ತಡವಾಗಿ ನೀಡಿದ ಸಣ್ಣ ಪ್ಯಾಕೇಜ್: ಸಿದ್ದರಾಮಯ್ಯ

 ಬೆಂಗಳೂರು

              ಕೊರೊನ ಸೋಂಕಿನ‌ಭೀತಿಯ ಹಿನ್ನೆಲೆಯಲ್ಲಿ ವಿಳಂಬವಾಗಿಯಾದರೂ, ದೇಶದ ಬಡವರು, ರೈತರು ಮತ್ತು ಕೂಲಿಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸಿರುವುದಾಗಿ ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಪ್ಯಾಕೇಜ್ ” Too little Too Late ” ಎನ್ನುವ ಹಾಗಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

     ಜ 30ರಂದು ದೇಶದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿತ್ತು‌.ಕೊರೊನಾದಿಂದ ಗಂಭೀರ ಸ್ಥಿತಿ ನಿರ್ಮಾಣವಾಗಲಿದೆ ಸರ್ಕಾದ ನಿರ್ಲಕ್ಷ್ಯ ಮಾಡುತ್ತಿದೆ ಎಂದು ರಾಹುಲ್ ಗಾಂಧಿಯವರು ಫೆಬ್ರವರಿ 12 ರಂದು ಎಚ್ಚರಿಸಿದ್ದರು.ಹೀಗಿದ್ದರೂ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಾ ಬಂದಿರುವುದೇ ಈಗಿನ ಸ್ಥಿತಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

       ಈಗಾಗಲೇ ವಿಳಂಬವಾಗಿರುವುದರಿಂದ ಸರ್ಕಾರ ಪ್ರಕಟಿಸಿರುವ ಈ ಯೋಜನೆಗಳು ತಕ್ಷಣದಿಂದ ಜಾರಿಗೆ ತರಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕೆಂದು ಆಗ್ರಹಿಸುತ್ತೇನೆ.ಬಹಳ ಮುಖ್ಯವಾಗಿ ಸಣ್ಣ ವ್ಯಾಪಾರಿಗಳು, ಅಟೋ, ಟ್ಯಾಕ್ಸಿ ಚಾಲಕರು ವಾಹನಗಳ ಖರೀದಿಸಲು ಬ್ಯಾಂಕುಗಳಿಂದ ಸಾಲ‌ಪಡೆದಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಅವರಿಗೆ ಉದ್ಯೋಗ ಇಲ್ಲ. ಅವರ ಸಾಲವನ್ನು ಭಾಗಶಃ ಮನ್ನಾ ಮಾಡಿ ಕನಿಷ್ಠ ಮೂರು ತಿಂಗಳ ಇಎಮ್‌ಐ ಪಾವತಿಯನ್ನು ಮುಂದೂಡಬೇಕು.

     ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಕಾರ್ಮಿಕ ಇಲಾಖೆ ತುರ್ತಾಗಿ ಗಮನ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

     ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು ಮತ್ತು ಸಿಬ್ಬಂದಿ‌ ಹಾಗೂ ಬಂದ್ ಆಗಿರುವ ಹೊಟೇಲ್,ಮಾಲ್, ಚಿತ್ರಮಂದಿರಗಳ ಸಿಬ್ಬಂದಿ, ಡೆಲಿವರಿ ಬಾಯ್‌ಗಳು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿಗಳೂ ಸೇರಿದಂತೆ ಸಣ್ಣ ಕೈಗಾರಿಕೆಗಳು ಮುಚ್ಚಿವ ಇವರೆಲ್ಲರ ಉದ್ಯೋಗದಾತರು ಸಂಬಳ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆ ನಿಗಾ ವಹಿಸಬೇಕು. 

