೆಂದು ಪ್ರಖ್ಯಾತಿ ಪಡೆದಿದೆ ಎಂದು ವಾಗ್ದಾಳಿ ನಡೆಸಿದರು.