ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ಹತ್ಯೆ: 3 SDPI ಕಾರ್ಯಕರ್ತರ ಬಂಧನ

ಬೆಂಗಳೂರು:

2020ರ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ಮೂವರು ಕಾರ್ಯಕರ್ತರನ್ನು ಗೋವಿಂದಪುರ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.ಹತ್ಯೆಯಾದ ವ್ಯಕ್ತಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯ ಪತ್ನಿಯಕೊಂದಿಗೆ ಸಂಬಂಧ ಹೊಂದಿದ್ದು, ಆಕೆಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.30 ವರ್ಷದ ಇರ್ಫಾನ್ ಖಾನ್ ಎಂಬ ವ್ಯಕ್ತಿಯನ್ನು ಏಪ್ರಿಲ್ 22 ರಂದು ರಾತ್ರಿ 11.50 ರ ಸುಮಾರಿಗೆ ಎಚ್‌ಬಿಆರ್ ಲೇಔಟ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಪ್ರಸ್ತುತ ಬಂಧನಕ್ಕೊಳಗಾಗಿರುವ ಮೂವರನ್ನು ಉಮರ್‌ನಗರ ನಿವಾಸಿಗಳಾದ ಮೊಹಮ್ಮದ್ ಓವೈಸ್ (48), ಮೊಹಮ್ಮದ್ ಹನೀಫ್ (34) ಮತ್ತು ರಶಾದ್‌ನಗರದ ಅಬ್ದುಲ್ ಅಲೀಮ್ (37) ಎಂದು ಗುರುತಿಸಲಾಗಿದೆ.ಮೈಸೂರಿನಲ್ಲಿ ಮೂವರನ್ನೂ ಬಂಧಿಸಲಾಗಿದ್ದು, ಮೂವರು ಎಸ್‌ಡಿಪಿಐ ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ. ಮೂವರು ಈ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೂ ನಂಟು ಹೊಂದಿದ್ದರು ಎಂದು ತಿಳಿದುಬಂದಿದೆ. ಇದೀಗ ಈ ಮೂವರು ಆರೋಪಿಗಲು ಬೇರೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ,

ಗಲಭೆ ಪ್ರಕಣಣದಲ್ಲಿ ಹತ್ಯೆಯಾದ ಇರ್ಫಾನ್ ಖಾನ್ ಹಾಗೂ ನಾಗವಾರದ ಅಬ್ಬಾಸ್ ನನ್ನು ಎನ್ಐಎ ಬಂಧನಕ್ಕೊಳಪಡಿಸಿತ್ತು. ಬಳಿಕ ಇಬ್ಬರೂ SDPI ಕಾರ್ಯಕರ್ತರಾಗಿದ್ದು, ಜೈಲಿಗೆ ಹೋದ ಬಳಿಕ ಇಬ್ಬರೂ ಆಪ್ತರಾಗಿದ್ದರು.ಈ ನಡುವೆ ಇರ್ಫಾನ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದು, ಅಬ್ಬಾಸ್ ಇನ್ನೂ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿಯೇ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲಿನಿಂದ ಹೊರಬಂದ ಇರ್ಫಾನ್, ಅಬ್ಬಾರ್ ಪತ್ನಿಗೆ ಹತ್ತಿರವಾಗಿದ್ದು, ಆಕೆ ತನ್ನ ಪತಿಗೆ ವಿಚ್ಛೇದನ ನೀಡುವಂತೆ ಮಾಡಿದ್ದೇನೆ. ಬಳಿಕ ಆಕೆಯನ್ನು ವಿವಾಹವಾಗಿದ್ದಾನೆ.

ಈ ನಡುವೆ ಇವರಿಬ್ಬರ ನಡುವಿನ ಸಂಬಂಧವನ್ನು ಕೊನೆಗೊಳಿಸಲು ಅಬ್ಬಾಸ್ ಸಾಕಷ್ಟು ಯತ್ನ ನಡೆಸಿದ್ದಾನೆ. ಆದರೆ, ಸಾಧ್ಯವಾಗಿಲ್ಲ. ನಾಗವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ತನ್ನ ಸಹಚರರ ಮೂಲಕ ಇರ್ಫಾನ್”ಗೆ ಬೆದರಿಸಲು ಪ್ರಯತ್ನಿಸಿದ್ದಾನೆ. ಆದರೆ, ಇದೂ ಕೂಡ ಯಾವುದೇ ಫಲ ನೀಡದ ಕಾರಣ ಹತ್ಯೆ ಮಾಡಲು ಮೂವರಿಗೆ ಸುಪಾರಿ ಕೊಟ್ಟಿದ್ದ ಎಂದು ವರದಿಗಳು ತಿಳಿಸಿವೆ. ಇದರಂತೆ ಆಟೋದಲ್ಲಿ ಬಂದ ಆರೋಪಿಗಳು ಇರ್ಫಾನ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅಗತ್ಯವಿದ್ದರೆ ಅಬ್ಬಾರ್ ನನ್ನು ವಶಕ್ಕೆ ಪಡೆಯಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಡಿ ದೇವರಾಜ ಅವರು ತಿಳಿಸಿದ್ದಾರೆ.