     ಮಹಿಳೆಯರ ಜನಧನ ಖಾತೆಗೆ ಮಾತ್ರ ತಲಾ ೫೦೦ ರೂ.ಗಳ ಕಂತುಗಳಲ್ಲಿ ಒಂದು ೧,೫೦೦ ರೂಪಾಯಿ ಜಮೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಈ ಸೌಲಭ್ಯವನ್ನು ಪುರುಷರಿಗೂ ವಿಸ್ತರಿಸಬೇಕು ಮತ್ತು ನೆರವಿನ ಮೊತ್ತವನ್ನು ಕನಿಷ್ಠ ೩೦೦೦ ರೂ.ಗಳಿಗೆ ಹೆಚ್ಚಿಸಬೇಕು. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಹೆಚ್ಚಿಸಬೇಕೆಂದು ಪ್ರಾರಂಭದಿಂದಲೂ ಹೇಳುತ್ತಾ ಬಂದಿದ್ದೆ. ಹಣಕಾಸು ಸಚಿವರು ಒಟ್ಟು ವಾರ್ಷಿಕ ಆರು ಸಾವಿರ ರೂಪಾಯಿಗಳಲ್ಲಿ ಎರಡು ಸಾವಿರ ರೂಪಾಯಿಯ ಒಂದು ಕಂತನ್ನು ಮುಂಗಡವಾಗಿ ಪಾವತಿಸುವುದಾಗಿ ನಿರ್ಮಲಾ‌ಸೀತಾರಾಮನ್ ಹೇಳಿದ್ದಾರೆ. ಇದು ಏನೇನೂ ಸಾಲದು. ಒಟ್ಟು ಮೊತ್ತವನ್ನು ಈಗಿನ ಆರು ಸಾವಿರ ರೂಪಾಯಿಗಳಿಂದ ಹನ್ನೆರಡು ಸಾವಿರ ರೂಪಾಯಿಗಳಿಗೆ ಏರಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

       ಆಹಾರ ಮತ್ತಿತರ ಅವಶ್ಯಕ ಸಾಮಗ್ರಿಗಳ ಮೇಲಿನ ಜಿ.ಎಸ್.ಟಿ.ಯನ್ನು ಮುಂದಿನ ಮೂರು ತಿಂಗಳ ಕಾಲ‌ ಕನಿಷ್ಢ ಶೇಕಡಾ ಐದರಷ್ಟು ಕಡಿತಗೊಳಿಸಬೇಕು.ಬಹಳ ಸಂಖ್ಯೆಯಲ್ಲಿ ಲಾಕ್ ಡೌನ್ ಗಿಂತ ಮೊದಲು ಊರಿಗೆ ಹೋಗಲಾಗದೆ ಅನಿವಾರ್ಯವಾಗಿ ಬೆಂಗಳೂರು ನಗರ ಮತ್ತು ಜಿಲ್ಲಾ‌ಕೇಂದ್ರಗಳಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗಾಗಿ ಆಶ್ರಯತಾಣಗಳನ್ನು ನಿರ್ಮಿಸಿ ಊಟ-ತಿಂಡಿಗೆ ವ್ಯವಸ್ಥೆ ಮಾಡಬೇಕು.ಬಡವರಿಗೆ ನೆರವಾಗಲು ಯೋಜನೆಗಳನ್ನು ಘೋಷಿಸಿರುದ ಜೊತೆಯಲ್ಲಿ ಕೊರೊನಾ ಸೋಂಕು ಪೀಡಿತರ ಚಿಕಿತ್ಸೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಕೇಂದ್ರ ಸರ್ಕಾರ ಹೇಳಬೇಕಾಗಿತ್ತು.

       ನಮ್ಮ ರಾಜ್ಯದ ಬೆಂಗಳೂರು,ಮೈಸೂರು,ಹಾಸನ ಮತ್ತು ಶಿವಮೊಗ್ಗದಲ್ಲಿ ಮಾತ್ರ ಕರೋನಾ ವೈರಸ್ ಪತ್ತೆ ಹಚ್ಚುವ ಐದು ಪರೀಕ್ಷಾ ಲ್ಯಾಬ್‌ಗಳಿವೆ. ಬಳ್ಳಾರಿ ಮತ್ತು ಕಲ್ಬುರ್ಗಿಗಳಲ್ಲಿ ಮಾತ್ರ ಕಫದ ಮಾದರಿ‌ ಸಂಗ್ರಹಿಸುವ ಕೇಂದ್ರಗಳಿವೆ. ಇಷ್ಟು ಮಾತ್ರ ಸಾಕೇ? ಪರಿಸ್ಥಿತಿ ಉಲ್ಭಣಿಸಿದರೆ ಏನು ಸಿದ್ಧತೆ ಇದೆ?ತಕ್ಷಣ 2-3 ಜಿಲ್ಲೆಗಳಿಗೊಂದರಂತೆಯಾದರೂ ಮುಖ್ಯವಾಗಿ,ಉತ್ತರ ಕರ್ನಾಟಕದಲ್ಲಿ ಕರೋನಾ ವೈರಸ್ ಪರೀಕ್ಷಾ ಲ್ಯಾಬ್ ಗಳನ್ನು ಪ್ರಾರಂಭಿಸಬೇಕು. 

