ಡಿಕೆಶಿ ಗೆ ಹೈಕೋರ್ಟ್‌ ನಿಂದ ರಿಲೀಫ್

ಬೆಂಗಳೂರು

     ಆದಾಯ ಮೀರಿ ಆಸ್ತಿಯನ್ನು ಗಳಿಕೆ ಮಾಡಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿದ್ದ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯು ಮತ್ತೊಮ್ಮೆ ವಿಸ್ತರಣೆಯಾಗಿದೆ.

     ಈ ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಏಕಸದಸ್ಯ ಪೀಠವು ತಡೆಯಾಜ್ಞೆ ವಿಸ್ತರಣೆ ಮಾಡಿದೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರು ಸದ್ಯಕ್ಕೆ ನಿರಾಳರಾಗಿದ್ದಾರೆ.

    ಈ ಹಿಂದೆ ನ್ಯಾ. ನಟರಾಜನ್ ಪೀಠದಲ್ಲಿ ವಿಚಾರಣೆ ನಡೆದಿತ್ತು. ಇದೀಗ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿದೆ. ಹೀಗಾಗಿ ಯಾವ ಪೀಠದಲ್ಲಿ ವಿಚಾರಣೆ ಮುಂದುವರಿಸಬೇಕು ಎಂದು ಸಿಜೆ ನಿರ್ಧಾರ ಮಾಡಬೇಕೆಂದು ಪ್ರಕರಣವನ್ನು ಅವರಿಗೆ ವರ್ಗಾಯಿಸಲಾಗಿದೆ. ಈ ಕಾರಣದಿಂದ ಮುಂದಿನ ವಿಚಾರಣೆವರೆಗೂ ಮಧ್ಯಂತರ ತಡೆಯಾಜ್ಞೆ ಮುಂದುವರಿಸಿ ಆದೇಶವನ್ನು ವಿಸ್ತರಣೆ ಮಾಡಲಾಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಎರಡನೇ ಬಾರಿಗೆ ಹೈಕೋರ್ಟ್ ಮೇ ಅಂತ್ಯದವರೆಗೂ ತಡೆಯಾಜ್ಞೆ ನೀಡಿತ್ತು. ಇದೀಗ ಮತ್ತೆ ತಡೆಯಾಜ್ಞೆ ವಿಸ್ತರಣೆ ಮಾಡಲಾಗಿದೆ.

ಪ್ರಕರಣವೇನು?

     ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 13(2), 13(1)ಇ ಅಡಿಯಲ್ಲಿ 2020ರ ಅಕ್ಟೋಬರ್ 3ರಂದು ಸಿಬಿಐ ವತಿಯಿಂದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಈ ಪ್ರಕರಣ ರದ್ದು ಕೋರಿ ಡಿ.ಕೆ. ಶಿವಕುಮಾರ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ಶುಕ್ರವಾರ (ಜೂನ್ 2) ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಈ ತಡೆಯಾಜ್ಞೆಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದೆ.

    ಈ ತಡೆಯಾಜ್ಞೆ ತೆರವು ಮಾಡುವಂತೆ ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತನಿಖೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡಿ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು. ಜತೆಗೆ ತಡೆಯಾಜ್ಞೆ ತೆರವಿಗೆ ಹೈಕೋರ್ಟ್ನಲ್ಲೇ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link