ದಾವಣಗೆರೆ :
ನಗರದ ಶಿವಯೋಗ ಮಂದಿರದಲ್ಲಿ ಡಿ.17ರಿಂದ 19ರವರೆಗೆ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ 23ನೇ ವಾರ್ಷಿಕೋತ್ಸವದ ಅಂಗವಾಗಿ ನಾಟಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಭದ್ರಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.17ರಂದು ಸಂಜೆ 6 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ಜರುಗಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಎಸ್.ಎನ್.ರಂಗಸ್ವಾಮಿ ಚಿರಡೋಣಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜಣ್ಣ ಜೇವರ್ಗಿ, ಕುಮಾರ್ ಬೆಕ್ಕೇರಿ, ಮಲ್ಲಿಕಾರ್ಜುನ ಕಡಕೋಳ, ಎಸ್.ಮಲ್ಲಿಕಾರ್ಜುನ, ಎಸ್.ನೀಲಕಂಠಪ್ಪ ಭಾಗವಹಿಸುವರು. ವೇದಿಕೆ ಕಾರ್ಯಕ್ರಮದ ನಂತರ ಚಿತ್ರದುರ್ಗ ಜಮುರಾ ಕಲಾವಿದರು ಮುರುಘಾ ಶರಣರು ರಚಿಸಿರುವ ಬೆಳಕಿನೆಡೆಗೆ ನಾಟಕ ಪ್ರದರ್ಶಿಸುವರು ಎಂದರು.
ಡಿ.18ರಂದು ಜಮುರಾ ಕಲಾವಿದರು ಡಾ.ಚಂದ್ರಶೇಖರ ಕಂಬಾರ್ ರಚಿತ ಸಾಂಬಶಿವ ಪ್ರಹಸನ ಎಂಬ ನಾಟಕ ಪ್ರದರ್ಶಿಸುವರು. ಡಿ.19ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಾ.ಮ.ಬಸವರಾಜಯ್ಯ, ಬಿ.ಎನ್.ಮಲ್ಲೇಶ, ಕೆ.ಸಿ.ಲಿಂಗರಾಜು ಭಾಗವಹಿಸುವರು. ಮೈಸೂರಿನ ಸಮುರೈ ರಂಗ ತಂಡದಿಂದ ದುರ್ಯೋಧನ ನಾಟಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಮೂರು ದಿನಗಳ ಕಾಲ ನಾಟಕೋತ್ಸವದಲ್ಲಿ ರಂಗಗೀತೆಗಳ ಗಾಯನ, ಕಲಾವಿದರು ಹಾಗೂ ರಂಗಕರ್ಮಿಗಳಿಗೆ ಸನ್ಮಾನ ಇರುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಮಹೇಶ್ವರಪ್ಪ ದೊಡ್ಡಮನಿ, ನಾಗರಾಜ ಮುತ್ತಿಗೆ, ಎನ್.ಸೋಮಣ್ಣ, ಹನುಮಂತಪ್ಪ ಪವಾರ್ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