        15 ಟೆಸ್ಟಿಂಗ್ ಕಿಟ್‌ಗಳ ಕೊರತೆಯಿಂದಾಗಿ ಸೋಂಕಿತರ ಸಂಖ್ಯೆ ನಿಖರವಾಗಿ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿಬಸಾಕಷ್ಟು ಪ್ರಮಾಣದಲ್ಲಿ ಟೆಸ್ಸಿಂಗ್ ಕಿಟ್‌ಗಳನ್ನು ಆಸ್ಪತ್ರೆಗಳಿಗೆ ಒದಗಿಸಬೇಕು.

        16. ಎಲ್ಲ ಜಿಲ್ಲೆಗಳಲ್ಲಿ ಕಫದ ಮಾದರಿ‌ ಸಂಗ್ರಹ ಕೇಂದ್ರಗಳನ್ನು ತೆರೆಯಬೇಕು. ಐಸೋಲೇಷನ್ ಕೇಂದ್ರಗಳು ಮತ್ತು ಕೃತಕ ಉಸಿರಾಟದ ವ್ಯವಸ್ಥೆಯನ್ನು ಹೆಚ್ಚಿಸಬೇಕು.ಹಾಗೂ  ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಎಲ್ಲ ಕರೋನಾ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸುವುದು ಸಾಧ್ಯವಾಗಲಾರದು. ಜಿಲ್ಲೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಕೂಡಾ ಬಳಸಿಕೊಳ್ಳಲು ಕ್ರಮಕೈಗೊಳ್ಳಬೇಕು. ಜಿಲ್ಲೆಗಳ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

      ರಾಜ್ಯ ಸರ್ಕಾರ ಕೊರೋನಾ ರೋಗ ನಿಯಂತ್ರಿಸಲು ರೂ.200 ಕೋಟಿ ಮೀಸಲಿಟ್ಟಿದೆ ಎಂದು ಹೇಳಿದೆ. ಇದರಲ್ಲಿ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ ಹಾಗೂ ಎಲ್ಲಾ ಜಿಲ್ಲಾ ಕೇಂದ್ರದ ಮುಖ್ಯ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ಸೌಲಭ್ಯ ಈ ಕೂಡಲೇ ಕಲ್ಪಿಸಬೇಕು. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಬರ, ಪ್ರವಾಹ, ವ್ಯಾಪಾರ ವಹಿವಾಟು ಸ್ಥಗಿತದಿಂದ ಈಗಾಗಲೇ ಜನ ನೊಂದಿದ್ದಾರೆ, ಕೊರೋನಾ ಅವರ ಬದುಕು ಕಸಿಯದಿರಲಿ ಎಂದು ಹೇಳಿರುವ ಸಿದ್ದರಾಮಯ್ಯ, ಬಹುಪಾಲು ಜಿಲ್ಲೆಗಳಲ್ಲಿ ಕಂಟ್ರೋಲ್ ರೂಂಗಳನ್ನೆ ಇನ್ನೂ ಪ್ರಾರಂಭಿಸಿಲ್ಲ.ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೀಡುವ ಪೌಷ್ಟಿಕ ಆಹಾರದ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಜೀವನಾವಶ್ಯಕ ವಸ್ತುಗಳ ಮಾರಾಟ ಕುರಿತು ನೀಡಬೇಕಾದ ಪಾಸ್ ಗಳ ಕುರಿತು ಜಿಲ್ಲೆಗಳಲ್ಲಿ‌ ಸ್ಪಷ್ಟತೆ ಇಲ್ಲ.ಬೆಂಗಳೂರಿನಲ್ಲೆ ಡಿಸಿ ಕಛೇರಿಯಲ್ಲಿ ಪಾಸ್ ವಿತರಿಸುವ ವ್ಯವಸ್ಥೆ ಮಾಡಲಾಗಿದೆ .ಆದರೆ ಅಲ್ಲಿಯವರೆಗೆ ಬಡವ್ಯಾಪಾರಿಯೊಬ್ಬ ಹೋಗಲಾಗುವುದಿಲ್ಲ.

