ನವದೆಹಲಿ:
ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಹಾಟ್‌ಸ್ಟಾರ್‌ನಂತಹ ಒಟಿಟಿ ಪ್ಲಾಟ್ ಫಾರ್ಮ್‌ಗಳ ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪನ್ನಗಳು ಅಥವಾ ಅವುಗಳ ಬಳಕೆಯನ್ನು ಪ್ರದರ್ಶಿಸಿದಾಗ ತಂಬಾಕು ವಿರೋಧಿ ಆರೋಗ್ಯ ಎಚ್ಚರಿಕೆಯನ್ನು ಪರದೆಯ ಕೆಳಭಾಗದಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಎಂದು ಕೇಂದ್ರ ಸರ್ಕಾರ ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) ತಿದ್ದುಪಡಿ ನಿಯಮಗಳು 2023 ನ್ನು ಮೇ 31 ರಂದು ಸರ್ಕಾರ ಹೊರಡಿಸಿರುವುದಾಗಿ ಆರೋಗ್ಯ ರಾಜ್ಯ ಸಚಿವ ಎಸ್‌ಪಿ ಸಿಂಗ್ ಬಘೆಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ತಂಬಾಕು ಉತ್ಪನ್ನಗಳನ್ನು ಒಳಗೊಂಡಿರುವ ಯಾವುದೇ ಆನ್‌ಲೈನ್ ಕಂಟೆಂಟ್‌ನಲ್ಲಿ ಆರೋಗ್ಯ ಎಚ್ಚರಿಕೆಗಳು ಮತ್ತು ಹಕ್ಕು ನಿರಾಕರಣೆಗಳನ್ನು ಸೇರಿಸಬೇಕು. ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪನ್ನಗಳು ಅಥವಾ ಅವುಗಳ ಬಳಕೆಯನ್ನು ಪ್ರದರ್ಶಿಸಿದಾಗ ಒಟಿಟಿ ವೇದಿಕೆಯು ತಂಬಾಕು ವಿರೋಧಿ ಆರೋಗ್ಯ ಎಚ್ಚರಿಕೆಯನ್ನು ಪರದೆಯ ಕೆಳಭಾಗದಲ್ಲಿ ಪ್ರದರ್ಶಿಸಬೇಕು ಎಂದು ಅಧಿಸೂಚನೆಯಲ್ಲಿ ಹೇಳಿದೆ.