     ಹೀಗಾಗಿ  ಕನಿಷ್ಟ ಎಸಿಪಿ ಗೆ ಈ ಅಧಿಕಾರ ವರ್ಗಾಯಿಸಬೇಕು. ಸರ್ಕಾರದ ಆದೇಶಕ್ಕಾಗಿ ಕಾಯದೆ ಸ್ವಯಂಪ್ರೇರಿತರಾಗಿ ಸ್ವಯಂದಿಗ್ಭಂಧನಕ್ಕೊಳಗಾಗಿ ಇನ್ನು ಕೆಲವು ದಿನ‌ ಜನತೆಯ ದಿನಚರಿಯಾಗಲಿ. ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳು ನಮ್ಮ ಜೀವನ ವಿಧಾನವಾಗಲಿ ಎಂದು ಸಲಹೆ ನೀಡಿದ್ದಾರೆ.

     ಕರೊನಾ ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡೋಣ. ಬಂದ್, ಕರ್ಫ್ಯೂ, ಲಾಕ್‌ಡೌನ್‌ಗಳ ಜೊತೆಗೆ ಈ ಎಲ್ಲ ಆದೇಶಗಳನ್ನು ಸ್ವಯಂಪ್ರೇರಿತರಾಗಿ ಪಾಲಿಸುತ್ತಿರುವ ಜನತೆಯ ಕಡೆ ರಾಜ್ಯ ಸರ್ಕಾರ ಗಮನಕೊಡಬೇಕು.ವೈದ್ಯಕೀಯ ಕ್ಷೇತ್ರ ನಮ್ಮ ರಾಜ್ಯದ ದೊಡ್ಡ ಶಕ್ತಿ. ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಮತ್ತಿತರ ಅರೆವೈದ್ಯಕೀಯ ತರಬೇತಿ ಕಾಲೇಜುಗಳು ನಮ್ಮಲ್ಲಿಯೇ ಹೆಚ್ಚು. ಈ ಕಾಲೇಜುಗಳ ಹಿರಿಯ ವಿದ್ಯಾರ್ಥಿಗಳನ್ನು ಕೊರೊನಾ ವಿರುದ್ದದ ಸಮರಕ್ಕೆ ಬಳಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡಬೇಕು. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾಗಿರುವ‌ ಮತ್ತು ಆ ಇಲಾಖೆಯಲ್ಲಿ ಕೆಲಸ ಮಾಡಿ ಈಗ ಬೇರೆ ಇಲಾಖೆಗಳಲ್ಲಿರುವ ಅಧಿಕಾರಿಗಳ‌ ಅನುಭವವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು.

       ಪ್ರಕೃತಿ ಭಾರತದ ಪಾಲಿಗೆ ಕರುಣಾಮಯಿಯಾಗಿ, ಕರೋನಾ ಹೆಮ್ಮಾರಿಯನ್ನು ಎದುರಿಸಲು ಸಿದ್ಧತೆ ನಡೆಸಲಿಕ್ಕಾಗಿ ಸಮಯವಕಾಶ ನೀಡಿದೆ. ಈ ಸಮಯವನ್ನು ಮಾತುಗಳಲ್ಲಿಯೇ ವ್ಯರ್ಥಮಾಡದೆ ಸಮರೋಪಾದಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಾಗಬೇಕು.

       ಸಾಮಾನ್ಯ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೋನಾ ಸೋಂಕು ಎದುರಿಸಲು ಕೈಗೊಂಡಿರುವ ಕ್ರಮಗಳು ಮಾದರಿಯಾಗಿವೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಹ ಕೇರಳ ರಾಜ್ಯದ ಕ್ರಮಗಳನ್ನು‌ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಮೂಲಕ‌ ತಿಳಿಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